*ಮೈಸೂರು ಕಾಂಗ್ರೆಸ್ ಕಚೇರಿ ಬಳಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ*
ಪ್ರಗತಿವಾಹಿನಿ ಸುದ್ದಿ, ಮೈಸೂರು: ರಾಜ್ಯದ ಜನರ ನೋವು, ಸಂಕಷ್ಟ ಆಲಿಸಿ ಅವರ ಅಭಿಪ್ರಾಯ ಸಂಗ್ರಹಿಸಿ ಪರಿಹಾರ ನೀಡಲು ಕಾಂಗ್ರೆಸ್ ಎಲ್ಲ ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತಿದೆ. ಇದಾದ ನಂತರ ಫೆ. 3 ರಿಂದ ತಾಲೂಕು ಮಟ್ಟದ ಯಾತ್ರೆ ನಡೆಯಲಿದೆ. ನಾನು ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಾಗೂ ಸಿದ್ದರಾಮಯ್ಯನವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ನಂತರ ನಾನು ಉತ್ತರ ಕರ್ನಾಟಕ ಭಾಗಕ್ಕೆ ಹೋದರೆ, ಸಿದ್ದರಾಮಯ್ಯನವರು ದಕ್ಷಿಣ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ.
ಕಾಂಗ್ರೆಸ್ ಅಧಿಕಾರದ ಹಗಲುಗನಸು ಕಾಣುತ್ತಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, ‘ಬಿಜೆಪಿಯವರು ಏನು ಬೇಕಾದರೂ ಹೇಳಿಕೊಳ್ಳಲಿ. ಅವರು ಮೂರೂವರೆ ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅಧಿಕಾರದಲ್ಲಿದ್ದಾಗ ತಾವೆಷ್ಟು ಸಂತೋಷದಿಂದ ಅದನ್ನು ಅನುಭವಿಸಿದೆವು ಎಂಬುದಕ್ಕಿಂತ, ಅಧಿಕಾರದಲ್ಲಿದ್ದಾಗ ಜನರನ್ನು ಎಷ್ಟು ಸಂತೋಷವಾಗಿ ಇಟ್ಟೆವು ಎಂಬುದು ಮುಖ್ಯ.
ನಾವು ಹೆಚ್ಚಿನ ಪ್ರಚಾರ ಮಾಡದಿದ್ದರೂ, ದೊಡ್ಡ ನಾಯಕರನ್ನು ಕರೆಸದಿದ್ದರೂ, ನಮ್ಮ ಯಾತ್ರೆಗಳಿಗೆ ಜನ ಯಾವ ರೀತಿ ಉತ್ಸಾಹದಿಂದ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಪಕ್ಷ, ಜಾತಿ, ಧರ್ಮ ಬೇಧ ಬಿಟ್ಟು ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ’ ಎಂದರು.
ಪ್ರಧಾನಿಗಳು ಹದಿನೈದು ದಿನಕ್ಕೊಮ್ಮೆ ರಾಜ್ಯ ಪ್ರವಾಸ ಮಾಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅಮಿತ್ ಶಾ ಅವರು ಆರಂಭದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಚುನಾವಣೆ ಎದುರಿಸುತ್ತೇವೆ ಎಂದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಂದರೆ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ರಾಜ್ಯದ ನಾಯಕತ್ವ ವಿಫಲವಾಗಿದೆ ಎಂಬುದು ಸಾಬೀತಾದಂತಾಯಿತು.
ಮೋದಿ ಅವರು 15 ದಿನಕ್ಕೊಮ್ಮೆಯಾದರೂ ಬರಲಿ, ಏನಾದರೂ ಮಾಡಲಿ. ಅವರು ನಮ್ಮ ಜನ ಪ್ರವಾಹ, ಕೋವಿಡ್ ಸಮಯದಲ್ಲಿ ಕಷ್ಟ ಅನುಭವಿಸಿದಾಗ ಬಂದು ಸ್ಪಂದಿಸಲಿಲ್ಲ. ಇಂದು ಮತಕ್ಕಾಗಿ ಬರುತ್ತಿದ್ದಾರೆ. ಯಾರಿಗೆ ವಿಶ್ವಾಸ ನೀಡಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ರಾಜ್ಯದ ಜನ ಪ್ರಜ್ಞಾವಂತರು, ಬುದ್ಧಿವಂತರು. ರಾಜ್ಯಕ್ಕೆ ಸದೃಢ ಆಡಳಿತ ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂಬುದು ಅವರಿಗೆ ಗೊತ್ತಿದೆ’ ಎಂದು ತಿಳಿಸಿದರು.
ಬಿಜೆಪಿ ಹಳೇ ಮೈಸೂರು ಭಾಗದ ಮೇಲೆ ಹೆಚ್ಚು ಗಮನಹರಿಸುತ್ತಿರುವ ಹಾಗೂ ಆಪರೇಷನ್ ಕಮಲದ ಸಿದ್ಧತೆ ಬಗ್ಗೆ ಕೇಳಿದಾಗ, ‘ಬಿಜೆಪಿ ನಾಯಕರ ಹೇಳಿಕೆಗಳನ್ನು ನೋಡಿ. ಮಾಜಿ ಮಂತ್ರಿಗಳು ನಾವು ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಹಣ ವೆಚ್ಚ ಮಾಡಿಯಾದರೂ ನಾವು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಅವರು ಚುನಾವಣೆಗೂ ಮುನ್ನವೇ ಸೋಲು ಒಪ್ಪಿಕೊಂಡಿದ್ದು, ಅವರಿಗೆ ಅಭಿನಂದನೆಗಳು’ ಎಂದರು.
ಕಾಂಗ್ರೆಸ್ ಪಕ್ಷ ಯಾರ ಪರ, ಯಾವ ಸಮುದಾಯದ ಪರ ನಿಲ್ಲುತ್ತದೆ ಎಂಬ ಪ್ರಶ್ನೆಗೆ, ‘ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ರಾಜಕಾರಣ ಮಾಡುತ್ತೇವೆ’ ಎಂದರು.
ಈ ಬಾರಿ ಚುನಾವಣೆಯ ಪ್ರಮುಖ ವಿಚಾರಗಳೇನು ಎಂದು ಕೇಳಿದಾಗ, ‘ಜನರ ನೋವು, ಸೌಹಾರ್ಧತೆ, ಸಮಾಜದಲ್ಲಿ ಶಾಂತಿ ವಿಚಾರ ಚರ್ಚೆ ಆಗುತ್ತವೆ. ಜಾಗತಿಕ ಬಂಡವಾಳ ಹೂಡಿಕೆಯಲ್ಲಿ 10 ಲಕ್ಷ ಕೋಟಿ ಬಂಡವಾಳ ಬಂದಿದೆ ಎಂದು ಹೇಳುತ್ತಾರೆ. ಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಯಾಕೆ ಬಂಡವಾಳ ಹೂಡಿಕೆ ಮಾಡುತ್ತಿಲ್ಲ? ಬೆಲೆ ಏರಿಕೆ, ಉದ್ಯೋಗ, ರೈತರ ಬೆಂಬಲ ಬೆಲೆ, ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತ ಚರ್ಚೆ ಆಗುತ್ತವೆ.
ರಾಜ್ಯದ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಕಳಂಕ ನಿರ್ಮೂಲನೆ ಮಾಡಿ ಉತ್ತಮ ಆಡಳಿತ ನೀಡುವ ವಿಚಾರ ಚರ್ಚೆ ಮಾಡುತ್ತೇವೆ. ಕಾಂಗ್ರಸ್ ಸರ್ಕಾರದ ಅವಧಿಯಲ್ಲಿ ಎಂದಾದರೂ ನೇಮಕಾತಿ ಅಕ್ರಮ ಹಾಗೂ ಸರ್ಕಾರಿ ಹುದ್ದೆಗಳಿಗೆ ಲಂಚದ ಪಟ್ಟಿ ನಿಗದಿ ಮಾಡಿತ್ತಾ? ಮೈಸೂರು ಸಂಸದರೇ ಉಪಕುಲಪತಿಗಳ ನೇಮಕಕ್ಕೆ 4-5 ಕೋಟಿ ನೀಡಬೇಕು ಎಂದು ಆರೋಪಿಸಿದ್ದಾರೆ. ಇದಕ್ಕಿಂತ ನಾಚಿಕೆಗೇಡು, ನೀಚ ಸರ್ಕಾರ ರಾಜ್ಯದಲ್ಲಿ ಎಂದಿಗೂ ಇರಲಿಲ್ಲ’ ಎಂದು ತಿಳಿಸಿದರು.
ಕಾಂಗ್ರೆಸ್ ಭರವಸೆಗಳ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಅವರು ಅಧಿಕಾರದಲ್ಲಿದ್ದಾಗ ಇಂತಹ ಒಂದು ಯೋಜನೆಯನ್ನೂ ಮಾಡಲಿಲ್ಲ. ಜನರು ಅಧಿಕಾರ ಕೊಟ್ಟರೆ ನಾವು ಇವುಗಳನ್ನು ಸಾಧ್ಯ ಮಾಡಿ ತೋರಿಸುತ್ತೇವೆ. ನಾನು ಇಂಧನ ಸಚಿವನಾಗಿದ್ದವನು, ನನಗೆ ಈ ಯೋಜನೆ ಜಾರಿ ಹೇಗೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರು 12 ಬಾರಿ ಬಜೆಟ್ ಮಂಡಿಸಿದ್ದಾರೆ.
ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿರುವ ಹಣವನ್ನು ಉಳಿಸಿದರೆ ಸಾಕು, ಈ ಎಲ್ಲ ಯೋಜನೆಗಳನ್ನು ಜಾರಿ ಮಾಡಬಹುದು. ಬಿಜೆಪಿಯವರು ಪ್ರತಿ ಮತಕ್ಕೆ 6 ಸಾವಿರ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಉಚಿತ ವಿದ್ಯುತ್ ಮೂಲಕ ತಿಂಗಳಿಗೆ 1500 ರಂತೆ, ವರ್ಷಕ್ಕೆ 18 ಸಾವಿರ, ಮನೆಯೊಡತಿಗೆ ಪ್ರತಿ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ನೀಡಲಾಗುವುದು.
ಆಮೂಲಕ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರ, ಐದು ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚಿನ ಹಣ ಉಳಿತಾಯವಾಗುವಂತೆ ಮಾಡುತ್ತೇವೆ. ಅವರು ಚುನಾವಣೆ ಅಕ್ರಮಕ್ಕೆ ಹಣ ಕೊಟ್ಟರೆ, ನಾವು ಜನರ ಜೇಬಿನ ಹೊರೆ ಇಳಿಸಿ, ಹಣ ಉಳಿತಾಯವಾಗುವಂತೆ ಮಾಡುತ್ತೇವೆ. ಇದು ನಮ್ಮ ಬದ್ಧತೆ, ನೀತಿಯಾಗಿದೆ’ ಎಂದು ಸ್ಪಷ್ಟಪಡಿಸಿದರು.
https://pragati.taskdun.com/distribution-of-gym-and-sports-equipment-to-10-villages-and-schools-of-belagavi-rural-constituency/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ