
ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಜನತೆಗೆ ವಿದ್ಯುತ್ ಇಲಾಖೆ ಶಾಕ್ ನೀಡಿದೆ. ವಿದ್ಯುತ್ ಬಿಲ್ ೩ ತಿಂಗಳಿಗೆ ೭ ಪಟ್ಟು ಹೆಚ್ಚಳವಾಗಿದೆ. ಜನತೆಗೆ ವಿದ್ಯುತ್ ಇಲಾಖೆ ಮೂರು ತಿಂಗಳ ಬಿಲ್ ಒಮ್ಮೆಲೆ ಕೈಗೆ ಕೊಟ್ಟು ದೊಡ್ಡ ಶಾಕ್ ನೀಡಿದೆ.
ಈ ಹಿಂದೆ ಪ್ರತಿ ತಿಂಗಳು ೨೦೦-೩೦೦ರೂ. ವರೆಗೂ ಬರುತ್ತಿದ್ದ ವಿದ್ಯುತ್ ಬಿಲ್ ಒಂದೇ ಸಾರಿ ೨,೦೦೦ ರೂ. ಗಡಿ ದಾಟಿದೆ. ಹೀಗಾಗಿ ಕೂಲಿಕಾರರು ಈ ಬಿಲ್ ಹೇಗೆ ತುಂಬುವುದು ಎಂಬ ಚಿಂತೆಗೆ ಬಿದ್ದಿದ್ದಾರೆ. ಕೂಲಿ ಕೆಲಸ ಇಲ್ಲದೆ ಪರದಾಡುತ್ತಿದ್ದ ಜನ ಮೂರು ತಿಂಗಳ ಬಿಲ್ ಹೇಗೆ ತುಂಬುವುದು ಎಂದು ಚಿಂತೆಗೀಡಾಗಿದ್ದಾರೆ.
೩ ತಿಂಗಳೊಳಗೆ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತ ಮಾಡುವುದಾಗಿ ವಿದ್ಯುತ್ ಸರಬರಾಜು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಎಚ್ಚರಿಕೆ ಕೂಡ ನೀಡಿದ್ದಾರೆ. ಇದು ಜನತೆಯನ್ನು ಇನ್ನಷ್ಟು ಕಂಗೆಡಿಸಿದೆ. ವಿದ್ಯುತ್ ಬಿಲ್, ಹೆಸ್ಕಾಂ ಧಮಕಿಗೆ ಜನರಲ್ಲಿ ಭೀತಿ ಮೂಡಿದೆ.
ಫೆಬ್ರುವರಿಯಲ್ಲಿ ಪ್ರತಿ ಮನೆಗೆ ಡಿಜಿಟಲ್ ಮೀಟರ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಹೆಚ್ಚಿನ ವಿದ್ಯುತ್ ಬಿಲ್ಲು ವಸೂಲಿ ಮಾಡಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.
ಹೆಸ್ಕಾಂ ಸಮಸ್ಯೆ, ಸಿಬ್ಬಂದಿ ಕಾರ್ಯ ವೈಫಲ್ಯದ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಹೆಸ್ಕಾಂ ಕಾರ್ಯಾಲಯದ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ