Kannada NewsKarnataka NewsLatestPolitics

*BJPಗೆ ಬಿಗ್ ಶಾಕ್; ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಅವರ ಪತಿ ಶ್ರೀನಿವಾಸ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಶ್ರೀನಿವಾಸ್, ನರಸಿಂಹ ನಾಯಕ್ ಅವರು ತಮ್ಮ ಅಪಾರ ಬೆಂಬಲಿಗರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ನನಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಹಳ ಸಂತೋಷದ ದಿನ. ನಾವು ಎ.ಕೃಷ್ಣಪ್ಪ ಅವರ ಜತೆಯಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಒಟ್ಟಾಗಿ ರಾಜಕಾರಣ ಮಾಡಿದವರು. ವೀರಪ್ಪ ಮೋಯ್ಲಿ ಅವರು ಟಿಕೆಟ್ ನೀಡಿ ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದರು. ನಮ್ಮ ತಪ್ಪುಗಳಿಂದ ಅವರ ಜತೆಗಿನ ಕೊಂಡಿ ಕಳಚಿತ್ತು. ಕೃಷ್ಣಪ್ಪ ಅವರ ಪುತ್ರಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಮೂಲಕ ಇಂದು ಮತ್ತೆ ಆ ಕೊಂಡಿ ಬೆಸೆದುಕೊಂಡಿದೆ.

ನಾನು ಬಹಳ ದಿನಗಳಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಗಾಳ ಹಾಕುತ್ತಿದ್ದೆ. ಪೂರ್ಣಿಮಾ ಅವರು ಪಕ್ಷಕ್ಕೆ ಬಾರದಿದ್ದಾಗ, ಅವರ ಪತಿ ಶ್ರೀನಿವಾಸ್ ಅವರಿಗೆ ಗಾಳ ಹಾಕಿದ್ದೆ. ಬೇರೆ ಲೆಕ್ಕಾಚಾರದಿಂದ ಇಷ್ಟು ದಿನ ಅವರು ಪಕ್ಷ ಸೇರಿರಲಿಲ್ಲ. ಇಂದು ಅವರು ತೀರ್ಮಾನ ಮಾಡಿ ನಿಮ್ಮೆಲ್ಲರ ಸಮ್ಮುಖದಲ್ಲಿ ನಮ್ಮ ಪಕ್ಷ ಸೇರುತ್ತಿದ್ದಾರೆ. ಇಂದು ಕೇವಲ ಪೂರ್ಣಿಮಾ ಅವರು ಹಾಗೂ ಶ್ರೀನಿವಾಸ್ ಇವರಿಬ್ಬರು ಮಾತ್ರ ಪಕ್ಷ ಸೇರುತ್ತಿಲ್ಲ. ಕರ್ನಾಟಕ ರಾಜ್ಯದ ಪ್ರವರ್ಗ 1ರ ಜಾತಿಯ ಒಕ್ಕೂಟ, ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘ ಸೇರಿದಂತೆ ಅನೇಕ ಸಂಘಟನೆಗಳ 4-5 ಸಾವಿರ ಕಾರ್ಯಕರ್ತರು ಪಕ್ಷ ಸೇರುತ್ತಿದ್ದಾರೆ ಎಂದರು.

ನಾನು ಜಿಲ್ಲೆಯ ಎಲ್ಲಾ ನಾಯಕರ ಜೊತೆ ಮಾತನಾಡಿ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇವರೆಲ್ಲರನ್ನು ಪಕ್ಷದ ಪರವಾಗಿ ಕಾಂಗ್ರೆಸ್ ಗೆ ತುಂಬು ಹೃದಯದಿಂದ ಸ್ವಾಗತಿಸಿತ್ತೇನೆ.

ಇಂದು ಕೆ.ಆರ್ ಪುರಂ ಮೆಟ್ರೋ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಪ್ರಧಾನಮಂತ್ರಿಗಳು ಸುಮಾರು 1 ಗಂಟೆಗಳ ಕಾಲ ಭಾಷಣ ಮಾಡಿದ್ದು, ಅವರು ಮಾತನಾಡುವಾಗ ಮಧ್ಯೆ ಎದ್ದು ಬರಲಾಗದೇ ಆ ಸ್ಥಾನಕ್ಕೆ ಗೌರವ ನೀಡಿ ಈ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದೇವೆ.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ. ರಾಜ್ಯದ ಜನ ನಮಗೆ ಆಶೀರ್ವಾದ ನೀಡಿದ್ದು, 136 ಸೀಟುಗಳನ್ನು ಗೆಲ್ಲಿಸಿ ಎಲ್ಲಾ ನೊಂದ ಜನರಿಗೆ ರಕ್ಷಣೆ ಮಾಡಲು ಬೆಂಬಲ ಸೂಚಿಸಿದ್ದಾರೆ. ನಾವು ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಶಕ್ತಿ ತುಂಬಿದ್ದು, ಆ ಕೆಲಸದಲ್ಲಿ ನಾವು ನಿರತರಾಗಿದ್ದೇವೆ. ಐದರಲ್ಲಿ ನಾಲ್ಕು ಯೋಜನೆ ಜಾರಿ ಮಾಡಿದ್ದು, ದೇಶಕ್ಕೆ ಕರ್ನಾಟಕ ಮಾಡೆಲ್ ಪರಿಚಯಿಸಿದ್ದೇವೆ.

ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಸಾಕಾರಗೊಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಈ ಕೆಲಸ ಮುಂದುವರಿಸಿಕೊಂಡು ಹೋಗುತ್ತೇವೆ.

ಇಂದು ಪೂರ್ಣಿಮಾ ಶ್ರೀನಿವಾಸ್ ಅವರ ಜೊತೆ ಕಾರ್ಪೊರೇಟರ್ ನರಸಿಂಹ ನಾಯಕ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವವರ ದೊಡ್ಡ ಪಟ್ಟಿ ಇದೆ. ಅದನ್ನು ಈಗ ಬಹಿರಂಗಪಡಿಸುವುದಿಲ್ಲ. ಒಬ್ಬೊಬ್ಬರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಈ ಪ್ರಕ್ರಿಯೆ ಇಲ್ಲಿಗೆ ನಿಲ್ಲಬಾರದು. ಪ್ರತಿ ಬೂತ್ ಹಾಗೂ ಹಳ್ಳಿಗಳಲ್ಲಿ ಇದೇ ರೀತಿ ಕಾರ್ಯಕ್ರಮಗಳನ್ನು ಮಾಡಿ ಅಲ್ಲಿನ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು.

ಖರ್ಗೆ ಅವರ ನಾಯಕತ್ವದಲ್ಲಿ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ರಾಹುಲ್ ಗಾಂಧಿ ಅವರು ದೇಶದುದ್ದಗಲ ಭಾರತ ಜೋಡೋ ಯಾತ್ರೆ ಮಾಡಿ ದೇಶದ ಮನಸ್ಸುಗಳನ್ನು ಒಂದುಗೂಡಿಸಿದ್ದಾರೆ. ಈಗ ದೇಶದಲ್ಲಿ ಇಂಡಿಯಾ ಒಕ್ಕೂಟ ರೂಪುಗೊಂಡಿದ್ದು, ಇದಕ್ಕೆ ಎಲ್ಲರೂ ಸೇರಿ ಶಕ್ತಿ ತುಂಬಬೇಕು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿರೋಧಿಸಿ ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಹಳಬರು ಹೊಸಬರು ಎಂಬ ಬೇಧವಿಲ್ಲದೆ ಶ್ರಮಿಸಬೇಕು. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ ಪಕ್ಷದ ಸಿದ್ಧಾಂತಕ್ಕಾಗಿ ಎಲ್ಲಾ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.

ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ನಡೆದಾಗ ಕನಕಪುರಕ್ಕಿಂತಲೂ ಹಿರಿಯೂರು ಕ್ಷೇತ್ರದಲ್ಲಿ ಹೆಚ್ಚಿನ ಸದಸ್ಯತ್ವ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮತ ಬಂದಿದ್ದವು. ಈಗ ನಿಮ್ಮ ಸೇರ್ಪಡೆಯಿಂದ ನಮ್ಮ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಇದು ನಿಮ್ಮ ಮನೆ ಇದನ್ನು ಬಲಪಡಿಸುವ ಜವಾಬ್ದಾರಿ ನಿಮ್ಮದು. ಈ ಕಾರ್ಯಕ್ರಮದ ಮೂಲಕ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಕ್ಕೆ ಒಂದು ಸಂದೇಶ ರವಾನಿಸಲಾಗುತ್ತಿದೆ ಎಂದರು.

ಮಾಜಿ ಸಿಎಂ ವೀರಪ್ಪ ಮೊಯ್ಲಿ, ದೆಹಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮುಖಂಡರಾದ ಪ್ರೊ ರಾಜೀವ್ ಗೌಡ, ನಸೀರ್ ಅಹ್ಮದ್, ನಾಗರಾಜ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button