ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಲಕ್ಷಾಂತರ ಜನರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವ ಸರಕಾರದ ಅಧೀನ ಸಂಸ್ಥೆಯಾಗಿರುವ ಬೆಳಗಾವಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್ (ಬೀಮ್ಸ್) ಗೆ ನೂತನ ಉಪಕರಣಗಳನ್ನು ಕೊಂಡುಕೊಳ್ಳಲು ಹಾಗೂ ಸಿವಿಲ್ ಕಾಮಗಾರಿಯನ್ನು ಕೈಗೊಳ್ಳಲು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ತಮ್ಮ ಜೊಲ್ಲೆ ಉದ್ಯೋಗ ಸಮೂಹದ ಬಿರೇಶ್ವರ ಕೋ-ಆಪ್ ಸೊಸೈಟಿ ಲಿ (ಬಹುರಾಜ್ಯ) ವತಿಯಿಂದ 10 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಸಚಿವರು, ಬೀಮ್ಸ್ ಆರೋಗ್ಯ ಸಂಸ್ಥೆಯಿಂದ ನಮ್ಮ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ಈ ಸಂಸ್ಥೆಯ ವತಿಯಿಂದ ಇನ್ನಷ್ಟು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ತಿಂಗಳು ಮಾನ್ಯ ಚಿಕ್ಕೋಡಿ ಸಂಸದರಾದ ಅಣ್ಣಸಾಹೇಬ್ ಜೊಲ್ಲೆ ಅವರ ಉಪಸ್ಥಿತಿಯಲ್ಲಿ ಬೀಮ್ಸ್ ಗೆ ಭೇಟಿ ನೀಡಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಡೀನ್ ಆಸ್ಪತ್ರೆಗೆ ಅಗತ್ಯವಿರುವ ಹಲವಾರು ಉಪಕರಣಗಳು ಹಾಗೂ ಸಿವಿಲ್ ಕಾರ್ಯಗಳ ಬಗ್ಗೆ ನಮ್ಮ ಗಮನ ಸೆಳೆದರು. ಇದಕ್ಕೆ ಅಗತ್ಯ ಸಹಾಯ ನೀಡುವ ಉದ್ದೇಶದಿಂದ ಡೀನ್ ಅವರಿಂದ ಅಗತ್ಯ ಪರಿಕರಗಳ ಪಟ್ಟಿಯನ್ನು ಪಡೆದುಕೊಂಡಿದ್ದೇವೆ. ನಮ್ಮ ಜೊಲ್ಲೆ ಉದ್ಯೋಗ ಸಮೂಹದ ಶ್ರೀ ಬಿರೇಶ್ವರ ಕೋ-ಆಪ್ ಸೊಸೈಟಿ ಲಿ (ಬಹುರಾಜ್ಯ) ವತಿಯಿಂದ 10 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಲು ನಿರ್ಧರಿಸಲಾಯಿತು. ಇಂದು ಆಸ್ಪತ್ರೆಯ ಡೀನ್ ಅವರಿಗೆ ಚೆಕ್ ನ್ನು ಹಸ್ತಾಂತರಿಸಿದ್ದೇವೆ ಎಂದು ಹೇಳಿದರು.
ಬೀಮ್ಸ್ ಆಸ್ಪತ್ರೆಯ ಆಡಳಿತಾಧಿಕಾರಿ ಅಮ್ಲಾನ್ ಆದಿತ್ಯ ಬಿಶ್ವಾಸ್ ಮಾತನಾಡಿ, ಸಚಿವರು ಹಾಗೂ ಸಂಸದರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿಗಳ ಹಣವನ್ನು ನೀಡಿರುವುದು ಬಹಳ ಸಂತಸದ ವಿಷಯವಾಗಿದೆ. ಇಂತಹ ಸಹಾಯಧನಗಳಿಂದ ನಾವು ಸಂಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಇದರಿಂದ ಇನ್ನಷ್ಟು ಹೆಚ್ಚಿನ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬೀಮ್ಸ್ ಡೀನ್ ಡಾ. ಆರ್ ಜಿ ವಿವೇಕಿ, ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಸಿಯಿದಾ ಬಳ್ಳಾರಿ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಎ ಬಿ ಪಾಟೀಲ್ ಉಪಸ್ಥಿತರಿದ್ದರು.
23ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ