ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಬಿಟ್ ಕಾಯಿನ್ ಪ್ರಕರಣ ಸಿಎಂ ಬೊಮ್ಮಾಯಿ ಅವರನ್ನು ಬಲಿ ಪಡೆಯಲಿದೆ. ಸೂಕ್ತ ತನಿಖೆ ನಡೆದ ಸರ್ಕಾದಲ್ಲಿರುವ ಪ್ರಮುಖರ ಹೆಸರು ಹೊರಬರಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ. ಬೇರೆ ಪಕ್ಷದವರು ಭಾಗಿಯಾಗಿದ್ದರೆ ತನಿಖೆ ಮಾಡಲಿ. ತನಿಖೆ ನಡೆದರೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿದೆ. ಬರಿ ಬಾಯಿ ಮಾತಿನಲ್ಲಿ ತನಿಖೆಗೆ ಆದೇಶಿಸಿದ್ದೀವಿ ಎಂದು ಹೇಳಿಕೆಕೊಡುತ್ತಿದ್ದಾರೆ. ಇದು ಅಂತರಾಷ್ಟ್ರೀಯ ಮಟ್ಟದ ಹಗರಣ. ಆರೋಪಿ ಶ್ರೀಕಿ ಅಲಿಯಾಸ್ ಹ್ಯಾಕರ್ ಶ್ರೀಕೃಷ್ಣನನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಉನ್ನತಮಟ್ಟದ ಸಮಿತಿಗೆ ವಹಿಸಲು ವಿಳಂಬ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.
ಬಿಟ್ ಕಾಯಿನ್ ಕೇಸ್ ನಲ್ಲಿಯೂ ಬಿಜೆಪಿಯವರು ಲಂಚ ಪಡೆದಿದ್ದಾರೆ. ಬಿಜೆಪಿ ನಾಯಕರು ಕ್ರಿಸ್ಪೋ ಕರೆನ್ಸಿಯಲ್ಲಿ ಲಂಚ ತೆಗೆದುಕೊಂಡಿದ್ದಾರೆ. ಡ್ರಗ್ಸ್ ಕೇಸ್ ಸೇರಿ ಎಲ್ಲಾ ಪ್ರಕರಣಗಲನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಸೂಕ್ತವಾಗಿ ತನಿಖೆ ನಡೆದರೆ ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ. ಈ ಬಾರಿಯೂ ರಾಜ್ಯದಲ್ಲಿ ನಾವು ಬಿಜೆಪಿಯ ಮೂರನೇ ಮುಖ್ಯಮಂತ್ರಿಯನ್ನು ನೋಡುತ್ತೇವೆ ಎಂದರು.
ಇದೇ ವೇಳೆ ಗೃಹ ಇಲಾಖೆ ವಿರುದ್ಧವೂ ಕಿಡಿಕಾರಿದ ಖರ್ಗೆ, ರಾಜ್ಯದಲ್ಲಿ ಜೂಜು, ಗಾಂಜಾ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಣ ಮಾಡುವ ಬದಲು ಸಾಮಾನ್ಯ ಜನರ ಮೇಲೆ ದಂಡ ಹೇರಿ ವಸೂಲಿ ಮಾಡಿ ತೊಂದರೆ ಕೊಡಲಾಗುತ್ತಿದೆ. ಕೇವಲ ದಂಡದಿಂದಲೇ 701 ಕೋಟಿ ಹಣ ಸಂಗ್ರಹವಾಗಿದೆ. ಬಾರ್ ಗಳಿಂದ 5 ಸಾವಿರ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಗೃಹ ಇಲಾಖೆಯನ್ನು ವಸೂಲಿ ಇಲಾಖೆ ಎಂದು ಹೆಸರು ಬದಲಿಸುವುದು ಉತ್ತಮ. ಗಾಂಜಾ ಸಾಗಾಟ ಪಡಿತರ ಹಂಚಿಕೆಗಿಂತ ಸುಲಭವಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಗಾಂಜಾ ಸುಲಭವಾಗಿ ಸಿಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಟ್ ಕಾಯಿನ್, ಹ್ಯಾಕಿಂಗ್ ಬಗ್ಗೆ ಆರೋಪಿ ಶ್ರೀಕಿ ಬಾಯ್ಬಿಟ್ಟ ಸತ್ಯವೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ