Kannada NewsKarnataka NewsLatest

ಜಿಲ್ಲೆಯಲ್ಲಿ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಬಲಿಷ್ಠಗೊಂಡಿದೆ – ಸಂಜಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ೫ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಗುರಿ ಹೊಂದಿದ್ದು, ಗೋಕಾಕ ಮತಕ್ಷೇತ್ರದಿಂದ ೧ ಲಕ್ಷಕ್ಕೂ ಅಧಿಕ ಅಂತರದ ಮತಗಳನ್ನು ಪಡೆಯಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಅವರು ಬುಧವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲಗಳ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಭೂತ್ ಸಮಿತಿಯ ಅಧ್ಯಕ್ಷರುಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ ಬಾರಿಯ ಚುನಾವಣೆಯಲ್ಲಿ ದಿ.ಸುರೇಶ ಅಂಗಡಿಯವರಿಗೆ ಗೋಕಾಕ ಮತಕ್ಷೇತ್ರದಿಂದ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ೫೬ ಸಾವಿರಕ್ಕೂ ಅಧಿಕ ಅಂತರದ ಮತಗಳನ್ನು ನೀಡಿದ್ದಿರಿ, ಈ ಬಾರಿ ೧ಲಕ್ಷಕ್ಕೂ ಹೆಚ್ಚು ಅಂತರದ ಮತಗಳನ್ನು ಪಡೆಯಲು ಕಾರ್ಯಕರ್ತರು ವಿಶೇಷ ಗಮನಹರಿಸಬೇಕು. ಕಾರ್ಯಕರ್ತರ ಪರಿಶ್ರಮದಿಂದ ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಪಕ್ಷಕ್ಕೆ ದೊರೆತಿದೆ. ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು ಈ ಬಾರಿಯ ಉಪಚುನಾವಣೆಯಲ್ಲಿಯೂ ನಿಮ್ಮ ಪಾತ್ರ ಮಹತ್ವದ್ದಾಗಿದೆ ಎಂದರು.
ಭಾರತೀಯ ಜನತಾ ಪಕ್ಷ ತನ್ನ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ನುಡಿದಂತೆ ನಡೆಯುತ್ತ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತ್ರತ್ವದ ಸರಕಾರ ಇದ್ದು, ಪಕ್ಷದ ಸಾಧನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ, ಮತದಾರರ ಮನವೊಲಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡುತ್ತ ಗೋಕಾಕ ಜನತೆ ಪ್ರೀತಿಗೆ ಜೀವ ಕೊಡುವ, ಯುದ್ಧಕ್ಕೆ ನಿಂತರೆ ಮುಗಿಸಿ ಬಿಡುತ್ತಾರೆ ಎಂಬ ಸಂದೇಶವನ್ನು ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೇಸ್ ಕಸವನ್ನು ಕಿತ್ತೆಸೆಯುವ ಮೂಲಕ ರಾಜ್ಯಕ್ಕೆ ನೀಡುವಂತೆ ಹೇಳಿದರು.
ಜಿಲ್ಲೆಯಲ್ಲಿ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷ ಬಲಿಷ್ಠಗೊಂಡಿದ್ದು, ಈ ಉಪಚುನಾವಣೆಯಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿ ಅಧಿಕ ಅಂತರದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಗೊಳಿಸುವಂತೆ ಕರೆ ನೀಡಿದ ಅವರು ರಮೇಶ ಜಾರಕಿಹೊಳಿ ಅವರು ಯಾವತ್ತು ಹುಲಿಯೇ ಆಗಿದ್ದು, ಏಳ್ಗೆಯನ್ನು ಸಹಿಸದ ಕೆಲವು ವಿರೋಧ ಪಕ್ಷದ ಕುತಂತ್ರಿಗಳು ನಡೆಸಿದ ರಾಜಕೀಯ ಷಡ್ಯಂತ್ರವನ್ನು ಭೇಧಿಸಿ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಿಂದು ಮುಸ್ಲಿಂ ಬಾಂಧವರು ಕೂಡಿ ರಾಮ ಮಂದಿರ ನಿರ್ಮಿಸಲಾಗುತ್ತಿದೆ. ನಾವೆಲ್ಲರೂ ಭಾರತೀಯರು ಭಾರತೀಯ ಸಂಸ್ಕೃತಿಯನ್ನು ಉಳಿಸಲು ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ದೇಶವನ್ನು ಬಲಿಷ್ಠಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಮೋದಿಯವರ ಕಾರ್ಯದಲ್ಲಿ ನಾವೆಲ್ಲ ಪಾಲ್ಗೊಳ್ಳೊಣ ಎಂದರು.
ವೇದಿಕೆಯ ಮೇಲೆ ಭಾರತೀಯ ಜನತಾ ಪಕ್ಷದ ಗೋಕಾಕ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಘಟಕದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಭಾಗ ಸಹಪ್ರಭಾರಿ ಬಸವರಾಜ ಯಂಕಚ್ಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಸ ಪಾಟೀಲ, ಮಹೇಶ ಮೊಹಿತೆ, ಕಾರ್ಯದರ್ಶಿ ಬಸವರಾಜ ಹಿರೇಮಠ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಶಫಿ ಜಮಾದಾರ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಮಾಜಿ ಸಚಿವ ಶಶಿಕಾಂತ ನಾಯಕ, ಭೀಮಗೌಡ ಪೋಲಿಸಗೌಡರ, ಸುರೇಶ ಸನದಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button