ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಸ್ಥಳೀಯ ನಗರಸಭೆಯ ಗದ್ದುಗೆ ಬಿಜೆಪಿ ಪಕ್ಷಕ್ಕೆ ಒಲಿಯಿತು.
ಶನಿವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯ ಜಯವಂತ ಭಾಟಲೆ ವಿರೋಧ ಪಕ್ಷದ ಸದಸ್ಯೆ ಅನೀತಾ ಪಠಾಡೆ ವಿರುದ್ಧ ೧೯-೧೩ ಮತಗಳಿಂದ ಗೆಲುವು ಸಾಧಿಸಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡರು. ಬಿಜೆಪಿಯ ನೀತಾ ಬಾಗಡೆ ಅವಿರೋಧವಾಗಿ ಆಯ್ಕೆಗೊಂಡರು.
ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಹಾಗೂ ಉಪಾಧ್ಯಕ್ಷೆ ಸ್ಥಾನವನ್ನು ಹಿಂದುಳಿದ ವರ್ಗ-ಮಹಿಳೆಗೆ ಮೀಸಲಾತಿಯಿದ್ದ ಈ ಚುನಾವಣೆಯಲ್ಲಿ ಚುನಾವಣಾಧಿಕಾರಿ ಚಿಕ್ಕೋಡಿ ಉಪವಿಭಾಗದ ಉಪವಿಭಾಗಾಧಿಕಾರಿ ಯುಕೇಶಕುಮಾರ ಎಸ್. ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷ ಜಯವಂತ ಭಾಟಲೆ ನಾಮಪತ್ರಕ್ಕೆ ಸದಸ್ಯ ಸದ್ದಾಂ ನಗಾರಜಿ ಮತ್ತು ರಾಜು ಗುಂಡೇಶಾ ಹಾಗೂ ಉಪಾಧ್ಯಕ್ಷೆ ನೀತಾ ಬಾಗಡೆ ನಾಮಪತ್ರಕ್ಕೆ ಸದಸ್ಯೆ ಕಾವೇರಿ ಮಿರ್ಜೆ ಮತ್ತು ಪ್ರಭಾವತಿ ಸರ್ಯವಂಶಿ ಸೂಚಕರಾಗಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಮಾರ್ಗದರ್ಶನದಂತೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಪದಾಧಿಕಾರಿಗಳು ತಿಳಿಸಿದರು. ಸಚಿವೆ ಹಾಗೂ ಸಂಸದ ಜೊಲ್ಲೆ ನೂತನ ಪದಾಧಿಕಾರಿಗಳನ್ನು ಸತ್ಕರಿಸಿದರು.
ವಿರೋಧಿ ಪಕ್ಷದ ಸದಸ್ಯ ಸಹ ಬಿಜೆಪಿ ಪರ:
ನಗರಸಭೆ ವ್ಯಾಪ್ತಿಯ ಒಟ್ಟು ೩೧ ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷದ ಹಾಗೂ ಬೆಂಬಲಿತರ ಸಂಖ್ಯೆ ೧೬ ಇತ್ತು. ಹಾಗೂ ವಿರೋಧಿ ಬಣದ(ಕಾಂಗ್ರೆಸ್ ಬೆಂಬಲಿತರ) ಸಂಖ್ಯೆ ೧೪(ಎರಡು ವಾರ್ಡ್‌ಗಳಲ್ಲಿ ಒಬ್ಬ ಸದಸ್ಯ ಚುನಾಯಿತ ಸೇರಿದಂತೆ) ಇತ್ತು. ಆದರೆ ವಿರೋಧಿ ಬಣದ ಸದಸ್ಯ ಸಂತೋಷ ಮಾನೆ ಬಿಜೆಪಿ ಪರ ಕೈ ಎತ್ತುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಸಂಸದ ಹಾಗೂ ಶಾಸಕಿ ಜೊಲ್ಲೆಯವರು ಮತ್ತು ೧೭ ಸದಸ್ಯರು ಅಧ್ಯಕ್ಷ ಭಾಟಲೆ ಪರ ಕೈ ಎತ್ತಿದರು. ವಿರೋಧ ಪಕ್ಷದ ಅನೀತಾ ಪಠಾಡೆ ಪರ ೧೩ ಸದಸ್ಯರು ಕೈ ಎತ್ತಿದರು.
ಕಾರ್ಯಕರ್ತರ ಸಂಭ್ರಮಾಚರಣೆ:
ಉಪವಿಭಾಗಾಧಿಕಾರಿಗಳ ಘೋಷಣೆಯ ನಂತರ ನಗರಸಭೆ ಎದುರು ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಜೊಲ್ಲೆ ದಂಪತಿಗೆ ಜೈಕಾರ ಹಾಕಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ಉಪಕಾರ್ಯಾಧ್ಯಕ್ಷ ಎಂ.ಪಿ. ಪಾಟೀಲ, ಸಂಚಾಲಕ ಪಪ್ಪು ಪಾಟೀಲ, ಪೌರಾಯುಕ್ತ ಮಹಾವೀರ ಬೋರನ್ನವರ, ದೀಪಕ ಚವಾಣ, ಅಭಯ ಮಾನವಿ, ನಗರಸಭೆ, ಎಪಿಎಂಸಿ ಸದಸ್ಯರು, ಕಾರ್ಯಕರ್ತರು ನೂತನ ಪದಾಧಿಕಾರಿಗಳನ್ನು ನಗರಸಭೆಯಲ್ಲಿ ಸತ್ಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ