ಪ್ರಗತಿವಾಹಿನಿ ಸುದ್ದಿ: ರಾಜಧಾನಿ ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರನ್ನು ಬಸ್ ನಿಂದ ಹೊರಗೆ ಎಳೆದು ಹಲ್ಲೆ ನಡೆಸಿರುವ ಘಟನೆ ಟ್ಯಾನರಿ ರಸ್ತೆಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಬಿಎಂಟಿಸಿ ಬಸ್ ಚಾಲಕ ಗಗನ್ ಹಾಗೂ ನಿರ್ವಾಹಕ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಕೆ.ಜಿ.ಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.26ರಂದು ಮಧ್ಯಾಹ್ನ 3:40ರ ಸುಮಾರಿಗೆ ಬಿಎಂಟಿಸಿ ಬಸ್ ಯಲಹಂಕದಿಂದ ಶಿವಾಜಿನಗರಕ್ಕೆ ತೆರಳುತ್ತಿತ್ತು. ಸಂಜೆ 5:25ರ ಸುಮಾರಿಗೆ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್ ನಿಂತಿದೆ. ಈ ವೇಳೆ ಸ್ಕೂಟಿಯಲ್ಲಿ ಬಂದ ಇಬ್ಬರು, ಏಕಾಏಕಿ ಬಸ್ ನ ಮುಂಭಾಗಿಲಿನಿಂದ ಬಸ್ ಹತ್ತಿ ಚಾಲಕ ಗಗನ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ತಿರುವು ಹಲ್ಲೆ ನಡೆಸಿದ್ದಾರೆ. ನಿರ್ವಾಹಕ ಶಿವಕುಮಾರ್ ತಡೆಯಲು ಹೋಗಿದ್ದಕ್ಕೆ ಇಬ್ಬರನ್ನು ಬಸ್ ನಿಂದ ಹೊರಗಡೆ ಎಳೆದು ಬಸ್ ಮುಂಭಾಗದಲ್ಲಿ ನಿಲ್ಲಿಸಿ ಥಳಿಸಿದ್ದಾರೆ. ಕಿಡಿಗೆಡಿಗಳ ಹಲ್ಲೆಗೆ ಕಂಗಾಲಾಗಿರುವ ಚಾಲಕ, ನಿರ್ವಾಹಕರು ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ