Kannada NewsKarnataka NewsLatest

ಪರಿಷತ್ ಚುನಾವಣೆ: BJP ಪರ ಬೆಳಗಾವಿಯಲ್ಲಿ ಯಡಿಯೂರಪ್ಪ, ನಳೀನ್ ಕುಮಾರ ಕಟೀಲ್ ಪ್ರಚಾರ

ರಮೇಶ ಜಾರಕಿಹೊಳಿ ಅವರಿಗೆ ಸಚಿವಸ್ಥಾನ ಕೊಡಬೇಕೆನ್ನುವ ಉದ್ದೇಶ ಪಕ್ಷಕ್ಕಿದೆ. ಆದರೆ ಬೇರೆ ಬೇರೆ ಕಾರಣಗಳಿಂದ ಸಚಿವಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ

-ನಳೀನ್ ಕುಮಾರ ಕಟೀಲು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ವಿಧಾನಪರಿಷತ್ ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಕಾವೇರಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಕ್ಷೇತ್ರದಾದ್ಯಂತ ಪ್ರಚಾರ ಸಭೆ ನಡೆಸುತ್ತ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ.

  ವಿಪಕ್ಷ ನಾಯಕ ಸಿದ್ದರಾಮಯ್ಯ ಒಂದೆಡೆ ಬಿಜೆಪಿ ಆಡಳಿತವನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದರೆ ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲು ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
   ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಳೀನಕುಮಾರ್ ಕಟೀಲು,  ಕಾಂಗ್ರೆಸ್‌ನಲ್ಲಿ ಚಿಂತನಾ ಶಿಬಿರ ಆರಂಭವಾದಾಗಿನಿಂದ ೬೪ ಜನ ಪ್ರಮುಖ ಕಾಂಗ್ರೆಸ್ ಮುಖಂಡರೇ ಪಕ್ಷ ತೊರೆದಿದ್ದಾರೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರ ಒಳಗಿನ ಜಗಳಗಳಿಂದ ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಸಿದ್ದರಾಮಯ್ಯ ಅವರು ದಿನಕ್ಕೊಂದು ಹೇಳಿಕೆ ಕೊಟ್ಟು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಒಳಪಡಿಸುತ್ತಿದ್ದಾರೆ ಎಂದು ಹೇಳಿದರು.  ರಾಜ್ಯಸಭಾ ಸದಸ್ಯ ಸ್ಥಾನ ಕೊಡವ ವಿಚಾರದಲ್ಲಿ ಕಾಂಗ್ರೆಸ್ ಹೈ ಕಮಾಂಡ್  ಮತ್ತು ಕರ್ನಾಟಕ ಕಾಂಗ್ರೆಸ್ ನಡುವೆ ಹೊಂದಾಣಿಕೆಯೇ ಆಗಲಿಲ್ಲ, ಇನ್ನೊಂದೆಡೆ ಪಕ್ಷದ ಸಂಘಟನೆಗೆ ಬಲ ತುಂಬಲು ಆಯೋಜಿಸಿದ್ದ ಚಿಂತನಾ ಶಿಬಿರವೇ ವಿಚಿತ್ರ ಶಿಬಿರವಾಯಿತು ಎಂದು ಕಟೀಲು ಲೇವಡಿ ಮಾಡಿದ್ದಾರೆ.
  ಆರ್‌ಎಸ್‌ಎಸ್ ಕುರಿತು ಸಿದ್ದರಾಮಯ್ಯ ಟೀಕೆ ಮಾಡುವುದು ಅವರ ಸಣ್ಣತನವನ್ನು ತೋರಿಸುತ್ತದೆ.  ದೇಶ ಸೇವೆ ಮಾಡುತ್ತಿರುವ ಸಂಘಟನೆಯನ್ನು ಅನಗತ್ಯವಾಗಿ ರಾಜಕೀಯಕ್ಕೆ ಎಳೆದು ತರಲಾಗುತ್ತಿದೆ ಎಂದರು.
 ಅರುಣ ಶಹಾಪುರ ಬೆಳಗಾವಿಯ  ಶಿಕ್ಷಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಬಾರಿಯೂ ಅವರು ಗೆಲುವು ಸಾಧಿಸಲಿದ್ದಾರೆ. ಪದವೀಧರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ವಿಜೇತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಕಾಕದಲ್ಲಿ ಮಾತನಾಡಿದ ನಳೀನ್ ಕುಮಾರ ಕಟೀಲು, ರಮೇಶ ಜಾರಕಿಹೊಳಿ ಅವರಿಗೆ ಸಚಿವಸ್ಥಾನ ಕೊಡಬೇಕೆನ್ನುವ ಉದ್ದೇಶ ಪಕ್ಷಕ್ಕಿದೆ. ಆದರೆ ಬೇರೆ ಬೇರೆ ಕಾರಣಗಳಿಂದ ಸಚಿವಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದರು.
ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮೊದಲಾದವರಿದ್ದರು.

  ಸಿದ್ದರಾಮಯ್ಯ ಹತಾಶರಾಗಿದ್ದಾರೆ – ಬಿಎಸ್‌ವೈ

 ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ  ೧೫೦ ಸ್ಥಾನ ಗೆಲ್ಲಲಿದೆ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
  ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮುಂಬರುವ ದಿನಗಳಲ್ಲಿ ಪಕ್ಷದ ಎಲ್ಲ ಮುಖಂಡರು ಎಲ್ಲಾ ಕ್ಷೇತ್ರದಲ್ಲಿ ಪ್ರವಾಸ ನಡೆಸುತ್ತೇವೆ. ಬಿಜೆಪಿಯನ್ನೇ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ ಎಂದರು.
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂಬುದು ಸಿದ್ದರಾಮಯ್ಯ ಅವರಿಗೆ ಈಗಾಗಲೇ ಗೊತ್ತಾಗಿದೆ, ಈ ಹಾತಾಶೆಯಿಂದ ಅವರು ತಪ್ಪು ಮಾತುಗಳನ್ನು ಆಡುತ್ತಿದ್ದಾರೆ ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದರು.  ಆರ್‌ಎಸ್‌ಎಸ್ ಅನ್ನು ಪದೇ ಪದೆ ಟೀಕಿಸುವ ಮೂಲಕ ಸಿದ್ದರಾಮಯ್ಯ ತಮಗಿರುವ ಮಾಜಿ ಮುಖ್ಯುಮಂತ್ರಿ, ವಿಪಕ್ಷ ನಾಯಕ ಎಂಬ ಘನತೆಯನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.

 

ದೇಶ, ರಾಜ್ಯ ಹಾಳು ಮಾಡುವ ಪಕ್ಷಕ್ಕೆ ಮತ ನೀಡಬೇಡಿ: ಸಂವಿಧಾನದ ಆಶಯವನ್ನು ಉಳಿಸಿ, ಗೌರವಿಸುವ ಕಾಂಗ್ರೆಸ್ ಗೆ ಮತ ನೀಡಿ; ಸಿದ್ದರಾಮಯ್ಯ ಕರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button