ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆನಡಾ ಸಂಸತ್ ನಲ್ಲಿ ಕನ್ನಡದಲ್ಲಿ ಮಾತನಾಡಿ ಭಾರೀ ಸುದ್ದಿಯಾಗದಿರುವ ಕೆನಡಾ ಸಂಸತ್ ಸದಸ್ಯ ಚಂದ್ರ ಆರ್ಯ ಬೆಳಗಾವಿಯ ಅಳಿಯ.
ಮೂಲತಃ ಉತ್ತರ ಕನ್ನಡದ ಗೋಕರ್ಣ ಮೂಲದವರಾಗಿದ್ದ, ಬೆಳಗಾವಿ ನಿವಾಸಿ ಗೋಪಾಲ ಗಾಯತ್ರಿ ಹಾಗೂ ರಮಾ ಗಾಯತ್ರಿ ಅವರ ಮಗಳು ಸಂಗೀತಾಳನ್ನು ಚಂದ್ರ ಆರ್ಯ ವಿವಾಹವಾಗಿದ್ದಾರೆ. ಅವರ ಮೂಲ ಹೆಸರು ಚಂದ್ರಕಾಂತ.
ತುಮಕೂರು ಜಿಲ್ಲೆ ಶಿರಾದವರಾಗಿರುವ ಚಂದ್ರಕಾಂತ ಎಂಬಿಎ ಫೈನಾನ್ಸ್ ಶಿಕ್ಷಣ ಪೂರೈಸಿದ್ದು, ಸುಮಾರು 15 ವರ್ಷಗಳ ಹಿಂದೆ ಕೆನಡಾಕ್ಕೆ ಹೋಗಿದ್ದಾರೆ. ಅಲ್ಲಿ ಉದ್ಯಮ ಆರಂಭಿಸಿ ಚಂದ್ರ ಆರ್ಯ ಎಂದು ಪ್ರಸಿದ್ಧರಾದರು.
ಕೆನಡಾ ಸಂಸತ್ತಿಗೆ ಈಗ 2ನೇ ಬಾರಿಗೆ ಅವರು ಆಯ್ಕೆಯಾಗಿದ್ದು, ಸಂಸತ್ ನಲ್ಲಿ ಕನ್ನಡದಲ್ಲಿ ಮಾತನಾಡಿ ಭಾರಿ ಸುದ್ದಿಯಾಗಿದ್ದಾರೆ. ಅವರ ಕನ್ನಡ ಮಾತಿನ ವಿಡೀಯೋ ವೈರಲ್ ಆಗಿದೆ. ಚಂದ್ರ ಆರ್ಯ ಅವರು ಕೆನಡಾ ಅಧ್ಯಕ್ಷರಿಗೆ ಆಪ್ತರಾಗಿದ್ದಾರೆ.
ಗೋಪಾಲ ಗಾಯತ್ರಿ ಮೂಲತಃ ಗೋಕರ್ಣದವರು. ದಾಂಡೇಲಿಯಲ್ಲಿ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರಾದ ಅವರು ಬೆಳಗಾವಿಯ ಭಾಗ್ಯನಗರದ ಶ್ರೀರಾಮ ಕಾಲನಿಯಲ್ಲಿ ನೆಲೆಸಿದ್ದರು. ಆದರೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಅವರು ಮೃತರಾಗಿದ್ದಾರೆ. ಅವರ ಪತ್ನಿ ರಮಾ ಗಾಯತ್ರಿ ಸಧ್ಯ ಬೆಳಗಾವಿಯ ಭಾಗ್ಯನಗರದಲ್ಲಿ ವಾಸವಾಗಿದ್ದಾರೆ.
ಗೋಪಾಲ ಗಾಯತ್ರಿ ಅವರ ಇನ್ನೋರ್ವ ಮಗಳು ಸುಜಾತಾ ಅವರ ಪತಿ ಶ್ರೀಧರ ಇಲ್ಲಿಯ ಜಿಐಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ ಕಳೆದ ವರ್ಷ ನಿವೃತ್ತರಾಗಿದ್ದಾರೆ. ಸುಜಾತಾ ಮತ್ತು ಶ್ರೀಧರ್ ಅವರು ರಮಾ ಗಾಯತ್ರಿ ಅವರೊಂದಿಗೆ ಬೆಳಗಾವಿಯಲ್ಲೇ ವಾಸವಾಗಿದ್ದಾರೆ.
ಜುಲೈ ತಿಂಗಳಲ್ಲಿ ಮಗನ ವಿವಾಹ ನಿಶ್ಚಯ ಮಾಡಿರುವ ಚಂದ್ರ ಆರ್ಯ ಅವರು ಭಾರತಕ್ಕೆ ಆಗಮಿಸುತ್ತಿದ್ದು, ಆ ಸಂದರ್ಭದಲ್ಲಿ ಬೆಳಗಾವಿಗೂ ಆಗಮಿಸುವ ಸಾಧ್ಯತೆ ಇದೆ ಎಂದು ಶ್ರೀಧರ್ ಅವರು ಪ್ರಗತಿವಾಹಿನಿಗೆ ಮಾಹಿತಿ ನೀಡಿದರು.
ದೂರದ ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡ ಡಿಂಡಿಮ; ಕನ್ನಡದಲ್ಲಿಯೇ ಭಾಷಣ ಮಾಡಿ ಗಮನ ಸೆಳೆದ ಸಂಸದ ಚಂದ್ರ ಆರ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ