*ಕ್ಯಾನ್ಸರ್ ನಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಗೆ ಅಸ್ಥಿಮಜ್ಜೆ ಕಸಿ ಯಶಸ್ವಿ: KLE ಆಸ್ಪತ್ರೆ ವೈದ್ಯರ ಮತ್ತೊಂದು ಸಾಧನೆ*


ವಿಶ್ವದರ್ಜೆಯ ಗುಣಮಟ್ಟದ ಚಿಕಿತ್ಸೆ; ಬೆಳಗಾವಿ ಕೆ ಎಲ್ ಇ ಯಲ್ಲಿ ಲಭ್ಯ: ಪ್ರಭಾಕರ ಕೋರೆ
ಪ್ರಗತಿವಾಹಿನಿ ಸುದ್ದಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಯೋರ್ವಳಿಗೆ ಅಸ್ಥಿಮಜ್ಜೆ ಕಸಿ ನೆರವೇರಿಸುವಲ್ಲಿ ಕೆಎಲ್ಇ ಡಾ. ಸಂಪತಕುಮಾರ ಶಿವಣಗಿ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದು, ಬೆಂಗಳೂರು ಹೊರತುಪಡಿಸಿದರೆ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಅಸ್ಥಿಮಜ್ಜೆ (ಬೋನ್ ಮ್ಯರೋ ಟ್ರಾನ್ಸಪ್ಲ್ಯಾಂಟ್) ಕಸಿ ನೆರವೇರಿಸಲಾಗಿದೆ. ಬಾಲಕಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.
ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ರಾಯಬಾಗ ತಾಲೂಕಿನ ರೈತನ ಮಗಳಿಗೆ ಸಂಪೂರ್ಣ ಉಚಿತವಾಗಿ ಅಸ್ಥಿಮಜ್ಜೆ ಕಸಿಯನ್ನು ನೆರವೇರಿಸಲಾಗಿದೆ. ಕ್ಯಾನ್ಸರ್ ಸಂಬಂಧಿತ ಒಂದೇ ಸೂರಿನಡಿ ವಿಶ್ವದರ್ಜೆಯ ಗುಣಮಟ್ಟದ ಚಿಕಿತ್ಸೆ ಈ ಭಾಗದ ಜನರಿಗೆ ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳೊಂದಿಗೆ ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಯನ್ನು ಒಂದೇ ಸೂರಿನಡಿ ಕಲ್ಪಿಸಲಾಗುತ್ತಿದೆ. ಈಗ ಪ್ರಥಮ ಬಾರಿಗೆ ಉತ್ತರ ಕರ್ಣಾಟಕದಲ್ಲಿ ಅಸ್ಥಿಮಜ್ಜೆ (ಬೋನ್ ಮ್ಯರೋ ಟ್ರಾನ್ಸಪ್ಲ್ಯಾಂಟ್) ಕಸಿ ನೆರವೇರಿಸಲಾಗಿದೆ. ರೋಗಿಗಳ ಸುರಕ್ಷಿತ ಆರೈಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಭಾರತದಲ್ಲಿ ಪ್ರತಿವರ್ಷ ಸುಮಾರು 1.46 ಮಿಲಿಯನ್ ಹೊಸ ಕ್ಯಾನ್ಸರ ರೋಗಿಗಳು ಕಂಡುಬರುತ್ತಿದ್ದು, ಅದರಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಕ್ಕಳು ಕಂಡು ಬರುತ್ತಿದ್ದಾರೆ. ಚಿಕ್ಕಮಕ್ಕಳಲ್ಲಿ ಸಾಮಾನ್ಯವಾಗಿ ಲುಕೆಮಿಯಾ ಕಂಡುಬರುತ್ತಾರೆ. ಶೀಘ್ರ ರೋಗ ಪತ್ತೆ ಮಾಡಿ ಅವರಿಗೆ ಸಮಗ್ರವಾದ ಚಿಕಿತ್ಸೆ ನೀಡಲು ತಜ್ಞವೈದ್ಯರ ತಂಡವು ಇದೆ. ಚಿಕ್ಕಮಕ್ಕಳಿಗೆ ಹಾಗೂ ವಯಸ್ಕರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಶಸ್ತ್ರಚಿಕಿತ್ಸೆಯ ನಂತರ ಚಿಕ್ಕಮಕ್ಕಳ ಕ್ಯಾನ್ಸರ್ ತಜ್ಞವೈದ್ಯೆ ಡಾ. ಅಭಿಲಾಷಾ ಎಸ್, ಚಿಕಿತ್ಸೆ ನೀಡಲಿದ್ದಾರೆ. ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಮಹೇಶ ಕಲ್ಲೋಳ್ಳಿ ಅವರಿಗೆ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರಾದ ಡಾ. ಸಂತೋಷ ಕುರಬೆಟ ಅವರು ಸಹಕರಿಸಿದರು. ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಇದೇ ಸಂದರ್ಭದಲ್ಲಿ ಡಾ. ಪ್ರಭಾಕರ ಕೋರೆ ಅವರು ಅಭಿನಂಧಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ, ಡಾ. ಅಭಿಲಾಷಾ ಎಸ್. ಡಾ. ಮಹೇಶ ಕಲ್ಲೋಳ್ಳಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ