ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಜೆಎನ್ಯು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ, ಬೆಂಬಲ ನೀಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಬಿಜೆಪಿ ಶಾಸಕ ರಾಜೂಗೌಡ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ಜೆಎನ್ಯು ವಿದ್ಯಾರ್ಥಿಗಳ ಪರ ನಿಂತಿರುವ ದೀಪಿಕಾ ಪಡುಕೋಣೆ ವಿರುದ್ಧ ವ್ಯಾಂಗ್ಯವಾಡಿದರು. ನಟ-ನಟಿಯರಿಗೆ ಸ್ವಂತ ಬುದ್ಧಿ ಇರಲ್ಲ. ಅವರು ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ ಅಷ್ಟೇ. ತಮ್ಮ ಸ್ವಂತ ಬುದ್ಧಿಯಿಂದ ಕೆಲಸ ಮಾಡುವವರು ತುಂಬಾ ಕಡಿಮೆ ಎಂದು ಹೇಳಿದ್ದಾರೆ.
ತಮ್ಮ ಫೇಮ್ ಮತ್ತು ಪಬ್ಲಿಸಿಟಿಗೆ ಏನು ಬೇಕು ಅದನ್ನು ಮಾತ್ರ ಮಾಡುತ್ತಾರೆ. ದುಡ್ಡು ಕೊಟ್ಟು ಹೋಗಿ ನೋಡುವ ಸಿನಿಮಾದಲ್ಲಿ ಮಾತ್ರ ದೀಪಿಕಾ ಪಡುಕೋಣೆಯನ್ನು ನೋಡೋಕೆ ಚೆನ್ನಾಗಿರುತ್ತೆ. ಅದು ಬಿಟ್ಟು ಅವರ ಇತಿಹಾಸ ತೆಗೆದುಕೊಂಡರೆ ಅವರ ಬಗ್ಗೆ ಉತ್ತರ ಸಿಗುತ್ತೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಅಲ್ಲದೇ ನಾನು ನಟ-ನಟಿಯರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಪಬ್ಲಿಸಿಟಿಗೋಸ್ಕರ ಮಾತನಾಡುವ ಬದಲಾಗಿ ಸತ್ಯದ ಬಗ್ಗೆ ಮಾತಾಡಲಿ ಎಂದರು.
ಇದೇ ವೇಳೆ ಮಂಗಳೂರು ಗಲಭೆ ಬಗ್ಗೆ ವೀಡಿಯೋ ಬಿಡುಗಡೆ ಮಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧವೂ ಗುಡುಗಿರುವ ರಾಜುಗೌಡ, ಕುಮಾರಸ್ವಾಮಿ ರಾಜಕಾರಣಿಯಾಗುವುದಕ್ಕೂ ಮೊದಲು ನಿರ್ಮಾಪಕರಾಗಿದ್ದು, ವೀಡಿಯೋ ಎಡಿಟಿಂಗ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತು. ಗಲಭೆ ವಿಚಾರ ಇಟ್ಟುಕೊಂಡು ಚೀಪ್ ಪಾಲಿಟಿಕ್ಸ್ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಪೊಲೀಸರು ಗಲಾಟೆ ವೀಡಿಯೋ ಬಿಡುಗಡೆ ಮಾಡಿದ ದಿನವೇ ಕುಮಾರಸ್ವಾಮಿಯವರು ತಮ್ಮ ವೀಡಿಯೋ ಬಿಡುಗಡೆ ಮಾಡಬೇಕಿತ್ತು. ಆದರೆ ಇಷ್ಟು ದಿನ ಯಾಕೆ ಸುಮ್ಮನಿದ್ದರು, ಅವರಿಗೆ ಜನರ ಬಗ್ಗೆ ಅಷ್ಟು ಕಾಳಜಿ ಇದ್ದರೆ ನೆರೆ ಪ್ರದೇಶಗಳ ಜನರ ಕಷ್ಟ ನಷ್ಟ ಆಲಿಸಲಿ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ