ಕರ್ನಾಟಕದ ಬಿಜೆಪಿ ಸರಕಾರ ರಾಷ್ಟ್ರದ ಅತ್ಯಂತ ಭ್ರಷ್ಟ ಸರಕಾರ – ರಾಹುಲ್ ಗಾಂಧಿ ವಾಗ್ದಾಳಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕದ ಪ್ರಸ್ತುತ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರವಾಗಿದೆ ಎಂದು ಕಾಗ್ರೆಸ್ ನಾಯಕ ರಾಹುಲ್ ಗಾಂಧಿ ನೇರವಾಗಿ ಹರಿಹಾಯ್ದಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಯುವಕ್ರಾಂತಿ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಸರಕಾರ 40 ಪರ್ಸೆಂಟ್ ಸರಕಾರ. ಈ ಸರಕಾರದಿಂದ ಜನರು ಬೇಸತ್ತಿದ್ದಾರೆ. ಜನಸಾಮಾನ್ಯರ ಸರಕಾರವನ್ನು ಕರ್ನಾಟಕದ ಜನರು ಬಯಸಿದ್ದಾರೆ. ಹಾಗಾಗಿ ಈ ಬಾರಿ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.
ಕರ್ನಾಟಕದ ಸರಕಾರ ಭ್ರಷ್ಟ ಸರಕಾರ, 40 ಪರ್ಸೆಂಟ್ ಸರಕಾರ ಎಂದು ಇಲ್ಲಿನ ಗುತ್ತಿಗೆದಾರರು ಹೇಳಿದ್ದಾರೆ. ಕರ್ನಾಟಕದ ಯಾವುದೇ ಯುವಕರನ್ನು ಕೇಳಿದರೂ ಹೇಳುತ್ತಾರೆ. ಪಿಎಸ್ಐ ಹುದ್ದೆಯಲ್ಲಿ ಭ್ರಷ್ಟಾಚಾರ, ಉಪನ್ಯಾಸಕರ ಹುದ್ದೆಯಲ್ಲಿ ಭ್ರಷ್ಟಾಚಾರ, ಮೈಸೂರು ಸ್ಯಾಂಡಲ್ ನಲ್ಲಿ ಶಾಸಕರ ಮಗನ ಬಳಿಯೆ 8 ಕೋಟಿ ರೂ. ಸಿಕ್ಕಿತು. ಯಾವುದರಲ್ಲಿ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ 4ನೇ ಗ್ಯಾರಂಟಿಯನ್ನು ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಳಗಾವಿಯಲ್ಲಿ ಸೋಮವಾರ ಅನಾವರಣ ಮಾಡಿದರು.
ಬೆಳಗಾವಿಯಲ್ಲಿ ಸೋಮವಾರ ನಡೆದ ಯುವಕ್ರಾಂತಿ ಸಮಾವೇಶದಲ್ಲಿ 4ನೇ ಗ್ಯಾರಂಟಿ ಯುವನಿಧಿಯನ್ನು ಅನಾವರಣಗೊಳಿಸಲಾಯಿತು.
ನಿರುದ್ಯೋಗಿ ಯುವಕರಿಗೆ 3000 ರೂ. ಹಾಗೂ 1,500 ರೂ. ಬತ್ಯೆ ನೀಡುವ ಯೋಜನೆ ಇದು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವೇಳೆ ಮಾತನಾಡಿ, ವೇದಿಕೆಯ ಮೇಲಿರುವ ನಮ್ಮ ಪಕ್ಷದ ನಾಯಕರ ವಿಶ್ವಾಸ ನೋಡಿ ನನಗೆ ಖುಷಿಯಾಗುತ್ತಿದೆ. ಬೆಳಗಾವಿಯ 18ಕ್ಕೆ 18 ಸ್ಥಾನಗಳನ್ನೂ ಕಾಂಗ್ರೆಸ್ ಗಲ್ಲಬೇಕು. ಅದೇನೂ ಕಷ್ಟದ ವಿಚಾರವಲ್ಲ. ಈ ಸರಕಾರ ಭ್ರಷ್ಟಾಚಾರದಿಂದ ತುಂಬಿಹೋಗಿದೆ. ಗುತ್ತಿಗೆದಾರರೇ ಈ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ಅಮಿತ್ ಶಾ ಈ ಬಗ್ಗೆ ತನಿಖೆ ಮಾಡಿಸಲು ಸಿದ್ಧರಿಲ್ಲ ಎಂದರು.
ಇಲ್ಲಿ ಭ್ರಷ್ಟಾಚಾರದ ಮಾಹಿತಿ ನೀಡಿದರೂ ತನಿಖೆ ನಡೆಸದ ಬಿಜೆಪಿ ಸರಕಾರ, ದೆಹಲಿಯಲ್ಲಿ ರಾಹುಲ್ ಗಾಂಧಿ ಬಳಿ ಹೋಗಿ ಲೈಂಗಿಕ ಕಿರುಕುಳ ನೀಡಿದವರ ಮಾಹಿತಿ ನೀಡುವಂತೆ ಕೇಳುತ್ತಾರೆ. ಇದಂತಹ ಸರಕಾರ ಎಂದು ಪ್ರಶ್ನಿಸಿದರು.
ನನ್ನ ರಿಮೋಟ್ ಕಂಟ್ರೋಲ್ ಸೋನಿಯಾ ಗಾಂಧಿ ಬಳಿ ಇದೆ ಎನ್ನುತ್ತಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಿಮೋಟ್ ಯಾರ ಬಳಿ ಇದೆ ಎಂದು ಖರ್ಗೆ ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ವರ್ಷದಲ್ಲಿ ಎರಡೂವರೆ ಲಕ್ಷ ಉದ್ಯೋಗ ಭರ್ತಿ ಮಾಡುವುದಾಗಿ ಘೋಷಿಸಿದರು.
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವು ನಾಯಕರು ಮಾತನಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಹಿರಿಯ ಮುಖಂಡರಾದ ಕೆ ಎಚ್ ಮುನಿಯಪ್ಪ, ಆರ್ ವಿ ದೇಶಪಾಂಡೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್, ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ಉಪಾಧ್ಯಕ್ಷ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ