
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಅಕ್ಟೋಬರ್ 9ರಂದು ಪುನಃ ಬೆಳಗಾವಿಗೆ ಆಗಮಿಸಲಿದ್ದಾರೆ.
ಅಂದು ಬಿಜೆಪಿ ಜಿಲ್ಲಾ ಸಮಿತಿ ಸಭೆ ನಡೆಯಲಿದ್ದು ಅದರಲ್ಲಿ ಕಟೀಲು ಪಾಲ್ಗೊಳ್ಳುವರು. 2 ದಿನಗಳ ಹಿಂದಷ್ಟೆ ಬೆಳಗಾವಿಗೆ ಆಗಮಿಸಿದ್ದ ನಳೀನಿ ಕುಮಾರ ಕಟೀಲು, ಈಚೆಗೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತೆರಳಿದ್ದರು.
ಉಪಚುನಾವಣೆ ತಯಾರಿ
ಸುರೇಶ ಅಂಗಡಿ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನು 6 ತಿಂಗಳೊಳಗಾಗಿ ಉಪಚುನಾವಣೆ ನಡೆಯಬೇಕಿದೆ. ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಈಗಲೇ ತಯಾರಿ ಆರಂಭಿಸಿದೆ.
ಹಲವಾರು ಮುಖಂಡರು, ಕಾರ್ಯಕರ್ತರು ಟಿಕೆಟ್ ಪಡೆಯಲು ಲಾಬಿ ಆರಂಭಿಸಿದ್ದಾರೆ. ಅ.9ರಂದು ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಲೋಕಸಭೆ ಅಭ್ಯರ್ಥಿ ಆಯ್ಕೆ ಕೇಂದ್ರ ಸಮಿತಿಯಿಂದ ನಡೆಯಲಿದೆಯಾದರೂ ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಈಗಾಗಲೆ 12ಕ್ಕೂ ಹೆಚ್ಚು ಜನರು ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದಾರೆ.
ಸುರೇಶ ಅಂಗಡಿ ಕುಟುಂಬದಲ್ಲೇ ಒಬ್ಬರಿಗೆೆ ಟಿಕೆಟ್ ಕೊಡುವ ಕುರಿತು ಚರ್ಚೆ ನಡೆದಿದೆ. ಪತ್ನಿ ಮಂಗಲಾ ಅಂಗಡಿ ಅಥವಾ ಮಗಳು ಸ್ಫೂರ್ತಿ ಪಾಟೀಲ ಅವರನ್ನು ಕಣಕ್ಕಿಳಿಸಬೇಕೆನ್ನುವ ಮಾತು ಕೇಳಿ ಬಂದಿದೆ. ಹಾಗೆಯೇ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಹೆಸರು ಕೂಡ ಕೇಳಿ ಬಂದಿದೆ. ಸಂಘ ಮೂಲದಿಂದ ಬಂದಿರುವ ಯುವ ಉದ್ಯಮಿಯೂ ಆಗಿರುವ ಮಹಾನಗರ ಜಿಲ್ಲಾ ಪದಾಧಿಕಾರಿಯೊಬ್ಬರ ಹೆಸರು ಪ್ರಮುಖವಾಗಿದೆ.
ಮಾಜಿ ಸಂಸದ ರಮೇಶ ಕತ್ತಿ, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಸಂಜಯ ಪಾಟೀಲ, ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಭಾರತಿ ಮಗ್ದುಂ, ನ್ಯಾಯವಾದಿ ಎಂ.ಬಿ.ಜಿರಲಿ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಕಾರ್ಯದರ್ಶಿ ಕಿರಣ ಜಾಧವ, ಸಾಮಾಜಿಕ ಕಾರ್ಯಕರ್ತ ವೀರೇಶ ಕಿವಡಸಣ್ಣವರ್, ಮಾಜಿ ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್, ಡಾ.ರವಿ ಪಾಟೀಲ, ಉದ್ಯಮಿ ಪಾಂಡುರಂಗ ರಡ್ಡಿ ಮತ್ತಿತರರು ಆಸಕ್ತಿ ಹೊಂದಿದ್ದು, ಈಗಾಗಲೆ ಪ್ರಯತ್ನ ನಡೆಸಿದ್ದಾರೆ.
ಅ.9ರಂದು ಕಟೀಲು ಆಗಮಿಸಿದ ಸಂದರ್ಭದಲ್ಲಿ ಆಕಾಂಕ್ಷಿಗಳು ಅಹವಾಲು ಸಲ್ಲಿಸುವ ಸಾಧ್ಯತೆ ಇದೆ.
ನಾಳೆ ರಾಜ್ಯಾಧ್ಯಕ್ಷರು ಬೆಳಗಾವಿಗೆ: ಬಿಜೆಪಿಯಲ್ಲಿ ರಾಜಕೀಯ ಜೋರು
ಬಿಜೆಪಿಯಲ್ಲಿ ಆಗ್ಲೇ ಶುರುವಾಯ್ತು ಅಭ್ಯರ್ಥಿ ಚರ್ಚೆ – Updated
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ