ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ: ಅಮಿತ್ ಷಾ

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ  – ಬಸವರಾಜ ಬೊಮ್ಮಾಯಿ ಅವರು ಆಡಳಿತದಲ್ಲಿ, ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಹೊಂದಿದ್ದು, ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ತಮಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಅವರು ಇಂದು ದಾವಣಗೆರೆಯ ಜಿಎಂಐಟಿ ಆವರಣದಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚೆಗೆ ಕರ್ನಾಟಕದ ನೇತೃತ್ವವನ್ನು ಬೇರೆಯವರಿಗೆ ವಹಿಸುವ ಕುರಿತು ಯಡಿಯೂರಪ್ಪ ಜಿ ಅವರು ಸ್ವತಃ ತೀರ್ಮಾನ ಕೈಗೊಂಡರು. ಬಿಜೆಪಿಯು ಬಸವರಾಜ ಬೊಮ್ಮಾಯಿ ಅವರಿಗೆ ನೂತನ ಮುಖ್ಯಮಂತ್ರಿಯ ಜವಾಬ್ದಾರಿ ವಹಿಸಲು ನಿರ್ಣಯಿಸಿತು. ಅದರಂತೆ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ನುಡಿದರು.
 ಯಡಿಯೂರಪ್ಪ ಅವರು ತಮ್ಮ ಎರಡೂ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿಗೆ ವಿಶೇಷವಾಗಿ ರೈತರ ಮತ್ತು ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು.  ಕರ್ನಾಟಕದಲ್ಲಿ ವಿಕಾಸ ಯುಗ ಪ್ರಾರಂಭವಾಗಿದ್ದು ಭಾರತೀಯ ಜನತಾ ಪಕ್ಷದ ಅವಧಿಯಲ್ಲಿ, ಯಡಿಯೂರಪ್ಪನವರ ಅವಧಿಯಲ್ಲಿ ಎಂದು ಅಭಿಪ್ರಾಯಪಟ್ಟರು.
ಬೊಮ್ಮಾಯಿ ಅವರು ಹಲವು  ಮಹತ್ವಪೂರ್ಣವಾದ ಹೊಸ ಉಪಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪೊಲೀಸರ ಗೌರವ ವಂದನೆ, ಹೂಗುಚ್ಛ ಸೇರಿ ಹಲವು ವಿವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇತ್ತಿದ್ದಾರೆ. ಪಾರದರ್ಶಕತೆ ತರಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅಲ್ಪ ಅವಧಿಯಲ್ಲೇ, ದೆಹಲಿಯಲ್ಲಿ ಕರ್ನಾಟಕ ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸುವವರು, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರಿಂದ ಭಾರತೀಯ ಜನತಾ ಪಕ್ಷವು ಮತ್ತಷ್ಟು ಬಲವರ್ಧನೆ ಮಾಡಿಕೊಳ್ಳಲಿದೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button