![](https://pragativahini.com/wp-content/uploads/2022/02/Mumbai-Airport.jpg)
ಪ್ರಗತಿವಾಹಿನಿ ಸುದ್ದಿ: ದೇಶಾದ್ಯಂತ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಇಂದು ಒಂದೇ ದಿನ 95ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
ಮೂಲಗಳ ಪ್ರಕಾರ ಕಳೆದ 10 ದಿನಗಳಿಂದ 250 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇಂದು ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ, ಸ್ಪೇಸ್‌ಜೆಟ್, ಅಲಯನ್ಸ್ ಏರ್, ಆಕಾಶ ಏರ್‌ನ ಕನಿಷ್ಠ 95 ವಿಮಾನಗಳಿಗೆ ಬೆದರಿಕೆಗಳು ಬಂದಿವೆ. ಅದರಲ್ಲಿ 25 ಆಕಾಶ ಏರ್ ವಿಮಾನಗಳು, ಏರ್ ಇಂಡಿಯಾ, ಇಂಡಿಗೋ ಮತ್ತು ವಿಸ್ತಾರಾದಿಂದ ತಲಾ 20, ಸ್ಪೇಸ್ ಜೆಟ್ ಮತ್ತು ಅಲಯನ್ಸ್ ಏರ್‌ನ ತಲಾ ಐದು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿವೆ.
ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗುತ್ತಿದ್ದಂತೆ ಇತ್ತೀಚೆಗೆ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಆರೋಪಿಗಳನ್ನು ನೋ-ಫೈ ಪಟ್ಟಿಗೆ ಸೇರಿಸುವುದಾಗಿ ತಿಳಿಸಿದ್ದಾರೆ. ಇಂದಿನ ಘಟನೆಗೂ ಮೊದಲು ಕಳೆದ ಹತ್ತು ದಿನಗಳಲ್ಲಿ 170 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಅವುಗಳಲ್ಲಿ ಹೆಚ್ಚಿನವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೇ ಬೆದರಿಕೆಗಳು ಬಂದಿವೆ. ಆದರೆ ಅವೆಲ್ಲವೂ ಹುಸಿ ಬೆದರಿಕೆಗಳಾಗಿವೆ. ಇದರಿಂದಾಗಿ ನೂರಾರು ಪ್ರಯಾಣಿಕರು ಸರಿಯಾದ ಸಮಯಕ್ಕೆ ಪ್ರಯಾಣ ಮಾಡಲಾಗದೆ ಪರದಾಡಿದ್ದಾರೆ. ಇದು ಅರೆಸೇನಾ ಸಿಬ್ಬಂದಿ ಮತ್ತು ವಾಯುಯಾನ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ