ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ; ವರ್ಷದ 365 ದಿನಗಳು ಅವಿಶ್ರಮಿತವಾಗಿ ದಣಿವರಿಯದೇ ಕೆಲಸ ಮಾಡುವ ಶಕ್ತಿ, ಸ್ಪೂರ್ತಿ ನನ್ನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯ ಕಾರಿಣಿಗೆ ಚಾಲನೆ ದೊರೆತಿದ್ದು, ಗೋಪೂಜೆ, ಧ್ವಜಾರೋಹಣದ ಮೂಲಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಚಾಲನೆ ನೀಡಿದರು. ಕಾರ್ಯ ಕಾರಿಣಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮುಖ್ಯಮಂತ್ರಿಗಳು ಕೆಲಸಮಯ ವಿಶ್ರಮಿಸಬೇಕೆನ್ನುವ ಎಂ.ಪಿ.ಕುಮಾರಸ್ವಾಮಿಯವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ನಾನು ದಣಿವರಿಯದೇ ಕೆಲಸ ಮಾಡುವ ಶಕ್ತಿ ಹೊಂದಿದ್ದೇನೆ. ದಿನದಲ್ಲಿ ಕನಿಷ್ಟ 15 ತಾಸು ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ. 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಈ ನಿಟ್ಟಿನಲ್ಲಿ ತಯಾರಿಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಇಂದು ಮತ್ತು ನಾಳೆ ಬಿಜೆಪಿ ಪಕ್ಷದ ಕಾರ್ಯ ಕಾರಣಿ ಸಭೆ ನಡೆಯಲಿದ್ದು, ಪಕ್ಷದ ಸಂಘಟನೆ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಕಾರ್ಯಕಾರಣಿ ಸಭೆಯ ಕಾರ್ಯಸೂಚಿ ಮತ್ತು ಪಕ್ಷದ ರಾಜ್ಯಧ್ಯಕ್ಷರು ಮತ್ತು ಅರುಣ್ ಸಿಂಗ್ ಅವರು ನಿರ್ಧರಿಸಲಿದ್ದಾರೆ ಎಂದರು.
ಬಿಡಿಎ ಮೇಲೆ ಎಸಿಬಿ ದಾಳಿಗೆ ಸಂಬಂಧಪಟ್ಟಂತೆ ಎಫ್‍ಐಆರ್ ಸಲ್ಲಿಸಲು ಅನುಮತಿ ಕೋರಿದ್ದಾರೆ. ಆಂತರಿಕ ವಿಜಿಲೆನ್ಸ್ ಸೆಲ್‍ನಿಂದ ಬರುವ ಪ್ರಸ್ತಾವನೆಗೆ ತಡಮಾಡದೇ ಅನುಮತಿ ಕೊಡಲಾಗುವುದು ಎಂದು ತಿಳಿಸಿದರು.
2023ರ ಚುನಾವಣೆಯಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಅರುಣ್ ಸಿಂಗ್ ಅವರು ತಿಳಿಸಿದ್ದಾರೆ ಎಂಬುದಕ್ಕೆ ಪ್ರತಿಕ್ರಯಿಸಿ, ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಭಾಜಪ ಪಕ್ಷ ಟೀಂವರ್ಕ್‍ನಲ್ಲಿ ನಂಬಿಕೆ ಇಟ್ಟಿದ್ದು, ಒಗ್ಗಟ್ಟಾಗಿ ಸಂಘಟಿತರಾಗಿ ಕೆಲಸ ಮಾಡಲಾಗುವುದು. ಪಕ್ಷ ಮತ್ತು ಸರ್ಕಾರ ನಡುವೆ ಉತ್ತಮ ಸಂಬಂಧವನ್ನು ಸಂಯೋಜಿಸಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮತ್ತೊಂದು ಪ್ರಕರಣ; ವಿದ್ಯಾರ್ಥಿನಿಯಲ್ಲಿ ಒಮಿಕ್ರಾನ್ ದೃಢ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ