ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಭಾರತೀಯ ಜನತಾ ಪಾರ್ಟಿಯ ಮಹತ್ವದ ಸಭೆ ಶನಿವಾರ ನಡೆಯಲಿದೆ.
ರಾಜ್ಯ ಪದಾಧಿಕಾರಿಗಳ ಸಭೆ ಇದಾಗಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೆಲ್ ಒಂದರಲ್ಲಿ ಸಭೆ ನಡೆಯಲಿದೆ.
ಅಧಿಕೃತವಾಗಿ ಬರಲಿರುವ ವಿವಿಧ ಚುನಾವಣೆಗಳ ಕುರಿತು ಚರ್ಚಿಸಲು ಮತ್ತು ಬೂತ್ ಮಟ್ಟದ ಚಟುವಟಿಕೆಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಆದರೆ ಸಭೆಯಲ್ಲಿ ನಾಯಕತ್ವ ಬದಲಾವಣೆ ಮತ್ತು ನಳಿನ್ ಕುಮಾರ ಕಟೀಲು ಆಡಿಯೋ ಬಹಿರಂಗ ಕುರಿತು ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ, ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ 25 ವಿಧಾನಪರಿಷತ್ ಸ್ಥಾನಗಳ ಚುನಾವಣೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ರವಿಕುಮಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಕಳೆದ ಕೆಲವು ತಿಂಗಳಿನಿಂದ ತೀವ್ರ ಗೊಂದಲ ಸೃಷ್ಟಿಯಾಗಿದೆ. ಹಲವಾರು ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಲಾಗದಷ್ಟು ಅಸಹಾಯಕವಾಗಿದೆ ಬಿಜೆಪಿ ಹೈಕಮಾಂಡ್. ಇದರಿಂದಾಗಿ ಬಿಜೆಪಿ ಸ್ಥಳೀಯ ನಾಯಕರು, ಕಾರ್ಯಕರ್ತರು ತೀವ್ರ ಮುಜುಗರಕ್ಕೊಳಗಾಗುತ್ತಿದ್ದಾರೆ. ಇವೆಲ್ಲ ವಿಷಯಗಳು ಸಭೆಯಲ್ಲಿ ಚರ್ಚಿಸಲ್ಪಡಲಿದೆ.
ಜೊತೆಗೆ ನಾಯಕತ್ವ ಬದಲಾವಣೆ ಮತ್ತು ಕೆಲವು ಹಿರಯ ಸಚಿವರನ್ನು ಕೈಬಿಡುವ ಕುರಿತಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಮಾತನಾಡಿರುವ ವಿಡೀಯೋ ಬಹಿರಂಗವಾಗಿರುವ ಕುರಿತು ಸಹ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬಾಂಬೆ ಫ್ರೆಂಡ್ಸ್ ವಿರುದ್ಧವೇ ತಿರುಗಿಬಿದ್ದ ಹೆಚ್.ವಿಶ್ವನಾಥ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ