
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ಟೋಬರ್ ನಲ್ಲಿ ಕೊರೊನಾ 3ನೇ ಅಲೆ ಶುರುವಾಗಲಿದೆ ಎಂಬ ತಜ್ಞರ ಹೇಳಿಕೆಗಳ ನಡುವೆ ರಾಜ್ಯದಲ್ಲಿ ಮೂರನೇ ಅಲೆ ಆರಂಭವಾಗಿದೆಯೇ ಎಂಬ ಅನುಮಾನ ಶುರುವಾಗಿದೆ. ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚುತ್ತಿರುವ ನಡುವೆಯೇ ಕೊರೊನಾ ಸೋಂಕು ಬಂದು ಹೋಗಿರುವ ಬಗ್ಗೆ ಸ್ಫೋಟಕ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.
ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರ ತಂಡ ಮಕ್ಕಳಲ್ಲಿ ನಡೆಸಿದ್ದ ಆಂಟಿ ಬಾಡಿ ಸರ್ವೆ ರಿಪೋರ್ಟ್ ನಲ್ಲಿ ಇಂತದ್ದೊಂದು ಮಾಹಿತಿ ಬಹಿರಂಗವಾಗಿದೆ. ಇತ್ತೀಚೆಗೆ ಮಕ್ಕಳಲ್ಲಿ ವೈರಾಣು ಜ್ವರ, ನ್ಯೂಮೋನಿಯಾ ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ಲಕ್ಷಣಗಳ ಸಾಮ್ಯತೆ ಇರುವುದರಿಂದ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಆಂಟಿ ಬಾಡಿ ಸರ್ವೆ ನಡೆಸಲಾಗಿತ್ತು.
ಒಟ್ಟು 100 ಮಕ್ಕಳನ್ನು ಸರ್ವೆಗೆ ಒಳಪಡಿಸಲಾಗಿದ್ದು, ಅವರಲ್ಲಿ 60 ಮಕ್ಕಳಲ್ಲಿ ಆಂಟಿ ಬಾಡಿ ಪಾಸಿಟಿವ್ ಬಂದಿದೆ. ಅಂದರೆ ಮಕ್ಕಳಿಗೆ ಕೊರೊನಾ ಬಂದು ಹೋಗಿರುವುದು ತಿಳಿದುಬಂದಿದೆ ಎಂದು ವೈದ್ಯರ ತಂಡ ತಿಳಿಸಿದೆ.
ಈ ನಿಟ್ಟಿನಲ್ಲಿ ಮಕ್ಕಳು ಹಾಗೂ ಪೋಷಕರು ಮನೆಯಲ್ಲಿಯೂ ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.