*ಬಿಮ್ಸ್ ಪ್ರಗತಿ ಪರಿಶೀಲನಾ ಸಭೆ; 450 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ*
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಸಲಕರಣೆಗಳ ಖರೀದಿಗೆ ಅನುದಾನ ಬಿಡುಗಡೆ: ಸಚಿವ ಡಾ. ಶರಣಪ್ರಕಾಶ ಪಾಟೀಲ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಗರದಲ್ಲಿ ನಿರ್ಮಾಣವಾದ ೨೫೦ ಬೆಡ್ ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಹಾಗೂ ಪೀಠೋಪಕರಣ, ಇನ್ನಿತರ ವೈದಕೀಯ ಸಕರಣೆಗಳ ಖರೀದಿಗೆ ಸದ್ಯದಲ್ಲೇ ಅನುದಾನ ಬಿಡುಗಡೆಗೆ ಸೂಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಭರವಸೆ ನೀಡಿದರು.
ನಗರದ ಬಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ (ನ.೦೪) ನಡೆದ ಬಿಮ್ಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೪೫೦ ಹಾಸಿಗೆಗಳ ಆಸ್ಪತ್ರೆ-ಪ್ರಸ್ತಾವನೆಗೆ ನಿರ್ದೇಶನ:
ಸುಮಾರು ೧೫೦ ವರ್ಷಗಳ ಹಿಂದೆ ಜಿಲ್ಲಾಸ್ಪತ್ರೆ ನಿರ್ಮಾಣವಾಗಿದೆ. ಹಳೆ ಕಟ್ಟಡ ಇರುವುದರಂದ ಈಗಾಗಲೇ ಸಾಕಷ್ಟು ದುರಸ್ತಿ ಕಾಮಗಾರಿಗಳು ಬಾಕಿ ಇವೆ. ಜಿಲ್ಲೆಯ ಎಲ್ಲ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಿದ್ದು, ಬೆಡ್ ಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಗರದಲ್ಲಿ ಸ್ಥಳ ಗುರುತಿಸಿ ೪೫೦ ಬೆಡ್ ಗಳ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಇಲಾಖೆ ಸಚಿವರಿಗೆ ತಿಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೪೫೦ ಬೆಡ್ ಗಳ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿ, ಕೂಡಲೇ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಹಾಗೂ ಅಂದಾಜು ವೆಚ್ಚದ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಆಸ್ಪತ್ರೆಯ ವಿವಿಧ ಕಾಮಗಾರಿಗಳಿಗೆ ಈಗಾಗಲೇ ಸಾಕಷ್ಟು ಅನುದಾನ ಬಂದಿದೆ ಆದರೆ ಅಧಿಕಾರಿಗಳು ಬಳಕೆ ಮಾಡುತ್ತಿಲ್ಲ. ವಿನಾಕಾರಣ ನೆಪವೊಡ್ಡದೆ ನಿಗದಿತ ಅವಧಿಯೊಳಗೆ ಅನುದಾನದ ಸಮರ್ಪಕ ಬಳಕೆಯಾಗಬೇಕು ಎಂದು ಪ್ರಕಾಶ ಹುಕ್ಕೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಯಿ-ಮಕ್ಕಳ ಆಸ್ಪತ್ರೆಗೆ ಬೇಡಿಕೆ:
ಚಿಕ್ಕೋಡಿಯಲ್ಲಿ ಬಹುದಿನಗಳಿಂದ ತಾಯಿ-ಮಕ್ಕಳ ಆಸ್ಪತ್ರೆಗೆ ಸಾರ್ವಜನಿಕರ ಬೇಡಿಕೆಯಿದೆ. ಸಂಭಂದಿಸಿದ ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಸ್ಥಳೀಯ ರೋಗಿಗಳು ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಲಾಪುರ-ಸಾಂಗ್ಲಿಗೆ ಹೋಗುತ್ತಿದ್ದಾರೆ.
ಸವದತ್ತಿ, ನಿಪ್ಪಾಣಿ, ಚಿಕ್ಕೋಡಿಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ೨೦೧೭ ರಲ್ಲಿ ಅನುಮೋದನೆ ಸಿಕ್ಕಿದ್ದು, ಅನುದಾನ ಕೂಡ ನೀಡಲಾಗಿದೆ. ಆದರೆ ಈವರೆಗೂ ಚಿಕ್ಕೋಡಿಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿಲ್ಲ. ಅಧಿಕಾರಿಗಳು ಅನಗತ್ಯ
ಕಾರಣಗಳನ್ನು ಹೇಳುತ್ತಿದ್ದಾರೆ. ಕೂಡಲೇ ಹೊಸ ಟೆಂಡರ್ ಕರೆದು ಆಸ್ಪತ್ರೆ ನಿರ್ಮಾಣದ ಕಾಮಗಾರಿ ಪ್ರಾರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಸಭೆಯಲ್ಲಿ ಒತ್ತಾಯಿಸಿದರು.
ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ:
ಬಿಮ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಹಾಜರಾತಿ ಹಾಗೂ ಪ್ರತಿ ತಿಂಗಳು ಸಿಸಿ ಟಿವಿ, ಬಯೋಮೆಟ್ರಿಕ್ ನಿರಂತರ ತಪಾಸಣೆ ಮಾಡಿದ ಬಳಿಕ ಸಿಬ್ಬಂದಿಗಳ ವೇತನ ಪಾವತಿಸಬೇಕು. ಅದೇ ರೀತಿಯಲ್ಲಿ ಸಿಬ್ಬಂದಿಗಳ ಇ.ಎಸ್.ಐ- ಪಿ.ಎಫ್ ಕಡಿತಗೊಳಿಸಿರುವ ಕುರಿತು ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಬಿಮ್ಸ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ್ ಶೆಟ್ಟಿ, ಪ್ರಾಂಶುಪಾಲರು ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅಣ್ಣಾಸಾಹೇಬ್ ಬಿ ಪಾಟೀಲ, ಬಿಮ್ಸ್ ಸಿಎಒ ಡಾ. ಸಿದ್ದು ಹುಲ್ಲೊಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ವಿಠ್ಠಲ ಶಿಂಧೆ, ಬಿಮ್ಸ್ ಆರ್.ಎಂ.ಓ ಡಾ. ಸರೋಜಾ ತಿಗಡಿ, ಬಿಮ್ಸ್ ವಿವಿಧ ವಿಭಾಗಗಳ ಪ್ರಾಂಶುಪಾಲರಾದ ನಾಮದೇವ ಮಾಳಗಿ, ಪ್ರಕಾಶ್ ಕೊಡ್ಲಿ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ