Latest

ಇನ್ನಷ್ಟು ಶಾಸಕರ ಅನರ್ಹತೆ ತಡೆಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್

ಇನ್ನಷ್ಟು ಶಾಸಕರ ಅನರ್ಹತೆ ತಡೆಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕರ್ನಾಟಕ ರಾಜ್ಯದ ರಾಜಕೀಯ ಅಸ್ಥಿರತೆ ಆರಂಭವಾಗಿ ಮೂರು ವಾರ ಕಳೆದಿದೆ. ಈ ಅವಧಿಯಲ್ಲಿ ರಾಜ್ಯದ ಜನರು ಸಾಕಷ್ಟು ಬೆಳವಣಿಗೆಗಳನ್ನು ಕಂಡಿದ್ದಾರೆ, ಹಲವು ತಿರುವುಗಳನ್ನು ನೋಡಿದ್ದಾರೆ.

ಜುಲೈ 6ರಂದು ಕಾಂಗ್ರೆಸ್-ಜೆಡಿಎಸ್ ನ 12 ಶಾಸಕರು ದಿಢೀರ್ ರಾಜಿನಾಮೆ ಸಲ್ಲಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದರು. ನಂತರ ಇನ್ನೂ ಕೆಲವು ಶಾಸಕರು ರಾಜಿನಾಮೆ ನೀಡಿ, ಎಲ್ಲರೂ ಸೇರಿ ಮುಂಬೈಗೆ ತೆರಳಿದರು.

ನಂತರ ಇನ್ನೂ ಮೂವರು ಸಚಿವರೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇದರಿಂದಾಗಿ ರಾಜ್ಯ ರಾಜಕೀಯದಲ್ಲಿ ಕ್ಷಣ ಕ್ಷಣಕ್ಕೂ ಹೊಸಹೊಸ ಬೆಳವಣಿಗೆ ನಡೆಯತೊಡಗಿತು.

Home add -Advt

ಮೈತ್ರಿ ಸರಕಾರ ಕೂಡ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಾಕಷ್ಟು ಪ್ರಯತ್ನ ಮಾಡಿತು. ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ ನೇರವಾಗಿ ಮುಂಬೈಗೆ ತೆರಳಿ ಅಲ್ಲಿದ್ದ ಅತೃಪ್ತ ಶಾಸಕರನ್ನು ಕರೆತರಲು ಪ್ರಯತ್ನ ನಡೆಸಿ ವಿಫಲರಾದರು.

ಅತೃಪ್ತ ಶಾಸಕರಿಗೆ ಸಾಕಷ್ಟು ರೀತಿಯಲ್ಲಿ ಬೆದರಿಸುವ ತಂತ್ರವೂ ನಡೆಯಿತು. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಯುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದರು. ನಂತರ ಅದನ್ನು ಮುಂದೂಡಲು ಸಾಕಷ್ಟು ತಂತ್ರಗಳನ್ನು ಮಾಡಿದರು. ಅಂತೂ ಇಂತು 9 ದಿನಗಳ ಕಾಲ ವಿಳಂಬ ಮಾಡಲು ಯಶಸ್ವಿಯಾದರೂ ವಿಶ್ವಾಸಮತ ಗೆಲ್ಲುವಲ್ಲಿ ಅವರಿಂದ ಸಾಧ್ಯವಾಗಲೇ ಇಲ್ಲ.

ಮತ್ತೊಂದು ತಿರುವು

ಮಂಗಳವಾರ ರಾಜ್ಯದ ಮೈತ್ರಿ ಸರಕಾರ ವಿಶ್ವಾಸಮತದಲ್ಲಿ ಸೋಲು ಅನುಭವಿಸಿದ ನಂತರ ರಾಜ್ಯ ರಾಜಕೀಯ ಮತ್ತಷ್ಟು ಕುತೂಹಲದತ್ತ ತಿರುಗಿತು. ಕಾಂಗ್ರೆಸ್ -ಜೆಡಿಎಸ್ ಗುಪ್ತ ಸಭೆ ನಡೆಸಿ, ಬಿಜೆಪಿ ಸರಕಾರ ರಚಿಸಿದರೂ ವರ್ಷದೊಳಗೆ ಕೆಳಗಿಳಿಸಲು ಮಾಡಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಿದವು. ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿ ಎಲ್ಲ ಕಡೆ ಗೆಲ್ಲುವ ತಂತ್ರ ರೂಪಿಸಲಾಯಿತು.

ಈ ಮಧ್ಯೆ, ಬಿಜೆಪಿ ಸರಕಾರ ರಚಿಸಲು ಹಕ್ಕು ಮಂಡಿಸುವುದು ವಿಳಂಬವಾಗತೊಡಗಿತು. ಬಿಜೆಪಿ ಹೈಕಮಾಂಡ್ ಹಕ್ಕು ಮಂಡಿಸಲು ಅನುಮತಿ ನೀಡದೆ 2 ದಿನ ಸತಾಯಿಸಿತು. ಇದು ಇನ್ನಷ್ಟು ವದಂತಿಗಳಿಗೆ ಕಾರಣವಾಯಿತು. ಹಾಗಾಗಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ರಾಜ್ಯ ಬಿಜೆಪಿ ನಿಯೋಗ ನವದೆಹಲಿಗೆ ತೆರಳಿ ಹೈಕಮಾಂಡ್ ಮನವೊಲಿಸುವ ಪ್ರಯತ್ನ ಮಾಡಿತು.

ಅಂತೂ ಇಂದು ಬೆಳಗ್ಗೆ ಹೈಕಮಾಂಡ್ ಸರಕಾರ ರಚನೆಗೆ ರಾಜ್ಯ ಬಿಜೆಪಿಗೆ ಒಪ್ಪಿಗೆ ನೀಡಿತು.

ಆತಂಕ ಸೃಷ್ಟಿಸಿದ ಸ್ಪೀಕರ್ ನಿರ್ಧಾರ

ಇದೇ ವೇಳೆ ನಿನ್ನೆ ರಾತ್ರಿ ಸ್ಪೀಕರ್ ರಮೇಶ ಕುಮಾರ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಬಿಜೆಪಿಗೆ ದೊಡ್ಡ ಬೆದರಿಕೆ ಹಾಕಿದರು. ರಮೇಶ ಜಾರಕಿಹೊಳಿ, ಆರ್.ಶಂಕರ ಮತ್ತು ಮಹೇಶ ಕುಮಟಳ್ಳಿ ಅವರನ್ನು ಅನರ್ಹಗೊಳಿಸಿ, ಅವರೆಲ್ಲ ಉಪಚುನಾವಣೆಯಲ್ಲೂ ಸ್ಪರ್ಧಿಸಲು ಅವಕಾಶವಿಲ್ಲ. ಚುನಾವಣೆಯಲ್ಲಿ ಗೆಲ್ಲುವವರೆಗೂ ಯಾವುದೇ ಅಧಿಕಾರ ಸ್ವೀಕರಿಸಲೂ ಸಾಧ್ಯವಿಲ್ಲ ಎಂದು ಸ್ಪೀಕರ್ ಪ್ರಕಟಿಸಿದರು.

ಜೊತೆಗೆ, ಇನ್ನೂ 14 ಶಾಸಕರ ವಿರುದ್ಧ ತಮಗೆ ದೂರು ಬಂದಿದೆ. ಅವರೆಲ್ಲರ ವಿರುದ್ಧ ವಾರದೊಳಗೆ ನಿರ್ಧಾರ ಪ್ರಕಟಿಸುವುದಾಗಿ ರಮೇಶ ಕುಮಾರ ತಿಳಿಸಿದರು. ಇದು ಸಹಜವಾಗಿಯೇ ಅತೃಪ್ತರಿಗೆ ಮತ್ತು ಬಿಜೆಪಿಗೆ ದೊಡ್ಡ ಆತಂಕ ತಂದೊಡ್ಡಿದೆ. ಅತೃಪ್ತ ಶಾಸಕರೆಲ್ಲ ಅನರ್ಹರಾಗಿ, ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಿದರೆ ವರ್ಷದೊಳಗೆ ಮತ್ತೆ ಸರಕಾರ ಬಿದ್ದುಹೋಗಬಹುದು ಎನ್ನುವ ಆತಂಕವಿದೆ.

ಶಾಸಕರ ಅನರ್ಹತೆಯನ್ನು ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಆದರೆ ಅದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಏನೆಲ್ಲ ಸಮಸ್ಯೆಗಳು ಬರಬಹುದು. ಅದಕ್ಕಿಂತ ಅನರ್ಹಗೊಳಿಸದಂತೆ ತಡೆಯುವುದೇ ಉಪಾಯ.

ಹಾಗಾಗಿ ಇದನ್ನು ತಡೆಯಲು ಬಿಜೆಪಿ ಈಗ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಅದು ಸ್ಪೀಕರ್ ಬದಲಿಸುವುದು. ಸ್ಪೀಕರ್ ರಮೇಶ ಕುಮಾರ ಅವರನ್ನು ಬದಲಿಸಿ, ತಮ್ಮದೇ ಪಕ್ಷದ ಶಾಸಕರನ್ನು ಸ್ಪೀಕರ್ ಸ್ಥಾನಕ್ಕೆ ಕೂಡ್ರಿಸಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಈಗ ಕಾನೂನೂ ಸಲಹೆ ಪಡೆಯಲಾಗುತ್ತಿದೆ.

ಸ್ಪೀಕರ್ ಬದಲಾವಣೆ ಹೇಗೆ?

ಹಾಗಾದರೆ ಸ್ಪೀಕರ್ ಬದಲಾಯಿಸುವುದು ಹೇಗೆ? ಅಷ್ಟು ಸುಲಭವಾಗಿ ಅವರನ್ನು ಕೆಳಗಿಳಿಸಲು ಸಾಧ್ಯವಿದೆಯೇ?

ಸ್ಪೀಕರ್ ರಮೇಶ ಕುಮಾರ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದರು. ಒಮ್ಮೆ ಸ್ಪೀಕರ್ ಆಯ್ಕೆಯಾದರೆ ಅವರು ಈ ವಿಧಾನಮಂಡಳದ ಪೂರ್ಣಾವಧಿಗೆ ಇರುತ್ತಾರೆ. ರಾಜೀನಾಮೆ ನೀಡಿದರೆ ಮಾತ್ರ ಬೇರೆ ಸ್ಪೀಕರ್ ಆಯ್ಕೆ ನಡೆಯುತ್ತದೆ.

ಆದರೆ ವಿಧಾನಸಭೆಯಲ್ಲಿ ಯಾರಾದರೂ ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶವಿದೆ. ಹಾಗೆ ಮಂಡಿಸಿದಾಗ 15 ದಿನದಲ್ಲಿ ಅವರು ವಿಶ್ವಾಸಮತ ಯಾಚನೆ ಮಾಡಬೇಕಾಗುತ್ತದೆ. ಅದರಲ್ಲಿ ಸೋತರೆ ಅವರು ಕೆಳಗಿಳಿಯಬೇಕಾಗುತ್ತದೆ. ಹಾಗಾಗಿ ಬಿಜೆಪಿ ಅವಿಶ್ವಾಸ ಮಂಡಿಸಿದರೂ ಸ್ಪೀಕರ್ ಗೆ 15 ದಿನ ಕಾಲಾವಕಾಶವಿರುತ್ತದೆ.

ಆದರೆ ಈ 15 ದಿನದಲ್ಲಿ ಅವರು ಶಾಸಕರ ಅನರ್ಹತೆಯಂತಹ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದಾ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಆದರೆ, ಸ್ಪೀಕರ್ ರಮೇಶ ಕುಮಾರ ಇದಕ್ಕೆಲ್ಲ ಅವಕಾಶ ಕೊಡಲಿಕ್ಕಿಲ್ಲ ಎನ್ನುವ ಸುಳಿವನ್ನು ಅವರೇ ನಿನ್ನೆ ನೀಡಿದ್ದಾರೆ.

ಒಂದೊಮ್ಮೆ ಬಿಜೆಪಿ ಅವಿಶ್ವಾಸ ಮಂಡಿಸಿದಲ್ಲಿ ತಕ್ಷಣ ರಮೇಶ ಕುಮಾರ ರಾಜೀನಾಮೆ ನೀಡಬಹುದು. ಹಾಗಾದಲ್ಲಿ ಬಿಜೆಪಿ ದಾರಿ ಸುಲಭವಾಗಲಿದೆ. ಶಾಸಕರು ಸಲ್ಲಿಸಿರುವ ರಾಜೀನಾಮೆಯನ್ನು ಹೊಸ ಸ್ಪೀಕರ್ ಅಂಗೀಕರಿಸಿ ಮಾರ್ಗ ಸುಲಭಗೊಳಿಸಬಹುದು. ಇದು ಬಿಜೆಪಿಗೆ ಬೇಕಾಗಿರುವುದು. ಹಾಗಾಗಿ ಆದಷ್ಟು ಬೇಗ ಸ್ಪೀಕರ್ ಬದಲಾವಣೆಗೆ ಮುಂದಾಗಲಿದೆ ಬಿಜೆಪಿ.

 

 

 

Related Articles

Back to top button