
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಕಾರ್ಯಕರ್ತೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜ್ಯೋತಿ ಪಾಟೀಲ್ (35) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತೆ. ಕಲಬುರಗಿಯ ನಂದಿಕೂರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ್ ಎಂಬುವವರ ಮನೆಯಲ್ಲಿ ಜ್ಯೋತಿ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸು ವಿಚಾರವಾಗಿ ಗಲಾಟೆ ನಡೆದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಜ್ಯೋತಿ ಪಾಟೀಲ್, ಮಲ್ಲಿನಾಥ್ ಮನೆಗೆ ಬಂದಿದ್ದರು. ಈ ವೇಳೆ ಮಲ್ಲಿನಾಥ್ ನ ಪತ್ನಿ, ಮಕ್ಕಳು ಮನೆಯಲ್ಲಿದ್ದರು. ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಕುಟುಂಬದವರು ಮನೆ ಖಾಲಿ ಮಾಡಿ ಬೀಗ ಹಾಕಿ ತೆರಳಿದ್ದಾರೆ.
ಸದ್ಯ ಪೊಲೀಸರು ಮಲ್ಲಿನಾಥ್ ನನ್ನು ವಶಕ್ಕೆ ಪಡೆದಿದ್ದಾರೆ.


