ಪ್ರಗತಿವಾಹಿನಿ ಸುದ್ದಿ: ಜನಸಾಮಾನ್ಯರಿಗೆ ವಿಧಾನಸೌಧ ಆವರಣ ಮುಕ್ತವಾಗಿಸಿ, ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ದೊಂದಿಗೆ ಫೆ.28ರಿಂದ ಮಾ.3ರವರೆಗೆ ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮತ್ತು ಸಾಹಿತ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಅವರು ಸೋಮವಾರ ಮಂಗಳೂರು ಸಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದ ಆವರಣ ದಲ್ಲಿ ಫೆ.28ರಿಂದ ಮಾ.3ರವರೆಗೆ ಪುಸ್ತಕ ಮತ್ತು ಸಾಹಿತ್ಯ ಮೇಳ ನಡೆಯಲಿದೆ. ನಾಡಿನ ಸಾಹಿತಿಗಳು, ಬುದ್ದಿಜೀವಿಗಳು, ಬರಹಗಾರರು, ಸಚಿವರು, ಶಾಸಕರು ಸೇರಿದಂತೆ ಪುಸ್ತಕಗಳನ್ನು ಪ್ರೀತಿಸುವವರು ಭಾಗವಹಿಸಲಿರುವ ಈ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.28ರಂದು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಪುಸ್ತಕ ಮೇಳದೊಂದಿಗೆ ಸಾಹಿತ್ಯ ಚರ್ಚೆ, ಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಪುಸ್ತಕ ಮೇಳದ ಯಶಸ್ಸಿಗೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.
ಪುಸ್ತಕ ಮೇಳದಲ್ಲಿ ಖಾಸಗಿ ಪುಸ್ತಕ ಪ್ರಕಾಶನ ಗಳಿಗೂ ಪುಸ್ತಕಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಲೇಖಕರು ಅಥವಾ ಸಾಹಿತಿಗಳು ತಮ್ಮ ಪುಸ್ತಕಗಳನ್ನು ಬಿಡುಗಡೆಗೊಳಿಸಲು ಅವಕಾಶ ಕಲ್ಪಿಸಲಾಗುವುದು. ಇದಲ್ಲದೆ, ಉತ್ತಮ ಸಾಹಿತ್ಯ ಕೃತಿಗೆ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಸ್ಪೀಕರ್ ವಿವರಿಸಿದರು.
ಶಾಸಕರ ಅನುದಾನದಲ್ಲಿ ಖರೀದಿಗೆ ಅವಕಾಶ
ಸ್ಪರ್ಧಾತ್ಮಕ ಪುಸ್ತಕಗಳು ಸೇರಿದಂತೆ ನಾನ ಪ್ರಕಾರದ ಬೇಡಿಕೆಯ ಪುಸ್ತಕಗಳನ್ನು ಶಾಸಕರ ಇಲ್ಲಿ ಖರೀದಿಸಿ ತಮ್ಮ ಕ್ಷೇತ್ರಗಳಲ್ಲಿನ ಗ್ರಂಥಾಲಯಗಳು, ಸರಕಾರಿ ಕಾಲೇಜುಗಳಿಗೆ ಪೂರೈಸಬಹುದು. ಇದಕ್ಕೆ ಪೂರಕವಾಗಿ ಶಾಸಕ ನಿಧಿಯಲ್ಲಿನ 2ರಿಂದ 3 ಲಕ್ಷರೂ.ವರೆಗೆ ಪುಸ್ತಕಗೆ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಭಾಧ್ಯಕ್ಷರು ಹೇಳಿದರು.
ಪುಸ್ತಕ ಮೇಳದ ಅವಧಿಯಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು, ಮೇಳದ ಸಂದರ್ಭದಲ್ಲಿ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಇಲ್ಲಿ ಭೇಟಿ ನೀಡುವವರಿಗೆ ತರಹೇವಾರಿ ತಿಂಡಿ-ಖಾದ್ಯಗಳನ್ನು ಒಳಗೊಂಡ ಆಹಾರ ಮೇಳವೂ ಇರಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ವಿಚಾರಗೋಷ್ಠಿಗಳು, ಚರ್ಚೆಗಳೂ ನಡೆಯಲಿವೆ ಎಂದು ಯು.ಟಿ. ಖಾದರ್ ತಿಳಿಸಿದರು.
ಲಾಂಛನ ವಿನ್ಯಾಸ ಆಹ್ವಾನ
ನಾಲ್ಕು ದಿನಗಳ ಪುಸ್ತಕ-ಸಾಹಿತ್ಯ ಮೇಳಕ್ಕೆ ಸಂಬಂಧಪಟ್ಟಂತೆ ಪ್ರಶಸ್ತಿ ನೀಡಲು ಹಾಗೂ ಲಾಂಛನ ವಿನ್ಯಾಸಗೊಳಿಸಲು ಉದ್ದೇಶಿಸಿದ್ದು, ಈ ಸಂಬಂಧ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದೆ. ಪ್ರಶಸ್ತಿಗೆ ಸೂಕ್ತ ಹೆಸರನ್ನು ಹಾಗೂ ಪುಸ್ತಕ ಮೇಳದ ಲಾಂಛನವನ್ನು ಕಳುಹಿಸಬಹುದು. ಆಯ್ಕೆಯಾಗುವವರಿಗೆ ಬಹುಮಾನ ನೀಡಲಾಗುವುದು. ಆಸಕ್ತರು ಪುಸ್ತಕ ಮೇಳಕ್ಕೆ ಸರಿಹೊಂದುವ ಲಾಂಛನವನ್ನು ವಿನ್ಯಾಸಗೊಳಿಸಿ ಹಾಗೂ ಪ್ರಶಸ್ತಿಯ ಹೆಸರನ್ನು ತಮ್ಮ ವಿವರಗಳೊಂದಿಗೆ ಫೆ.3ರೊಳಗೆ ಇಮೇಲ್ [email protected] ಅಥವಾ ವಾಟ್ಸಾಪ್ ಸಂಖ್ಯೆ 9448108798 ಇದಕ್ಕೆ ಕಳುಹಿಸಬಹುದು ಎಂದು ವಿಧಾನಸಭಾಧ್ಯಕ್ಷರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ