
ಪ್ರಗತಿವಾಹಿನಿ ಸುದ್ದಿ: ಮನೆಯ ಮುಂದೆ ಇತರ ಮಕ್ಕಳ ಜತ ಆಟವಾಡುತ್ತಿದ್ದ ಮೂರು ವರ್ಷದ ಮಗು ಆಕಸ್ಮಿಕವಾಗಿ 250 ಅಡಿ ಆಳದ ಕೊಳವೆಬಾವಿಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಹರಿಯಾಣದ ಫರಿದಾಬಾದ್ನ ಸೀಹಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮೂರು ವರ್ಷದ ನೇಹಾ ಮೃತ ಕಂದಮ್ಮ, ಸತತ 10 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಬಾಅಲಕಿಯನ್ನು ಹೊರಗೆ ತೆಗೆಯಲಾಗಿದ್ದರೂ, ಜೀವ ಉಳಿಸಲು ಸಾದ್ಯವಾಗಿಲ್ಲ.
ಉತ್ತರ ಪ್ರದೇಶದ ಮೈನ್‌ಪುರಿ ಮೂಲದ ಕೂಲಿ ಕಾರ್ಮಿಕ ರಾಮ್ದಿನ್ ಅವರ ಪುತ್ರಿ ನೇಹಾ, ಭಾನುವಾರ ಸಂಜೆ ಸುಮಾರು 6 ರಿಂದ 7 ಗಂಟೆಯ ಸುಮಾರಿಗೆ ಮನೆಯ ಸಮೀಪ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಸಮೀಪದಲ್ಲೇ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ಮೇಲೆ ಹತ್ತಿ ಆಟವಾಡುವಾಗ, ಆಯತಪ್ಪಿ ಪಕ್ಕದಲ್ಲೇ ಇದ್ದ ತೆರೆದ ಕೊಳವೆಬಾವಿಯೊಳಗೆ ಜಾರಿಬಿದ್ದಿದ್ದಾಳೆ. ಜತೆಗಿದ್ದ ಮಕ್ಕಳು ಚೀರಾಡಿದಾಗ ಸ್ಥಳೀಯರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದರು.
ತಕ್ಷಣ ಎನ್‌ಡಿಆರ್‌ಎಫ್ (NDRF), ಹರಿಯಾಣ ಎಸ್‌ಡಿಆರ್‌ಎಫ್ (SDRF), ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯ ಆರಂಭಿಸಿದರು. ಬೋರ್‌ವೆಲ್ ಸುತ್ತಲೂ ಪ್ರಬಲ ಫ್ಲಡ್‌ಲೈಟ್‌ಗಳನ್ನು ಅಳವಡಿಸಿ, ಮಗುವಿನ ಚಲನವಲನ ಗಮನಿಸಲು ವಿಶೇಷ ನೈಟ್ ವಿಷನ್ ಕ್ಯಾಮೆರಾವನ್ನು ಹೊಂಡದೊಳಗೆ ಇಳಿಸಲಾಯಿತು. ಮಗು ಅಳುತ್ತಿದ್ದ ಶಬ್ದ ಕೇಳಿಬರುತ್ತಿತ್ತು. ಆಮ್ಲಜನಕ ಪೂರೈಕೆಯನ್ನೂ ಮುಂದುವರೆಸಲಾಗಿತ್ತು. ಸತತ ಪ್ರಯತ್ನದ ಬಳಿಕ ಇಂದು ನಸುಕಿನ ಜಾವ ಸುಮಾರು 3.50 ರಿಂದ 4 ಗಂಟೆಯ ವೇಳೆಗೆ ಮಗುವನ್ನು ಮೇಲಕ್ಕೆತ್ತಲಾಯಿತು. ಆದರೆ ಈ ವೇಳೆ ಮಗುವಿನಲ್ಲಿ ಚಲನವಲನವಿರಲಿಲ್ಲ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಮಗು ಸಾಅವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



