
ಪ್ರಗತಿವಾಹಿನಿ ಸುದ್ದಿ: “ಈ ಹಿಂದೆ ಬಿಜೆಪಿಯ ಮುಖ್ಯಮಂತ್ರಿಗಳು ಬೆಂಗಳೂರು ಪ್ರದರ್ಶನ ಹಾಕಿದ್ದು, ಫೋಟೋಶೂಟ್ ಮಾಡಲಿಕ್ಕಾ? ಆಗ ಅಶೋಕ್ ಅವರು ಅವರ ಕಾರಿನಲ್ಲಿ ಕೂತು ಹೋಗುತ್ತಿದ್ದರಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ನಿಮ್ಮ ಬೆಂಗಳೂರು ಸಿಟಿ ರೌಂಡ್ ಅನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಫೋಟೋ ಶೂಟ್ ಎಂದು ಟೀಕಿಸಿರುವ ಬಗ್ಗೆ ಕೇಳಿದಾಗ, “ಬಿಜೆಪಿವರು ಇರುವುದೇ ಟೀಕೆ ಮಾಡಲು. ಬಿಜೆಪಿಗೆ ಬೇರೆ ಏನು ಕೆಲಸ ಇದೆ. ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಇದು ದೊಡ್ಡ ಮೊತ್ತದ ಯೋಜನೆ, ಇದರ ಗುಣಮಟ್ಟ ಸರಿಯಾಗಿದೆಯೇ? ಸಧ್ಯ 150 ಕಿ.ಮೀ ಉದ್ದದ ರಸ್ತೆ ಕಾಮಗಾರಿ ನಡೆಯುತ್ತಿದೆ. 1,700 ಕೋಟಿ ಮೊತ್ತದ ಯೋಜನೆ. ಇದನ್ನು ಕಾಲಮಿತಿಯೊಳಗೆ ಮುಗಿಸುವ ಗುರಿ ಹೊಂದಿದ್ದೇವೆ. ಮುಂದೆಯೂ ಇಂತಹ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಈ ವಿಚಾರವಾಗಿ ಸ್ಥಳೀಯ ಶಾಸಕರ ಅಭಿಪ್ರಾಯ ಏನಿದೆ ಎಂದು ಚರ್ಚೆ ಮಾಡಿದ್ದೇನೆ. ಮತ್ತೆ ಕೆಲವು ಯೋಜನೆ ಕಾಮಗಾರಿ ಆದೇಶ ಆಗಿಲ್ಲ. ಬೆಂಗಳೂರಿನ ರಸ್ತೆಗಳನ್ನು ಸುಧಾರಿಸಲು 600 ಕೋಟಿ ಮೊತ್ತದ ಯೋಜನೆ ಹಮ್ಮಿಕೊಂಡಿದ್ದೇವೆ.
ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ಬೆಂಗಳೂರಿನ ಕೆಲವು ಸಂಚಾರಿ ಯೋಜನೆಗಳ ಬಗ್ಗೆ ಎತ್ತಿರುವ ಪ್ರಶ್ನೆ ಬಗ್ಗೆ ಕೇಳಿದಾಗ, “ಅವರು ಏನು ಹೇಳಿದ್ದಾರೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಒಳ್ಳೆಯ ಸಲಹೆ ಕೊಟ್ಟಿದ್ದರೆ ತೆಗೆದುಕೊಳ್ಳುತ್ತೇವೆ. ರಾಜಕಾರಣ ಇದ್ದರೆ ನಾವು ಅದನ್ನು ನಿಭಾಯಿಸುತ್ತೇವೆ” ಕೆಲವು ತಿಂಗಳಿಂದ ಅನ್ನಭಾಗ್ಯ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಕೇಳಿದಾಗ, “ಮೂರು ತಿಂಗಳಿಂದ ಬಂದಿಲ್ಲ. ಈ ಹಣವನ್ನು ನಾವು ಹಾಕುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ” ಎಂದು ತಿಳಿಸಿದರು.
ಎಐಸಿಸಿಯನ್ನು ನೀವು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ರಾಜಣ್ಣ ಹೇಳಿದ್ದಾರೆ ಎಂದು ಕೇಳಿದಾಗ, “ಈಗ ಚರ್ಚೆ ಬೇಡ, ನಾನು ಪಕ್ಷದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೇರಳಕ್ಕೆ ಹೋಗುತ್ತಿದ್ದೇನೆ. ನಂತರ ರಾಜಸ್ಥಾನದಲ್ಲಿ ಸಚಿವರುಗಳ ಸಭೆ ಇದ್ದು, ಅಧಿಕಾರಿಗಳ ಸಮೇತ ಪ್ರಯಾಣ ಮಾಡುತ್ತಿದ್ದೇನೆ. ಅಲ್ಲಿಂದ ಬಂದ ನಂತರ ಮಾತನಾಡುತ್ತೇನೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ