ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಿಮಗೊಂದೇ ಅಲ್ಲ, ಬೇರೆಯವರಿಗೂ ಬರುತ್ತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭಾನುವಾರ ಬೆಳಗ್ಗೆಯಷ್ಟೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಎಚ್ಚರಿಕೆ ನೀಡಿದ್ದರು.
ನೀವು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪಾ? ಎಂದೂ ಪ್ರಶ್ನಿಸಿದ್ದರು.
17 ಜನ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಆಪರೇಶನ್ ಮಾಡಿ ಸಮ್ಮಿಶ್ರ ಸರಕಾರ ಕೆಡವಿ, ತಮ್ಮ ಸರಕಾರ ರಚನೆ ಮಾಡಿಕೊಂಡಿದ್ದ ಬಿಜೆಪಿ ನಾಯಕರಿಗೆ ಈಗ ಕಸಿವಿಸಿ ಶುರುವಾಗಿದೆ. ಬಾಂಬೆ ಬಾಯ್ಸ್ ರಿಟರ್ನ್ ಆಗುತ್ತಿದ್ದಾರೆ. ಆಗ ಬಿಜೆಪಿಗೆ ಜಿಗಿದಿದ್ದವರು ಈಗ ಕಾಂಗ್ರೆಸ್ ಗೆ ಮರು ಸೇರ್ಪಡೆಯಾಗುತ್ತಿದ್ದಾರೆ. ಸುದ್ದಿ ತಿಳಿದ ಬಿಜೆಪಿಯ ಮೂವರು ಮಾಜಿ ಮುಖ್ಯಮಂತ್ರಿಗಳು ಮತ್ತು ಓರ್ವ ಮಾಜಿ ಉಪಮುಖ್ಯಮಂತ್ರಿ ಆಪರೇಶನ್ ಮೂಲಕ ಬಂದವರನ್ನು ಉಳಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಆದರೆ ಕಾಂಗ್ರೆಸ್ ನ ರಿವರ್ಸ್ ಆಪರೇಶನ್ ಈಗ ಯಶಸ್ವಿಯಾಗುತ್ತಿರುವಂತಿದೆ.
ಬಾಂಬೆ ಬಾಯ್ಸ್ ಗಳ ಪೈಕಿ ಮೊದಲ ವಿಕೆಟ್ ಪತನಕ್ಕೆ ಕ್ಷಣಗಣನೆ ಶುರುವಾಗಿದೆ. ಮಾಜಿ ಸಚಿವ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ ಕಾಂಗ್ರೆಸ್ ನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಭಾನುವಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಚರ್ಚಿಸಿದ್ದಾರೆ. ಸೋಮಶೇಖರ್ ಬೆಂಬಲಿಗರು ಮಂಗಳವಾರವೇ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸೋಮಶೇಖರ ಸೇರ್ಪಡೆ ದಿನಾಂಕ ನಿಗದಿಯಾಗಿಲ್ಲ.
`ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚಿಸಿದರು’ ಎಂದು ಮುಖ್ಯಮಂತ್ರಿಗಳ ಕಚೇರಿ ಫೋಟೋ ರಿಲೀಸ್ ಮಾಡಿದೆ.
ಸೋಮಶೇಖರ್ ಜೊತೆಗೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ಆಯನೂರು ಮಂಜುನಾಥ ಮೊದಲಾದವರು ಕಾಂಗ್ರೆಸ್ ಸೇರ್ಪಡೆಗೆ ಶೀಘ್ರದಲ್ಲೇ ಮುಹೂರ್ತ ನಿಗದಿಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 17 ಬಾಂಬೆ ಬಾಯ್ಸ್ ಗಳ ಪೈಕಿ 5 -7 ಜನರು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತ ಎನ್ನಲಾಗುತ್ತಿದೆ. ಇನ್ನೂ ಕೆಲವರಿಗೆ ಕಾಂಗ್ರೆಸ್ ಬಾಗಿಲು ಮುಚ್ಚಿದೆ.
ಒಟ್ಟಾರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಇನ್ನೂ ಎದ್ದೇಳಲಾಗದ ಸ್ಥಿತಿಯಲ್ಲಿರುವ ಬಿಜೆಪಿಗೆ ಈಗಿನ ಬೆಳವಣಿಗೆ ಅರಗಿಸಿಕೊಳ್ಳಲಾಗದಂತಾಗಿದೆ. ಮತ್ತೆ ಅಧಿಕಾರಕ್ಕಾಗಿ ಆಪರೇಶನ್ ನಂತಹ ಅಡ್ಡ ದಾರಿ ಹಿಡಿಯುವಾಗ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ