Uncategorized

ಎಂಇಎಸ್ ಗೆ ಬಿತ್ತು ಮೂಗುದಾರ: ಇನ್ನಾದರೂ ಬೆಳಗಾವಿಗೆ ದೊರೆತೀತೇ ಶಾಂತಿ?

 

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಪದೇಪದೆ ಗಡಿ ಕ್ಯಾತೆ ತೆಗೆದು ಶಾಂತಿ ಕದಡುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಅಮಿತ್ ಶಾ ನೇತೃತ್ವದಲ್ಲಿ ಇಂದು ಸಂಜೆ ನಡೆದ ಕರ್ನಾಟಕ- ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಮೂಗುದಾರ ಹಾಕಿದೆ.

ಶಾ ನೀಡಿದ ಸಲಹೆ ಸೂಚನೆಗಳು ಇನ್ನು ಮುಂದೆ ಎಂಇಎಸ್ ಬಾಯಲ್ಲಿ ಬಹಿರಂಗವಾದ ಕ್ಯಾತೆಯ ಮಾತೇ ಹೊರಡದ ರೀತಿಯಲ್ಲಿವೆ ಎಂಬುದು ಗಮನಾರ್ಹ. ಬೀದಿಗೆ ಬಂದು ರಂಪ ಮಾಡುವ ಚಾಳಿಯನ್ನೇ ಪ್ರದರ್ಶಿಸುತ್ತ ಬಂದ ಎಂಇಎಸ್ ಇನ್ನು ಮುಂದೆ ಸುಪ್ರೀಂ ಕೋರ್ಟ್ ಆದೇಶದವರೆಗೆ ಬೀದಿಗೂ ಬರುವಂತಿಲ್ಲ, ಅನ್ಯ ಮಾರ್ಗವಾದ ಜಾಲತಾಣಗಳಲ್ಲೂ ಅಪಶೃತಿ ಎತ್ತುವಂತಿಲ್ಲವಾಗಿದೆ.

ಕರ್ನಾಟಕ- ಮಹಾರಾಷ್ಟ್ರಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಸಂದೇಶ ಹರಿಬಿಟ್ಟರೆ ಅಥವಾ ಉಭಯ ರಾಜ್ಯಗಳ ನಡುವಣ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸಿದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಗೃಹಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಸಿಎಂಗಳಿಗೆ ಸೂಚಿಸಿದ್ದಾರೆ.

ಸಭೆಯ ನಂತರ ನಿರ್ಣಯಗಳ ಕುರಿತು ಅವರು ಮಾಧ್ಯಮಗಳಿಗೆ ತಾವು ನೀಡಿದ ಹೇಳಿಕೆಗಳ ವಿಡಿಯೊವನ್ನು ಶಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಮುಂದಿರುವ ಗಡಿ ವಿವಾದ ಪ್ರಕರಣದ ತೀರ್ಪು ಬರುವವರೆಗೂ ಉಭಯ ರಾಜ್ಯಗಳು ಪರಸ್ಪರರ ಪ್ರದೇಶಗಳನ್ನು ಕೇಳಕೂಡದು.

ಉಭಯ ರಾಜ್ಯಗಳ ಗಡಿಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಬೇಕು.

ಉಭಯ ರಾಜ್ಯಗಳ ತಲಾ ಮೂವರು ಮಂತ್ರಿಗಳನ್ನೊಳಗೊಂಡ ಒಟ್ಟು ಆರು
ಸಚಿವರ ಸಮಿತಿ ರಚಿಸಿ ಪರಸ್ಪರ ಸಮನ್ವಯ ಸಾಧಿಸಬೇಕು.

ಗಡಿವಿವಾದವನ್ನು ಸಂವಿಧಾನದ ಪ್ರಕಾರವೇ ಪರಿಹರಿಸಬೇಕೇ ಹೊರತು ಬೀದಿಗಳಲ್ಲಿ ಅಲ್ಲ ಎಂಬ ಶಾ ಸಲಹೆಯನ್ನು ಸಕಾರಾತ್ಮಕವಾಗಿ ಸ್ಪಂದಿಸಿದ ಎರಡೂ ರಾಜ್ಯಗಳ ಸಿಎಂಗಳು ಒಪ್ಪಿಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಗಡಿ ಕಿಚ್ಚು: ತಟಸ್ಥ ಸಮಿತಿ ರಚಿಸಲು ಉಭಯ ರಾಜ್ಯಗಳಿಗೆ ಅಮಿತ್ ಶಾ ಸೂಚನೆ

https://pragati.taskdun.com/border-dispute-karnataka-maharashtra-cms-meeting-begins-under-the-mediation-of-amit-shah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button