*ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು: ನಕಲಿ ನರ್ಸ್ ಳಿಂದ ರೋಗಿಗಳಿಗೆ ಚಿಕಿತ್ಸೆ?*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬಯಲಾಗಿದೆ. ನಕಲಿ ನರ್ಸ್ ವೊಬ್ಬಳು ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ನರ್ಸ್ ವೇಷದಲ್ಲಿ ಯುವತಿಯೊಬ್ಬಳು ಆಸ್ಪತ್ರೆಯ ಸರ್ಜಿಕಲ್ ವಾರ್ಡ್ ಒಟಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರು ದೃಶ್ಯ ವೈರಲ್ ಆಗಿದೆ. ಅಕ್ರಮವಾಗಿ ಯುವತಿ ನರ್ಸ್ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಳೆ. ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಾಗಲೇ ಯುವತಿ ಸಿಕ್ಕಿಬಿದ್ದಿದ್ದಾಳೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಸನಾ ಶೇಖ್ ಎಂಬ ಯುವತಿ ಬಿಮ್ಸ್ ಆಸ್ಪತ್ರೆಯ ವಿಭಾಗವೊಂದರ ಮುಖ್ಯಸ್ಥರ ಕುಮ್ಮಕ್ಕಿನಿಂದ ನರ್ಸ್ ವೇಷದಲ್ಲಿ ಚಿಕಿತ್ಸೆ ಕೊಡುತ್ತಿದ್ದು, ಈ ಬಗ್ಗೆ ಆಡಳಿತಮಂಡಳಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಲಾಗಿದೆ. ವಿಭಾಗದ ಮುಖ್ಯಸ್ಥರು ತಮಗೆ ಬೇಕಾದ ರೋಗಿಗಳನ್ನು ಕರೆತಂದು ನಕಲಿ ನರ್ಸ್ ಮೂಲಕ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ನರ್ಸ್ ವೇಷದಲ್ಲಿ ಯುವತಿ ಸನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಯುವತಿಯನ್ನು ಬಿಮ್ಸ್ ನಿರ್ದೇಶಕರು, ಸರ್ಜನ್ ವಿಚಾರಣೆ ನಡೆಸಿದ್ದು, ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.