
ಪ್ರಗತಿವಾಹಿನಿ ಸುದ್ದಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಪಕ್ಷಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಾನ್ವಿ ತಾಲೂಕಿನ ಹಲವೆಡೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಪಕ್ಷಿಗಳು ಸಾವನ್ನಪ್ಪುತ್ತಿವೆ. ಮರಗಳಿಂದ ಬಿದ್ದು ಹಲವು ಪಕ್ಷಿಗಳು ರಸ್ತೆ, ತೋಟಗಳಲ್ಲಿ ಸಾವನ್ನಪ್ಪಿವೆ.
ಮಕ್ಸೂದ್ ಅಲಿ ಎಂಬುವವರ ತೋಟದಲ್ಲಿ 8-10 ಪಕ್ಷಿಗಳು ಸಾವನ್ನಪ್ಪಿವೆ. ಪಾರಿವಾಳ, ಕಾಗೆ, ಸುವರ್ಣಪಕ್ಷಿ, ಕೊಕ್ಕರೆ, ಕಿಂಗಫಿಶರ್ ಹೀಗೆ ವಿವಿಧ ಬಗೆಯ ಪಕ್ಷಿಗಳು ಮೃತಪಟ್ಟಿದ್ದು, ಪಕ್ಷಿಗಳ ಸಾವಿಗೆ ಕಾರಣ ತಿಳಿದುಬಂದಿಲ್ಲ.
ಪಶುವೈದ್ಯರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕಣ್ಮುಂದೆಯೇ ಇದ್ದಕ್ಕಿದ್ದಂತೆ ಬಿದ್ದು ಒದ್ದಾಡುತ್ತಿರುವ ಹಲವು ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೆ ತೆಲಂಗಾಣ ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ರಾಜ್ಯಕ್ಕೂ ಕಾಲಿಟ್ಟಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇದರಿಂದಾಗಿಯೇ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪುತ್ತಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ವೈದ್ಯಕೀಯ ವರದಿ ಬಳಿಕವಷ್ಟೇ ಪಕ್ಷಿಗಳ ಸಾವಿನ ಬಗ್ಗೆ ನಿಖರತೆ ಗೊತ್ತಾಗಲಿದೆ.