ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದಲ್ಲಿ ಬಿಜೆಪಿ ಅಹಿಂಸೆ ಸೃಷ್ಟಿ ಮಾಡುತ್ತಿದೆ. ಡಬಲ್ ಎಂಜಿನ್ ಸರಕಾರದಿಂದ ಕರ್ನಾಟಕದಲ್ಲಿ ರಾಜ್ಯದ ಜನ ಬೇಸತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಪರವಾದ ಸುನಾಮಿ ಎದ್ದಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ ಚೌವ್ಹಾಣ ಹೇಳಿದರು.
ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಐದು ಪ್ರಮುಖ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ. ಉಚಿತ ವಿದ್ಯುತ್, ಗೃಹ ಲಕ್ಷ್ಮೀ, ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗೆ ಭತ್ಯೆ ಸೇರಿದಂತೆ ಸಾಕಷ್ಟು ಯೋಜನೆಯನ್ನು ಘೋಷಣೆ ಮಾಡಿದೆ. ಇದನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಕಾಂಗ್ರೆಸ್ ನೀಡಿದ್ದು, ಜನರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ ಬಿಜೆಪಿ ಇದರ ವಿರುದ್ಧವಾಗಿ ನಡೆಯುತ್ತಿದೆ ಎಂದರು.
ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಅಭಿವೃದ್ಧಿ ವಿಷಯವನ್ನು ಪಕ್ಕಕ್ಕೆ ಇಟ್ಟು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಮತ ಕೇಳಲು ಆರಂಭಿಸಿರುವುದು ದುರ್ದೈವದ ಸಂಗತಿ ಎಂದರು.
ಮೀಸಲಾತಿ ಘೋಷಣೆ ಮಾಡಿರುವ ಕುರಿತು ಮಾತನಾಡುವ ಬಿಜೆಪಿ ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಅದರಲ್ಲಿಯೂ ಮುಸ್ಲಿಂರ ಮೀಸಲಾತಿ ಕಸಿದುಕೊಂಡು ಬೇರೆಯವರಿಗೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕರ್ನಾಟಕವನ್ನು ಕೈಗಾರಿಕಾ ಕ್ಷೇತ್ರ, ಐಟಿ ಹಬ್ ಎಂದು ಕರೆಯುತ್ತೇವೆ. ಇಲ್ಲಿ ಜಾತಿ ಸಂಘರ್ಷ, ಗಲಾಟೆಯಾಗುವುದು ರಾಜ್ಯದ ಅಭಿವೃದ್ಧಿ ಕುಂಠಿತವಾಗುವ ವಿಷಯ. ರಾಜ್ಯದಲ್ಲಿ ಬಿಜೆಪಿ ಸರಕಾರದ ವಿರುದ್ಧ ಈಗಾಗಲೇ 40% ಕಮಿಷನ್ ಆರೋಪ ಇದೆ. ಜನರು ಅಭಿವೃದ್ಧಿ ವಿಷಯದ ಬಗ್ಗೆ ಮಾತನಾಡುವವರಿಗೆ ಮತ ನೀಡಿ ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ನಾವು ಕರ್ನಾಟಕದಲ್ಲಿ ಎನ್ ಸಿಪಿ, ಎಂಇಎಸ್, ಶಿವಸೇನಾದೊಂದಿಗೆ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ನಡೆಸುವ ಅವಶ್ಯಕತೆ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಹನುಮಾನ್ ಚಾಲಿಸಾ ಪಠಣ ಮಾಡುವುದು ನಾವು ಮನೆಯಲ್ಲಿ ಮಾಡುತ್ತೇವೆ. ಬಿಜೆಪಿಯವರಿಗೆ ಚುನಾವಣೆಯಲ್ಲಿ ಮಾತ್ರ ಹನುಮಾನ ಚಾಲಿಸಾ ಪಠಣ ಮಾಡುವುದು ಏಕೆ ಎಂದು ಪ್ರಶ್ನಿಸಿದ ಅವರು, ಭಜರಂಗದಳ ನಿಷೇಧ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುವುದಿಲ್ಲ. ಅದು ಕೇಂದ್ರ ಸರಕಾರಕ್ಕೆ ಇರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ