ಬೆಳಗಾವಿಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಬೈಕ್ ರ‍್ಯಾಲಿ, ಅನುಭವ ಗೋಷ್ಠಿ
ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ
ಬೆಳಗಾವಿಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಭಾನುವಾರ ಯುವ ಘಟಕದಿಂದ ಬೈಕ್ ರ‍್ಯಾಲಿ, ಅನುಭವ ಗೋಷ್ಠಿ ಮೊದಲಾದ ಕಾರ್ಯಕ್ರಮಗಳು ಜರುಗಿದವು.
ಅಖಿಲ ಭಾರತ ವೀರಶೈವ ಮಹಾಸಭೆ, ಜಗಜ್ಯೋತಿ ಬಸವೇಶ್ವರ ಉತ್ಸವ ಸಮಿತಿ, ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ವತಿಯಿಂದ ಬೈಕ್ ರ‍್ಯಾಲಿ ನಡೆಯಿತು. ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಚೇತನ್ ಅಂಗಡಿ ಅರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಬೈಕ್ ರ‍್ಯಾಲಿಗೆ ವಿವಿಧ ಮಠಾಧೀಶರು, ಗಣ್ಯರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮಿಜಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಸಂದೇಶಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವುದರ ಮಹದುದ್ದೇಶದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಮಾತನಾಡಿ, ಯುವ ಜನತೆ ದಾರಿ ತಪ್ಪುತ್ತಿದೆ ಎಂಬ ಆರೋಪವನ್ನು ಬೆಳಗಾವಿಯ ಯುವಕರು ಸುಳ್ಳು ಮಾಡಿದ್ದಾರೆ. ಬೆಳಗಾವಿ ಯುವಕರು ಧರ್ಮದ ದಾರಿಯನ್ನು ಹಿಡಿದಿದ್ದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ್, ಬೆಳಗಾವಿಯ ರೈಲು ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ರೈಲು ನಿಲ್ದಾಣ ಎಂದು ಹೆಸರಿಡುವಂತೆ ಸರಕಾರವನ್ನು ಒತ್ತಾಯಿಸಿದರು. ಶಾಸಕ ಅನೀಲ್ ಬೆನಕೆ ಮಾತನಾಡಿದರು.
ಬೈಕ್ ರ‍್ಯಾಲಿಯು ಕನ್ನಡ ಸಾಹಿತ್ಯ ಭವನದಿಂದ ಪ್ರಾರಂಭವಾಗಿ, ಚೆನ್ನಮ್ಮ ಸರ್ಕಲ್, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ , ಕ್ಯಾಂಪ್, ಖಾನಾಪುರ ರಸ್ತೆ , ಗೋಗಟೆ ಸರ್ಕಲ್, ಬಸವೇಶ್ವರ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಿ ಕನ್ನಡ ಸಾಹಿತ್ಯ ಭವನಕ್ಕೆ ಬಂದು ಕೊನೆಗೊಂಡಿತು.
ಅನುಭವ ಗೋಷ್ಠಿ
ಶರಣರ ವಚನಗಳಲ್ಲಿ ಜೀವನದ ಮೌಲ್ಯ ಅಡಗಿದೆ. ಬದಲಾಗುತ್ತಿರುವ ಇಂದಿನ ಜೀವನಕ್ಕೆ ಅವರ ವಿಚಾರಗಳು ದಿವ್ಯ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಶಿಕ್ಷಣ ಸಂಯೋಜಕಿ ಗೀತಾ ತಿಗಡಿ ಹೇಳಿದರು.
ಅವರು ಬೆಳಗಾವಿಯ ಶಿವಬಸವ ನಗರ ಲಿಂಗಾಯಿತ ಭವನದಲ್ಲಿ ಅನುಭವ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮಗುವಿನ ಬೆಳವಣಿಗೆಯಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಉತ್ತಮವಾದ ಸಂಸ್ಕಾರ ಹಾಗೂ ಕಲಿಕೆ ಪ್ರತಿಫಲವಾಗಿ ಒಳ್ಳೆಯ ನಾಗರಿಕನಾಗಲು ಸಾಧ್ಯ. ಇಂದು ವಿಧ್ವಂಸಕ ಕೃತ್ಯಗಳು ಜರುಗುತ್ತಿವೆ ನೈತಿಕ ಶಿಕ್ಷಣದ ಕೊರತೆ ದುಶ್ ಪ್ರತಿಫಲಗಳ ಪರಿಣಾಮ ಇವೆಲ್ಲವುಗಳನ್ನು ಅನುಭವಿಸಬೇಕಾಗಿದೆ. ೧೨ನೇ ಶತಮಾನದ ಶರಣರು ಮನುಷ್ಯ ಉತ್ತಮವಾಗಿ ಬದುಕುವ ಮಾರ್ಗಗಳನ್ನು ರೂಪಿಸಿದರು. ಮೌಲ್ಯವಾದ ಜೀವನಕ್ಕೆ ಒಂದು ವ್ಯಾಖ್ಯಾನವನ್ನು ಬರೆದರು. ಅವರ ವಚನಗಳನ್ನು ತೆರೆದ ಕಣ್ಣಿನಿಂದ ನೋಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷೀಯ ನುಡಿಗಳನ್ನಾಡಿ ಮಹಾಸಭೆ ಕಾಯಕ ಕಟ್ಟೆ ಎಂಬ ನೂತನ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು ಮಹಿಳೆಯರು ತಾವು ಸಿದ್ದಪಡಿಸಿದ ಉಡುಗೆ-ತೊಡುಗೆ ವಸ್ತುಗಳನ್ನು ಮುಕ್ತವಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ತ್ರೀಯರ ಸ್ವಾವಲಂಬಿ ಬದುಕಿಗೆ ಕಾಯಕ ಕಟ್ಟೆ ವೇದಿಕೆ ಕಲ್ಪಿಸಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಜಿಯವರ ಆಶೀರ್ವಚನ ನೀಡುತ್ತಾ ಮುಕ್ತವಾದ ಮಕ್ಕಳ ಮನಸ್ಸಿನ ಮೇಲೆ ಹೂಗಳನ್ನು ಅರಳಿಸುವ ಕಾರ್ಯ ನಡೆಯಬೇಕಾಗಿದೆ. ಸತ್ಸಂಗ ಕಾರ್ಯಕ್ರಮ ಅಂತಹ ವಾತಾವರಣವನ್ನು ಉಂಟು ಮಾಡಿದೆ. ದಯೆ ಕರುಣೆ ಸ್ವಾರ್ಥ ತ್ಯಾಗಗಳು ಮಾತ್ರ ಈ ವಿಶ್ವವನ್ನು ಜೀವಂತವಾಗಿಡುತ್ತವೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಶಾಪುರದ ದುರ್ಗಾಮಾತಾ ಸಂಗೀತ ಶಾಲೆ ಸಾವಿತ್ರಿ ಕಗ್ಗನಿಗೀಮಠ ಮತ್ತು ವಿದ್ಯಾರ್ಥಿಗಳು ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿದರು. ಸುನಿತಾ ದೇಸಾಯಿ ನಿರೂಪಿಸಿದರು. ಶ್ರೀಮತಿ ಸಂಸುದ್ದಿ ವಂದಿಸಿದರು.
ರಮೇಶ್ ಕಲಸನ್ನವರ್, ಎಬಿ ಕೊರಬು, ಡಾ. ಗುರುದೇವಿ ಹುಲೆಪ್ಪನವರಮಠ, ವಿ.ಕೆ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಬಸವಣ್ಣನವರು ಸಮಾನತೆಯ ಹರಿಕಾರರು : ಸಂಸದೆ ಮಂಗಲಾ ಸುರೇಶ ಅಂಗಡಿ
ಬಿಜೆಪಿ ನಾಯಕರಿಗೆ ತಲ್ಲಣ ಮೂಡಿಸಿದ ಬಿ.ಎಲ್.ಸಂತೋಷ್ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ