Latest

ಯಾರದ್ದೋ ದುಡ್ಡು…ಸಿದ್ದರಾಮಯ್ಯನ ಜಾತ್ರೆ : ಸಿಎಂ ಬೊಮ್ಮಾಯಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕಾಂಗ್ರೆಸ್ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರದಾನಿ ಮೋದಿ ನೀಡಿದ್ದು, ಅದನ್ನು ತುಂಬಿದ ಚೀಲ ಸಿದ್ದುದು. ಯಾರದ್ದೋ ದುಡ್ಡು…ಸಿದ್ದರಾಮಯ್ಯನ ಜಾತ್ರೆ ನಡೆಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, 75 ವರ್ಷದಲ್ಲಿ ಕಾಂಗ್ರೆಸ್ ನವರು ಕೇವಲ 25 ಲಕ್ಷ ಮನೆಗಳಿಗೆ ನೀರು ನೀಡಿದ್ದರು. ಕುಡಿಯುವನೀರು ಕೊಡಲಾಗದವರು ನಮ್ಮನ್ನು ಆಳಿದ್ದರು. ನೀರು ಕೊಡದವರು ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಜನ ಪರ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ ಏನೂ ಕೆಲಸ ಮಾಡಲಿಲ್ಲ. ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದ್ದರು. ಎಸಿಬಿಯಲ್ಲಿ ಹಲವು ಕೇಸ್ ಮುಚ್ಚಿಹಾಕಿದ್ದಾರೆ. 50 ಕೇಸ್ ಗಳಿಗೆ ಬಿ-ರಿಪೋರ್ಟ್ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ಆಡಳಿತದ ವೈಖರಿ. ಚಿಕ್ಕಮಗಳೂರಿನಲ್ಲಿ‌ ಮೆಡಿಕಲ್ ಕಾಲೇಜ್ ಕಾಂಗ್ರೆಸ್ ನವರು ಯಾಕೆ ಮಾಡಲಿಲ್ಲ. ಭ್ರಷ್ಟ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತು ಹಾಕಲು ಶೃಂಗೇರಿ ಶಾರದಾಂಬೆಯ ಪುಣ್ಯ ಸ್ಥಳದಿಂದ ಸಂಕಲ್ಪ ಮಾಡೋಣ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲು ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರುವ ಸಂಕಲ್ಪ ಮಾಡಬೇಕೆಂದು ಜನರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳ ನಿರ್ಮಾಣ:
ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಸರ್ಕಾರ ನಮ್ಮದು. ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ನಾರಾಯಣ ಗುರು ಅವರ ಹೆಸರಿನಲ್ಲಿವಸತಿ ಶಾಲೆ, ಎಸ್ ಸಿ ಎಸ್ ಟಿ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ,50 ಕನಕದಾಸ ಹಾಸ್ಟೆಲ್ ನಿರ್ಮಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಲಾಗುತ್ತಿದೆ ಎಂದರು.

ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ನಾಡು ಶೃಂಗೇರಿ. ನಾನು ದೇವರ ನಾಡಿಗೆ ಬಂದಿದ್ದೇನೆ ಎಂದ ಮುಖ್ಯಮಂತ್ರಿಗಳು ಜನಸಂಕಲ್ಪ ಯಾತ್ರೆಗೆ ಜನ ಬೆಂಬಲ ಸಿಗುತ್ತಿದೆ. ಮೋದಿ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತ ನಡೆಸ್ತಿದೆ. ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲದಿಂದ ವಿಜಯ ಸಂಕಲ್ಪ ಯಾತ್ರೆಯಾಗಿ ಯಶಸ್ವಿಯಾಗಿದೆ ಎಂದರು.

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ 6000 ರಾಷ್ಟ್ರೀಯ ಹೆದ್ದಾರಿ ರಸ್ತೆ, ಬಂದರುಗಳ ನಿರ್ಮಾಣ, ಜಲಜೀವನ ಮಿಷನ್ ಯೋಜನೆಗಳು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿಯಾದ ಕುಡಿಯುವ ನೀರಿನ ಯೋಜನೆಯನ್ನು ಕೇವಲ ಒಂದೇ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಪೂರೈಸಲಾಗಿದೆ. ಕೋವಿಡ್ ನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥವಾಗಿ ನಿರ್ವಹಿಸಲಾಯಿತು. ಔಷಧಿ, ಆರೋಗ್ಯ ಮೂಲಸೌಕರ್ಯಗಳನ್ನು ಸಪರ್ಪಕವಾಗಿ ನೀಡಲಾಯಿತು. ಪ್ರವಾಹದಲ್ಲಿಯೂ 5 ಲಕ್ಷ ಪರಿಹಾರಗಳನ್ನು ನೀಡಲಾಯಿತು. ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಿ ರೈತರಿಗೆ ನೀಡಲಾಗುತ್ತಿದೆ. ರೈತರಿಗೆ 5 ಹೆಚ್ ಪಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರೈತಮಕ್ಕಳಿಗೆ ವಿದ್ಯಾನಿಧಿ, 6 ಲಕ್ಷ ರೈತ ಕೂಲಿಕಾರ್ಮಿಕರಿಗೆ ವಿದ್ಯಾನಿಧಿ ನೀಡುತ್ತಿದೆ.

5 ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ,ಪ್ರತಿ ಗ್ರಾಮದಲ್ಲಿ ಎರಡು ವಿವೇಕಾನಂದ ಯುವಕ ಸಂಘ ಕ್ಕೆ ಆರ್ಥಿಕ ಸಹಾಯ ನೀಡಿ, ಅವರ ಸ್ವಯಂಉದ್ಯೋಗಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಕಂಬಾರ,ಕುಂಬಾರ, ಬಡಿಗೇರ, ಟೇಲರ್ ಗಳಿಗೆ ಅವರ ವೃತ್ತಿ ಕಾಯದ ಆಧಾರದ ಮೇಲೆ ಕಾಯಕ ಯೋಜನೆಯ ಮೂಲಕ ಸಾಲ ನೀಡಲಾಗುತ್ತದೆ ಎಂದರು.

ಸರ್ಕಾರ ಹಾಗು ಜನರು ಶ್ರೀಮಂತ ರಾಗಬೇಕು. ಜನರ ಬಳಿ ಹಣ ಇದ್ದರೆ ಮಾತ್ರ ಸರ್ಕಾರ ಶ್ರೀಮಂತ ಆಗುತ್ತದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲವಿದು.ಜನರು ಆರ್ಥಿಕವಾಗಿ ಸಬಲರಾಗಬೇಕು ಎಂಬುದು ಸರ್ಕಾರದ ಸಂಕಲ್ಪ ಎಂದು ತಿಳಿಸಿದರು.

ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ :  

ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಸ್ಥಳವನ್ನು ನಿರ್ಧರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕಾಫಿ ಬೆಳೆಗಾರರ ಒತ್ತುವರಿ ಸಮಸ್ಯೆಗೆ ಪರಿಹಾರ:

ಮಲೆನಾಡು ಭಾಗದಲ್ಲಿ ಅಕ್ರಮ ಒತ್ತುವರಿ ಬಗ್ಗೆ ಸಮಸ್ಯೆ ಇದೆ‌. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ನಿವಾರಿಸಲು ಕಂದಾಯ ಇಲಾಖೆಯವರು ಶೀಘ್ರ ಪರಿಹಾರ ಕಂಡುಕೊಳ್ಳಲಿದ್ದಾರೆ‌.ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಬಂದಿದೆ. ಔಷಧಿ ಸಿಂಪಡನೆ ಹಾಗೂ ರೋಗ ಹರಡದಂತೆ ಪರಿಹಾರ ಕಂಡುಕೊಳ್ಳಲು 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿದೆ. ಈ ಭಾಗದ ಪ್ರವಾಹ ಬಂದು ಹಾಳಾಗಿರುವ ರಸ್ತೆಗಳ ದುರಸ್ತಿಗೆ 5.80 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ 5 ಕೋಟಿ ರೂ. ಹೆಚ್ಚಿನ ಅನುದಾನವನ್ನು ಬಿಡುಗಡೆ ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿದೆ ಎಂದರು.

ಮುಳ್ಳಯ್ಯನಗಿರಿ ಹಾಗೂ ದತ್ತ ಪೀಠದ ನಡುವೆ ರೋಪ್ ವೇ ನಿರ್ಮಾಣ:
ದತ್ತ ಪೀಠ ಈ ಭಾಗದ ಭಾವನೆಗಳ ದೇವಸ್ಥಾನ. ಈ ದೇವಸ್ಥಾನದಲ್ಲಿ ಮೂಲ ಪೂಜೆ ನಡೆಸುವ ಬಗ್ಗೆ ಶಾಸಕ ಸಿಟಿ ರವಿಯವರು ಸುದೀರ್ಘ ಹೋರಾಟ ನಡೆಸಿದ್ದಾರೆ. ಈಗಾಗಲೇ ಕಾನೂನಾತ್ಮಕ ಹೊರಾಟ ನಡೆದಿದ್ದು, ಸೂಕ್ತ ಪರಿಹಾರ ದೊರೆಯಲಿದೆ.ಮುಳ್ಳಯ್ಯನಗಿರಿ ಹಾಗೂ ದತ್ತ ಪೀಠದ ನಡುವೆ ರೋಪ್ ವೇ ನಿರ್ಮಿಸಲು ಆಯವ್ಯಯದಲ್ಲಿ ಅನುದಾನವನ್ನು ಮೀಸಲಿರಿಸಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಿದೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದೇವೆ‌ ಆನೆ ದಾಳಿಯಿಂದ ಜೀವ ಹಾನಿಯಾದರೆ 15 ಲಕ್ಷಪರಿಹಾರ ನೀಡಲಾಗುತ್ತಿದೆ. ಆನೆ ದಾಳಿಯನ್ನು ತಡೆಯಲು ಪ್ರತಿ ಜಿಲ್ಲೆಗೆ ಸ್ಕ್ವಾಡ್ ರಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಭೈರತಿ ಬಸವರಾಜ್, ಗೋವಿಂದ ಕಾರಜೋಳ, ಮಾಜಿ ಸಚಿವ ಡಿ.ಎನ್. ಜೀವರಾಜ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶಾಸಕರು ಸೇರಿ ಹಲವರು ಉಪಸ್ಥಿತರಿದ್ದರು.

 

ಹೊಸ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

https://pragati.taskdun.com/bjp-janasankalapa-samaveshachikkamagaluruc-t-ravicontroversy-statmentsiddaramaiah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button