ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಟ್ ಕಾಯಿನ್ ಹಗರಣದ ಬಗ್ಗೆ ಮರುತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಹಗರಣವನ್ನು ಮರುತನಿಖೆ ನಡೆಸಲು ಈಗಾಗಲೆ ಆದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸಿಐಡಿ ಅಡಿಯಲ್ಲಿ ಎಸ್ ಐ ಟಿ ರಚನೆ ಕೂಡ ಮಾಡಲಾಗಿದೆ ಎಂದರು. ಕರ್ಭೀಕರ್ ನೇತೃತ್ವದಲ್ಲಿ ಎಸ್ ಐ ಟಿ ರಚನೆಯಾಗಿದೆ.
ಟೆಕ್ನಿಕಲ್, ಅಂತರಾಜ್ಯ, ಅಂತರಾಷ್ಟ್ರೀಯ ವಿಚಾರಗಳಿರುವುದರಿಂದ ನಿಗದಿತ ಸಮಯದಲ್ಲಿ ತನಿಖೆ ಮುಗಿಯಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ 2022ರಲ್ಲಿ ಬೆಂಗಳೂರಿನ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಅರೋಪಿ ಅಂತರಾಷ್ತ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ್ದರು. ಆರೋಪಿ ರಾಜ್ಯ ಸರ್ಕಾರದ ಇ ಸಂಗ್ರಹಣಾ ಪೋರ್ಟಲ್ ಹ್ಯಾಕ್ ಮಾಡಿ 46 ಕೋಟಿ ದೋಚಿದ್ದ ಸಂಗತಿ ಬಯಲಾಗಿತ್ತು. ಹಗರಣದಲ್ಲಿ ರಾಜಕೀಯ ನಾಯಕರು ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ