
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮೇ 19ರಂದು ನಡೆಯಲಿರುವ ರಾಜ್ಯಸಭೆಯ ಕರ್ನಾಟಕದ ನಾಲ್ವರು ಸದಸ್ಯ ಸ್ಥಾನದ ಚುನಾವಣೆಗೆ ಬಿಜೆಪಿ ಭಾನುವಾರ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಡಾ.ಪ್ರಭಾಕರ ಕೋರೆ, ಬಿ.ಕೆ.ಹರಿಪ್ರಸಾದ, ಕುಪ್ಪೆಂದ್ರ ರೆಡ್ಡಿ, ರಾಜೀವ ಗೌಡ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿದೆ.
ಡಾ.ಪ್ರಭಾಕರ ಕೋರೆ ಮೂರನೇ ಬಾರಿಗೆ ಸ್ಪರ್ಧೆಗೆ ಒಲವು ತೋರಿಸಿದ್ದರೆ, ಲೋಕಸಭಾ ಚುನಾವಣೆ ವೇಳೆ ಬಿ.ಎಸ್.ಯಡಿಯೂರಪ್ಪ ಅವರಿಂದ ಆಶ್ವಾಸನೆ ಪಡೆದಿದ್ದ ರಮೇಶ ಕತ್ತಿ ಕೂಡ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ಮಾಜಿ ಸಂಸದ, ವಿಆರ್ ಎಲ್ ಚೇರಮನ್ ವಿಜಯ ಸಂಕೇಶ್ವರ, ಉದ್ಯಮಿಗಳಾದ ಕೆ.ವಿ.ಕಾಮತ್, ಪ್ರಕಾಶ ಶೆಟ್ಟಿ, ನಾಗರಾಜ್ ಕೂಡ ಆಕಾಂಕ್ಷಿಗಳು.
ರಾಜ್ಯದಿಂದ 6ರಲ್ಲಿ ನಾಲ್ವರ ಹೆಸರನ್ನು ಶಿಫಾರಸ್ಸು ಮಾಡಲು ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿದ್ದು, ಕೇಂದ್ರ ಸರಕಾರ ಇವರಲ್ಲಿ ಎರಡು ಅಥವಾ ಮೂವರ ಹೆಸರನ್ನು ಅಂತಿಮಗೊಳಿಸಬೇಕಿದೆ. ಬಿಜೆಪಿಯ ಇಬ್ಬರು ಸರಳವಾಗಿ ಆಯ್ಕೆಯಾಗಲಿದ್ದು, ಅನ್ಯ ಪಕ್ಷಗಳ ಮತ ಸೆಳೆದಲ್ಲಿ ಮೂರನೆ ಅಭ್ಯರ್ಥಿ ಗೆಲ್ಲಿಸಬಹುದು.
ರಾಜ್ಯದಿಂದ ಶಿಫಾರಸ್ಸು ಮಾಡಲಾಗಿರುವ ಹೆಸರುಗಳಲ್ಲೇ ಹೈಕಮಾಂಡ್ ಆಯ್ಕೆ ಮಾಡಬಹುದು ಅಥವಾ ಹೈಕಮಾಂಡ್ ಕಣ್ಣಲ್ಲಿ ಬೇರೆ ಅಭ್ಯರ್ಥಿಗಳಿದ್ಜರೂ ಇರಬಹುದು. ಯಾವುದಕ್ಕೂ ಭಾನುವಾರ ಸಂಜೆಯ ಹೊತ್ತಿಗೆ ಸ್ಪಷ್ಟತೆ ಸಿಗಬಹುದು.
ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್ ನ ಹೆಚ್ಚುವರಿ ಮತ ಪಡೆದು ಕಣಕ್ಕಿಳಿಯಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉತ್ಸುಕರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ