ಕೆಎಲ್ಇಎಸ್ ಆಸ್ಪತ್ರೆಯಲ್ಲಿ ಸ್ತನ್ಯಪಾನ ಜಾಗೃತಿ ಸಪ್ತಾಹ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನವಜಾತ ಶಿಶುವಿಗೆ ನಾಳಿನ ಉತ್ತಮ ಜೀವನ ನೀಡುವುದಕ್ಕಾಗಿ ಆರೋಗ್ಯಯುತವಾಗಿರಬೇಕು. ಆರೋಗ್ಯ ಶರೀರಕ್ಕೆ ಮಾತ್ರವಲ್ಲ. ಮನಸ್ಸಿಗೂ ಬೇಕು. ಆದ್ದರಿಂದ ಮಗುವಿನ ಸಮಗ್ರ ಬೆಳವಣಿಗೆಗೆ ತಾಯಿಯ ಎದೆಹಾಲು ಅತ್ಯವಶ್ಯ. ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ.
ಮಗು ಜನಿಸಿದ ತಕ್ಷಣ ಎದೆ ಹಾಲು ಉಣಿಸಿ, ಭವಿಷ್ಯದಲ್ಲಿ ಆರೋಗ್ಯವಂತ ಮಗುವನ್ನು ನಿರ್ಮಾಣಗೊಳಿಸಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕಾರಿಣಿ ಸದಸ್ಯೆ ಅಲ್ಕಾ ಇನಾಮದಾರ ಅವರಿಂದಿಲ್ಲಿ ಹೇಳಿದರು.
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಿ. 2 ಅಗಸ್ಟ 2019 ರಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಚಿಕ್ಕಮಕ್ಕಳ ವಿಭಾಗವು ಏರ್ಪಡಿಸಿದ್ದ ಸ್ತನಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಮನೆಯ ಶಾಂತ ವಾತಾವರಣದಲ್ಲಿ ಬೆಳೆಯುವ ಮಗು ಕುಶಾಗ್ರ ಬುದ್ದಿಮತ್ತೆಯಿಂದ ಕೂಡಿರುತ್ತದೆ. ಕೇವಲ ಬಟ್ಟೆ ಬರೆ ಸಾಲದು. ಅದಕ್ಕೆ ಒಳ್ಳೆಯ ಆರೋಗ್ಯ ಬೇಕು. ಎದೆಹಾಲು ಉಣಿಸಿದರೆ ಮಗುವಿನ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಸಮಾಜದಲ್ಲಿ ಹೆಣ್ಣು ಗಂಡೆಂಬ ಬೇಧಭಾವ ಮಾಡದೇ ಎಲ್ಲರನ್ನು ಸಮಾನತೆಯಿಂದ ಕಾಣಬೇಕು. ಕಾರ್ಯಸ್ಥಳದ ಒತ್ತಡದ ನಡುವೆ ಮಹಿಳೆಯು ಮಗುವಿನ ಪಾಲನೆ ಮಾಡಬೇಕಾಗುತ್ತದೆ. ಮಗುವಿನ ಭವಿಷ್ಯ ರೂಪಿಸುವಲ್ಲಿ ತಂದೆ ತಾಯಿ ಹಾಗೂ ಮನೆಯ ಸದಸ್ಯರೆಲ್ಲರ ಜವಾಬ್ದಾರಿ ಇರುತ್ತದೆ. ಆದ್ದರಿಂದ ಮನೆಯ ಹಿರಿಯರ ಸಹಕಾರ ಅತ್ಯಗತ್ಯ.
ಒಳ್ಳೆಯ ಆಚಾರ ವಿಚಾರ ಆಹಾರ ಸಾಲದು, ಉತ್ತಮ ಸಂಸ್ಕಾರ ಮುಖ್ಯ. ಇದರಿಂದ ಸಮಾಜ ನಿರ್ಮಾಣದಲ್ಲಿ ಮಕ್ಕಳು ತಾವಾಗಿಯೇ ಮುಂದೆ ಬರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಎನ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಮಾತನಾಡಿ, ಬಾಣಂತಿ ಮಹಿಳೆಗೆ ಸರಕಾರದಿಂದ ಸಕಲ ಸೌಲಬ್ಯ ಲಭಿಸುತ್ತದೆ. ಗರ್ಭಿಣಿ ಹಾಗೂ ಪ್ರಸವದ ನಂತರದಲ್ಲಿ ಮಹಿಳೆಯರು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಕೆಲವು ತಪ್ಪು ಕಲ್ಪನೆಯಿಂದಾಗಿ ಮಹಿಳೆಯರು ನವಜಾತ ಶಿಶುವಿಗೆ ಎದೆಹಾಲು ಉಣಿಸಲು ಹಿಂದೇಟು ಹಾಕುತ್ತಿದ್ದಾರೆ. ಅದು ತಪ್ಪಬೇಕು.
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅಮೃತ ಎಂಬ ಹ್ಯೂಮನ್ ಮಿಲ್ಕ್ (ತಾಯಿ ಎದೆಹಾಲು)ಬ್ಯಾಂಕ್ ಸ್ಥಾಪಿಸಲಾಗಿದೆ. ಅಲ್ಲಿ ಎದೆಹಾಲನ್ನು ದಾನ ಮಾಡಿ ಎಂದು ಸಲಹೆ ನೀಡಿದರು.
ಕಾಹೆರನ ಕುಲಸಚಿವ ಡಾ. ವಿ.ಡಿ. ಪಾಟೀಲ ಮಾತನಾಡಿದರು. ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ.ವಿ. ಜಾಲಿ, ಡಾ. ರೂಪಾ ಬೆಲ್ಲದ, ಡಾ. ಸುಜಾತಾ ಜಾಲಿ, ಡಾ. ಆರ್. ಎಸ್. ಮುಧೋಳ, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ