Belagavi NewsBelgaum News

*ಸರ್ಕಾರದ ವಕ್ಫ್ ನೀತಿ ಖಂಡಿಸಿ ಬಿಜೆಪಿಯಿಂದ ಬೈಲಹೊಂಗಲದಲ್ಲಿ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲದ ವತಿಯಿಂದ ಇಂದು ಪಟ್ಟಣದ ಸಂಗೂಳ್ಳಿ ರಾಯಣ್ಣನ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಮೂಲಕ ಮುತ್ತಿಗೆ ಹಾಕಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಪ್ ಎಸ್ ಸಿದ್ದನಗೌಡ್ರ ಮಾತನಾಡಿ, ಕರ್ನಾಟಕದಲ್ಲಿ ಇಂದು ವಕ್ಫ್ ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು ಮಠಮಾನ್ಯಗಳು, ಹಿಂದೂ ದೇವಾಲಯಗಳು ಎಲ್ಲರೂ ಸೇರಿದಂತೆ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್ ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಠಿಕರಣಕ್ಕಾಗಿ ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ. ಈ ಕಾಯ್ದೆಯಲ್ಲಿರುವ ಅಂಶಗಳ ಆಧಾರದ ಮೇಲೆ ಕರ್ನಾಟಕ ಸರ್ಕಾರದ ವಕ್ಫ್ ಬೋರ್ಡ್ ಕರ್ನಾಟಕ ಸರ್ಕಾರದ ಭಾಗವಾಗಿದ್ದರೂ, ಕರ್ನಾಟಕ ಸರ್ಕಾರದ ಹಿಡಿತದಲ್ಲಿ ಎಷ್ಟರಮಟ್ಟಿಗೆ ಇದೆ ಎನ್ನುವ ಪ್ರಶ್ನೆ ಮೂಡಿಸಿದೆ ಎಂದರು.

ಕರ್ನಾಟಕದ ಅಲ್ಪಸಂಖ್ಯಾತರ ಹಾಗೂ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನೆ ಹಾಗೂ ವಕ್ಫ್ ಅದಾಲತ್ ಗಳನ್ನು ನಡೆಸಿ ಕರ್ನಾಟಕ ಸರ್ಕಾರದ 1974ರ ಗೆಜೆಟ್ ಆಗಿರೋ ಪ್ರಕಾರ ರೈತರ ಕೃಷಿ ಜಮೀನುಗಳನ್ನು, ಮಠ-ಮಂದಿರಗಳ ಆಸ್ತಿಗಳನ್ನೂ ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ ಇಂದಿಕರಿಸಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 1974ರ ಸರ್ಕಾರದ ಗೆಜೆಟ್ ರಾಜ್ಯದಲ್ಲಿ ಉಂಟಾಗಿರುವ ಈ ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ. 50 ವರ್ಷದವರೆಗೂ ಇಂದಿಕರಣ ಮಾಡದ ಇಲಾಖೆಗೆ ಈ ತಕ್ಷಣ ಇಂದಿಕರಿಸಿಕೊಳ್ಳುವ ಹಿಂದಿನ ಉದ್ದೇಶ- ಷಡ್ಯಂತ್ರ ಹುನ್ನಾರವಾದರೂ ಏನು ? ಎಂದು ಪ್ರಶ್ನಿಸಿದರು.

ನಂತರ ಮಾತನಾಡಿದ ಉದ್ಯಮಿ ವಿಜಯ ಮೆಟಗುಡ್ಡ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ವಕ್ಸ್ ಕಾಯ್ದೆಯ ಕರಾಳತೆ ಅರಿತು ಹೊಸ ವಕ್ಸ್ ಕಾಯ್ದೆ ರಚಿಸುವ ಕ್ರಮಕ್ಕೆ ಮುಂದಾಗಿ, ಕರಡು ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದಾರೆ. ಆ ಕಾಯ್ದೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಸಂಸತ್ತಿನ ಸಮಿತಿಗೆ ಒಪ್ಪಿಸಲಾಗಿದೆ. ಬಹುತೇಕ ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಜೂರಾಗಬಹುದು ಎನ್ನುವ ಆತಂಕದೊಂದಿಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಖಾನ್ ಅವರು ಎಲ್ಲ ಜಿಲ್ಲೆಗಳಿಗೂ ಹೋಗಿ, ಅಧಿಕಾರಿಗಳ ಮೇಲೆ ಒತ್ತಡ ನಿರ್ಮಾಣ ಮಾಡಿ ರೈತರ ಜಮೀನುಗಳನ್ನು, ಮಠ ಮಂದಿರಗಳನ್ನು ಕಂದಾಯ ದಾಖಲೆಗಳಲ್ಲಿ ಪಕ್ಸ್ ಆಸ್ತಿಯಾಗಿ ದಾಖಲೆಯನ್ನು ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ. ಇದರ ಪರಿಣಾಮವಾಗಿ ಪ್ರತಿಯೊಬ್ಬ ರೈತರು ಆತಂಕಗೊಂಡಿದ್ದಾರೆ. ಮಠಗಳ ಮಠಾಧೀಶರು ಆತಂಕಗೊಂಡಿದ್ದಾರೆ, ಮಂದಿರದ ಮುಖ್ಯಸ್ಥರು ಆತಂಕಗೊಂಡಿದ್ದಾರೆ ಎಂದರು.

ಕಂದಾಯ ದಾಖಲೆಗಳಲ್ಲಿ ತಮ್ಮ ಮಾಲೀಕತ್ವವದ ಆಸ್ತಿಗಳು ವಕ್ಫ್ ಪಾಲಾಗಿದೆಯೇ ಎನ್ನುವುದನ್ನು ದೃಢೀಕರಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರಗಿ, ವಿಶಾಲ ಬೋಗುರ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಅಜ್ಜಪ್ಪ ಹೊಸೂರ, ಆನಂದ ಮೂಗಿ,ಸಂಜೀವ ಮುರಗೋಡ, ಶಿವಯೋಗಿ ಹುಲ್ಲನ್ನೆವರ, ನಾಗಪ್ಪ ಸಂಗೊಳ್ಳಿ, ಗೌಡಪ್ಪ ಹೊಸಮನಿ, ರವಿ ತುರಮರಿ, ಸದಾಶಿವ ಪಾಟೀಲ, ಸುನೀಲ್ ಮಾಳೋದೆ,ಅನೇಕ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button