Kannada NewsKarnataka NewsPolitics

*ಬಿಜೆಪಿಯ ಆಂತರಿಕ ಕಲಹವೇ ಧರ್ಮಸ್ಥಳ ಪ್ರಕರಣಕ್ಕೆ ಕಾರಣ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿ ನಾಯಕರ ಆಂತರಿಕ ಕಲಹವೇ ಕಾರಣ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳು, ಮಾತುಗಳು ನಿಮ್ಮ (ಮಾಧ್ಯಮಗಳ) ಮುಂದಿವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯೆ ನೀಡಿದರು, ಧರ್ಮಸ್ಥಳ ಪ್ರಕರಣ ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಕುರಿತು ಕೇಳಿದಾಗ ಉತ್ತರಿಸಿದ ಶಿವಕುಮಾರ್ ಅವರು, “ಧರ್ಮಸ್ಥಳ ಪ್ರಕರಣ ವಿಚಾರದಲ್ಲಿ ವ್ಯಕ್ತಿ, ಕುಟುಂಬ ಮತ್ತು ಸಂಸ್ಥೆಗೆ ಎಷ್ಟು ಹಾನಿ ಮಾಡಬೇಕೋ ಅದನ್ನು ಈಗಾಗಲೇ ಮಾಡಲಾಗಿದೆ. ಒಟ್ಟಿನಲ್ಲಿ  ಧರ್ಮ ಮತ್ತು ನ್ಯಾಯ ಉಳಿಯಬೇಕು ಎಂಬುದು ನಮ್ಮ ಅಭಿಲಾಷೆ” ಎಂದರು.

ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ

“ವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವವೇ ಬೇರೆ. ಆ ಸಂಸ್ಥೆಯ ಹೆಸರಿಗೆ ಹಾನಿಯಾಗುತ್ತಿದೆಯಲ್ಲ ಎಂದು ಬೇಸರವಾಗಿತ್ತು. “ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ”. ತಿರುಪತಿಯಲ್ಲಿ ಕಾಸಿನ ಹರಕೆ, ಧರ್ಮಸ್ಥಳದಲ್ಲಿ ಮಾತಿನ ಹರಕೆ ಕಟ್ಟಿಕೊಂಡರೆ ಬಿಡುವಂತಿಲ್ಲ. ಇಂತಹ ಪದ್ಧತಿಯಲ್ಲಿ ನಡೆದುಕೊಂಡು ಹೋಗುವ ಕಡೆ ಯಾವುದೇ ಸಮಸ್ಯೆ ಇಲ್ಲ ಎಂಬುದು ನನ್ನ ನಂಬಿಕೆ” ಎಂದರು.

Home add -Advt

“ನನ್ನ ವೈಯಕ್ತಿಕ ಮಾಹಿತಿ ಪ್ರಕಾರ ಹಾಗೂ ಧರ್ಮಸ್ಥಳದಲ್ಲಿ ಯಾವ ಪದ್ಧತಿ ನಡೆಯುತ್ತಿದೆ, ಅಲ್ಲಿ ಯಾವ ಸಂಪ್ರದಾಯಗಳನ್ನು ಆಚರಿಸಲಾಗುತ್ತಿದೆ ಎನ್ನುವ ಬಗ್ಗೆ ನನ್ನ ಅನುಭವದ ಆಧಾರದಲ್ಲಿ ಮಾತನಾಡಿದ್ದೇನೆ” ಎಂದರು.

ಎಸ್ ಐಟಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ

“ಧರ್ಮಸ್ಥಳ ಪ್ರಕರಣದ ಕುರಿತಾಗಿ ಎಸ್ ಐಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆಯೇ, ಇಲ್ಲವೇ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ವರದಿಯನ್ನು ಶೀಘ್ರದಲ್ಲೇ ನೀಡಬೇಕು ಎಂದು ಗೃಹಸಚಿವರು ಹೇಳಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಎಸ್ ಐಟಿ ವರದಿ ಬಂದ ನಂತರ ಏನಿದೆ ಎಂಬುದನ್ನು ಗಮನಿಸೋಣ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಬಂದಷ್ಟು ಮಾಹಿತಿ ಮಾತ್ರ ನನಗೆ ತಿಳಿದಿದೆ. ನಾನು ಯಾವ ಅಧಿಕಾರಿಯ ಬಳಿಯೂ ಯಾವುದೇ ವರದಿ ಕೇಳಲು, ಮಾತನಾಡಲು ಹೋಗಿಲ್ಲ” ಎಂದರು.

“ಅವರು ಸಾವಿರಾರು ಅರ್ಜಿಗಳನ್ನು ನ್ಯಾಯಲಯಕ್ಕೆ ಹಾಕಿಕೊಂಡಿರಬಹುದು. ನಾನು, ನೀವು ಅಥವಾ ಬೇರೆಯವರು ಏನಾದರೂ ಅಪರಾಧ ಮಾಡಿದ್ದ ಸಂದರ್ಭದಲ್ಲಿ ತಪ್ಪಾಯಿತು ಎಂದು ಕ್ಷಮಾಪಣೆ ಕೇಳುವ ಅವಕಾಶ ಈ ದೇಶದ ಕಾನೂನಿನಲ್ಲಿ ಇದೆಯೇ ಎಂಬುದರ ಬಗ್ಗೆ ಮಾಧ್ಯಮಗಳು ವಿಮರ್ಶೆ ಮಾಡಬೇಕು” ಎಂದರು. 

ನನ್ನ ಹಾಗೂ ಶಾಸಕರ ಬಗ್ಗೆಯೂ ಸಮೀಕ್ಷೆ ನಡೆಯುತ್ತದೆ

ಸಚಿವ ಸಂಪುಟ ಪುನಾರಚನೆ ಸಂಬಂಧ ಹೈಕಮಾಂಡ್ ಗೆ ಸಚಿವರು ಮೂರು ತಿಂಗಳ ವರದಿ ನೀಡಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, “ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಬೇರೆ ವಿಚಾರ ಅಥವಾ ಸಚಿವರ ಬಗ್ಗೆ ವರದಿ ಕೇಳಿರುವುದು ನನಗೆ ಗೊತ್ತಿಲ್ಲ. ನನ್ನ ಹಾಗೂ ಶಾಸಕರ ಬಗ್ಗೆ ಪ್ರತಿ ತಿಂಗಳು ನಮ್ಮ ಪಕ್ಷದಲ್ಲಿ ಸಮೀಕ್ಷೆ ನಡೆಯುತ್ತಲೇ ಇರುತ್ತದೆ. ಕ್ಷೇತ್ರ, ಪಕ್ಷ, ಸರ್ಕಾರದಲ್ಲಿ ಏನು ಕೆಲಸ ಮಾಡುತ್ತಿದ್ದಾರೆ, ಹಾಗೂ ಏನೇನು ಚಟುವಟಿಕೆಗಳು ನಡೆಯಿತು ಎಂಬುದರ ಬಗ್ಗೆ ನಿಯಮಿತವಾಗಿ ಹೈಕಮಾಂಡ್ ಗೆ ವರದಿ ಹೋಗುತ್ತಿರುತ್ತದೆ. ಅವರ ಪಾಡಿಗೆ ವರದಿ ತರಿಸಿಕೊಳ್ಳುತ್ತಾರೆ. ನಾವು ಸಹ ಪಕ್ಷದ ಚಟುವಟಿಕೆಗಳು ಏನಿದೆ ಎಂದು ಪ್ರತಿ ತಿಂಗಳೂ ವರದಿ ಕಳುಹಿಸುತ್ತೇವೆ” ಎಂದರು.

Related Articles

Back to top button