Kannada NewsKarnataka News

ಗಡಿ ಮಾತುಕತೆ: ಅಮಿತ್ ಶಾ ಎದುರು ಮಣಿಯದಿರಲು ಮುಖ್ಯಮಂತ್ರಿಗೆ ಸಲಹೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ  ಡಿ.14 ರಂದು ಕೇಂದ್ರದ ಗೃಹ ಸಚಿವ  ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಆಹ್ವಾನಿಸಿರುವುದು ಕರ್ನಾಟಕದ, ವಿಶೇಷವಾಗಿ, ಗಡಿ  ಕನ್ನಡಿಗರಲ್ಲಿ ಆತಂಕ ಮತ್ತು ಕಳವಳವನ್ನು ಉಂಟು ಮಾಡಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದವರು ಕಳೆದ 67 ವರ್ಷಗಳಿಂದ ಗಡಿ ವಿವಾದವನ್ನು ಜೀವಂತವಿಡಲು ನಡೆಸಿರುವ ಕುತಂತ್ರಗಳ ಹಿನ್ನೆಲೆಯಲ್ಲಿ ನಾಡಿನ ಕನ್ನಡಿಗರಲ್ಲಿ ಒಂದು ರೀತಿಯ ಆತಂಕ ಉಂಟಾಗುವುದು ಸಹಜವಾಗಿದೆ ಎಂದು ಅವರು ತಿಳಿಸಿದ್ದಾರೆ.

1956 ರಲ್ಲಿ ನ್ಯಾ.ಮೂ. ಫಜಲ್ ಅಲಿ ನೇತೃತ್ವದ ಆಯೋಗ  ಹಾಗೂ 1967 ರಲ್ಲಿ ಮೆಹರ್‌ಚಂದ ಮಹಾಜನ ಆಯೋಗ ನೀಡಿದ ವರದಿಗಳೇ ಅಂತಿಮವಾಗಿವೆ. ಈ ವರದಿಗಳನ್ನು ಅಂಗೀಕರಿಸಿ ಕರ್ನಾಟಕ ವಿಧಾನ ಮಂಡಲವು ಅನೇಕ ಬಾರಿ ಸರ್ವಾನುಮತದ ನಿರ್ಣಯಗಳನ್ನು ಕೈಗೊಂಡಿದೆ. ಆದರೆ ಮಹಾರಾಷ್ಟçದ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಒಂದಿಲ್ಲೊಂದು ಕಸರತ್ತು ನಡೆಸಿಕೊಂಡಿಯೇ ಬಂದಿದ್ದಾರೆ. ಕೊನೆಗೆ 2004 ರಲ್ಲಿ ಕರ್ನಾಟಕದ 5 ಜಿಲ್ಲೆಗಳ 865 ಹಳ್ಳಿ ಪಟ್ಟಣ್ಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕೆಂದು ಕೋರಿ ಸರ್ವೋನ್ನತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಡಿಸೆಂಬರ್ 14 ರ ಮಾತುಕತೆಯ ಹಿನ್ನೆಲೆಯಲ್ಲಿ  ಕೆಲ ಮಹತ್ವದ ಅಂಶಗಳನ್ನಅವರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಅವು ಈ ಕೆಳಗಿನಂತಿವೆ :

1) ಗಡಿ ವಿವಾದ ಬಗೆಹರಿಸುವ ಸಂಬಂಧ ಕೇಂದ್ರವು ಮಹಾರಾಷ್ಟ್ರದ ಜೊತೆ ಮಾತುಕತೆ ನಡೆಸಲು 1960 ರಲ್ಲಿ ಅಂದಿನ ಮುಖ್ಯಮಂತ್ರಿ ದಿ. ಬಿ.ಡಿ. ಜತ್ತಿ ಅವರ ಮೇಲೆ ಒತ್ತಡ ತಂದಿತ್ತು. ನೆಹರೂ ಮಂತ್ರಿ ಮಂಡಲದಲ್ಲಿ ಗೃಹ ಸಚಿವರಾಗಿದ್ದ ಗೋವಿಂದ ವಲ್ಲಭ ಪಂತ ಅವರು ಜತ್ತಿ ಅವರನ್ನು ಮುಂಬಯಿಗೆ ಹೋಗುವಂತೆ ಒತ್ತಡ ತಂದರು. ಈ ಸುದ್ದಿ ಬಹಿರಂಗವಾದ ತಕ್ಷಣ ಕರ್ನಾಟಕದ ಕನ್ನಡಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ‘ಮಹಾರಾಷ್ಟ್ರಕ್ಕೆ ಕರ್ನಾಟಕವು ಕೊಡುವುದೇನೂ ಇಲ್ಲ. ಬರಬೇಕಿರುವ ಸೋಲಾಪುರ, ಅಕ್ಕಲಕೋಟೆ, ಸಾಂಗಲಿ ಮುಂತಾದ ಪ್ರದೇಶಗಳನ್ನು ಕರ್ನಾಟಕಕ್ಕೆ ವರ್ಗಾಯಿಸುವಂತೆ ಕೇಳಿ’ ಎಂದು ಮುಖ್ಯಮಂತ್ರಿ ಜತ್ತಿಯವರಿಗೆ ಒತ್ತಾಯಿಸಿದರು.

ಕೇಂದ್ರದ ಗೃಹ ಸಚಿವರ ಒತ್ತಡದ ಹಿನ್ನೆಲೆಯಲ್ಲಿ ಮುಂಬಯಿಗೆ ಒಬ್ಬರೇ ಹೋದ ಜತ್ತಿಯವರು ಅಂದಿನ ಮಹಾರಾಷ್ಟçದ ಮುಖ್ಯಮಂತ್ರಿ ವೈ.ಬಿ. ಚವ್ಹಾಣ ಅವರೊಂದಿಗೆ ಮಾತುಕತೆ ನಡೆಸಿದರು. ‘ಉಭಯ ರಾಜ್ಯಗಳ ನಡುವೆ ಸೌಹಾರ್ಧ ಸಂಬಂಧ ಉಳಿಯಲು ಬೆಳಗಾವಿ ಕಾರವಾರಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿ’ ಎಂದು ಚವ್ಹಾಣರು ಜತ್ತಿಯರಿಗೆ ಹೇಳಿದ್ದರು. ಆಗ ಜತ್ತಿಯವರು ‘’ನೀವು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ನಾಯಕರು. ನಾನು ಹೇಗೆ ಕುಳ್ಳನೊ ಹಾಗೆಯೇ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವ ಚಿಕ್ಕ ನಾಯಕ. ನನ್ನ ಜನ ಮಹಾರಾಷ್ಟ್ರಕ್ಕೆ ಕೊಡಬೇಕಾದುದೇನಿಲ್ಲ. ನಮಗೆ ಬರಬೇಕಾಗಿರುವ ಪ್ರದೇಶಗಳನ್ನು ಕೊಡುವಂತೆ ಕೇಳಿ,” ಎಂದಿದ್ದಾರೆ.

”ದಯಮಾಡಿ ದೊಡ್ಡ ಮನಸ್ಸು ಮಾಡಿ ನಮ್ಮವರ ಭಾವನೆಗಳನ್ನು ಪುರಸ್ಕರಿಸಿ,” ಎಂದು ಚವ್ಹಾಣರ ಮುಖದ ಮೇಲೆ ಹೇಳಿ ಬಿಟ್ಟರು. ಚವ್ಹಾಣರು ಕುಪಿತರಾದರು. ಅಲ್ಲದೇ ಹೊರಗೆ ಕಾಯುತ್ತಿರುವ ಪತ್ರಿಕಾ ಪ್ರತಿನಿಧಿಗಳಿಗೆ ಏನು ಹೇಳುವದು ಎಂದು ಕೇಳಿದರಂತೆ.  ಚವ್ಹಾಣರು ಇದಕ್ಕೆ ಒಪ್ಪಲಿಲ್ಲ ಮಾತುಕತೆ ವಿಫಲವಾಯಿತು. ಆದರೆ ಜತ್ತಿಯವರು ಪತ್ರಿಕೆಯವರಿಗೆ ವಿಫಲವಾದದ್ದನ್ನೆ ವಿವರಿಸಿ ಮುಂಬಯಿಂದ ಬೆಂಗಳೂರಿಗೆ ಮರಳಿದರು.

2) 1966 ರ ಅಕ್ಟೋಬರ್ 9 ರಂದು ಮುಂಬಯಿಯಲ್ಲಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ನಾಯಕತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಿತು. ಗಡಿ ವಿವಾದ ಬಗೆಹರಿಸಲು ಮತ್ತೊಂದು ಆಯೋಗವನ್ನು ನೇಮಿಸುವ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ ಅವರು ಆರಂಭದಲ್ಲಿ ಆಯೋಗದ ನೇಮಕಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಆದರೆ ಮಹಾರಾಷ್ಟ್ರದ ಬಲಾಢ್ಯ ನಾಯಕರು ಆಯೋಗದ ನೇಮಕಕ್ಕೆ ಇಂದಿರಾ ಗಾಂಧಿಯವರ ಮೇಲೆ ಎಲ್ಲ ರೀತಿಯ ಒತ್ತಡದ ತಂತ್ರಗಳನ್ನು ಬಳಸಿದರು. ಹಿರಿಯ ಸ್ವಾತಂತ್ರ ಹೋರಾಟಗಾರ ಸೇನಾಪತಿ ಬಾಪಟ ಅವರನ್ನು ಮುಂಬಯಿಯಲ್ಲಿ ಆಮರಣ ಉಪವಾಸಕ್ಕೆ ಕೂಡಿಸಿದರು. ಇಂದಿರಾ ಗಾಂಧಿಯವರು ನಿಜಲಿಂಗಪ್ಪ ಅವರನ್ನು ಆಯೋಗದ ನೇಮಕಕ್ಕೆ ಒಪ್ಪಿಸಿದರು. ಕಾರ್ಯಕಾರಣಿಯ ನಿರ್ಧಾರದಂತೆ ಮೆಹರ್‌ಚಂದ ಮಹಾಜನ ಆಯೋಗವನ್ನು 1966 ರ ಅಕ್ಟೋಬರ್ 25 ರಂದು ಕೇಂದ್ರ ಸರಕಾರ ನೇಮಿಸಿತು.

3) ಈ ಹಿನ್ನೆಲೆಯಲ್ಲೆ ತಾವು ಕರ್ನಾಟಕ ವಿಧಾನ ಮಂಡಲವು ಅಂಗೀಕರಿಸಿದ ನಿರ್ಣಯದ ಚೌಕಟ್ಟಿನಲ್ಲಿಯೇ ಅಮಿತ ಶಹಾ ಅವರೊಂದಿಗೆ ಮಾತುಕತೆ ನಡೆಸಬೇಕು. ಮಹಾರಾಷ್ಟ್ರದ ಯಾವುದೇ ಕುತಂತ್ರಗಳಿಗೆ ಬಲಿ ಬೀಳಬಾರದು. ತಾವು 1960 ರಲ್ಲಿ ಜತ್ತಿಯವರು ನಡೆದುಕೊಂಡಂತೆ ನಡೆದುಕೊಳ್ಳಬೇಕೇ ಹೊರತು 1966 ರಲ್ಲಿ ನಿಜಲಿಂಪ್ಪನವರು ನಡೆದುಕೊಂಡಂತೆ ನಡೆದುಕೊಳ್ಳಬಾರದು ಎಂದು ಚಂದರಗಿ ಸಲಹೆ ನೀಡಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಗಳು ಕರ್ನಾಟಕದ ಕನ್ನಡಿಗರ ಹಿತಾಸಕ್ತಿ ಕಾಪಾಡುವುದಾಗಿ ಹಾಗೂ ಕರ್ನಾಟಕದ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದು ನಾಡಿನ ಸಮಸ್ತ ಕನ್ನಡಿಗರು ನಂಬಿದ್ದಾರೆ. ಹೀಗಾಗಿ ಸಿಎಂ ಮೇಲೆ ವಿಶ್ವಾಸ ಇರಿಸಿಕೊಂಡೇ ಮೇಲಿನ ಕೆಲವು ಐತಿಹಾಸಿಕ ಘಟನೆಗಳನ್ನು ತಮ್ಮ ಗಮನಕ್ಕೆ ತಂದಿರುವುದಾಗಿ ಅಶೋಕ ಚಂದರಗಿ ಪತ್ರದಲ್ಲಿ ತಿಳಿಸಿದ್ದಾರೆ.

*ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂ ಬಸವರಾಜ ಬೊಮ್ಮಾಯಿ*

https://pragati.taskdun.com/mahadai-issuecm-basavaraj-bommaireaction/

*ಬಾಲಕನ ತಲೆಯನ್ನು ರಸ್ತೆಗೆ ಅಪ್ಪಳಿಸಿ ಕೊಂದ ಕಿರಾತಕ*

https://pragati.taskdun.com/boy-walking-on-street-in-humanly-killed-by-young-man/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button