Latest

Breaking News- ಹಾಲಿನ ದರ 3 ರೂ. ಹೆಚ್ಚಳಕ್ಕೆ ಸಿಎಂ ಅಸಮ್ಮತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  :   ಗ್ರಾಹಕರಿಗೆ ಹೊರೆಯಾಗದಂತೆ  ಹಾಗೂ ರೈತರಿಗೆ ಅನ್ಯಾಯವಾಗದಂತೆ ಸೂತ್ರ ರೂಪಿಸಬೇಕೆಂದು ಕೆ ಎಂ ಫ್ ಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಯಿಸಿ, ವಿವಿಧ ರಾಜ್ಯಗಳಲ್ಲಿರುವ ಹಾಲಿನ ದರ ಹಾಗೂ ಸಂಬಂಧಿಸಿದ ಸಂಪೂರ್ಣ ಮಾಹಿತಿ, ಕೆಎಂಎಫ್ ಸಂಸ್ಥೆಗೆ ತಗಲುತ್ತಿರುವ ವೆಚ್ಚ, ಹಾಲಿನ ದರ ಏರಿಕೆಗೆ  ಕಾರಣಗಳು, ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಗಳು,ನಷ್ಟಗಳನ್ನು ತಡೆಗಟ್ಟಲು ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ.
ಗ್ರಾಹಕ ಹಾಗೂ ರೈತನಿಗೆ ಅನುಕೂಲವಾಗುವ ಸೂತ್ರವನ್ನು ಎರಡು ದಿನಗಳಲ್ಲಿ  ರೂಪಿಸಿಕೊಂಡು, ಕೆಎಂಎಫ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. 3 ರೂ. ದರ ಹೆಚ್ಚಳ ಮಾಡುವುದು ಬೇಡ, ಆದರೆ ರೈತರು ಹಾಗೂ ಗ್ರಾಹಕರ  ಹಿತದೃಷ್ಟಿಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಸಲಹೆ ನೀಡಲಾಗಿದೆ ಎಂದರು.
 *ಗ್ರಾಹಕ ಹಾಗೂ ರೈತನ ಹಿತಚಿಂತನೆ ಸರ್ಕಾರದ ಕರ್ತವ್ಯ :*
ಕೆಎಂಎಫ್ ಕೂಡ ಸರ್ಕಾರದ ಒಂದು ಅಂಗವಾಗಿದ್ದು, ರೈತರಿಗೆ ಪ್ರೋತ್ಸಾಹ ಧನ, ಶಾಲಾ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಗ್ರಾಹಕರ ಹಾಗೂ ರೈತರ ಹಿತಚಿಂತನೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದ್ದು, ಕೆಎಂಎಫ್ ಗೆ ಮಾರ್ಗದರ್ಶನ ನೀಡಲಾಗಿದೆ. ಹಾಲಿನ ದರ ಕಾಲಕಾಲಕ್ಕೆ ಬದಲಾವಣೆಯಾಗುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸ್ಪರ್ಧೆಯಲ್ಲಿವೆ. ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕೆಂದು ಕೆಎಂಎಫ್ ಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
https://pragati.taskdun.com/milk-price-revision-conclusion-after-nov-20/

Related Articles

Back to top button