Kannada NewsKarnataka NewsLatest

ಮನತುಂಬಿದ ರಾತ್ರಿರಾಣಿ

ಡಾ. ನಿರ್ಮಲಾ ಬಟ್ಟಲ, ಬೆಳಗಾವಿ

ಏಳುತ್ತಲೇ, ಎದ್ದು ಯಾರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂತಾಯಿಯ
ಎದ್ದೊಂದು ಗಳಿಗೆ ನೆನೆದೆನು…
ಎಂದು ದಿನಚರಿ ಪ್ರಾರಂಭಿಸುತ್ತಿದ್ದ ಗರತಿಯರದು ಹಳೆಯ ಮಾತು.
ಈಗ ಏಳುತಲೇ,  ಇಂಟರನೆಟ್ ಆನ್ ಮಾಡಿ ಮುಂಜಾನೆ ಬರುವ ವಾಟ್ಸಪ್ ಸಂದೇಶಗಳ ಮೇಲೆ ಕಣ್ಣಾಡಿಸುತ್ತಲೇ ದಿನಚರಿ ಆರಂಭಿಸುವುದು ಹೊಸ ಮಾತು. ನವರಸಗಳು ಈ ಶುಭ ಮುಂಜಾನೆಯಲ್ಲಿ ಮುಖದಲ್ಲಿ ಮೂಡಿ ಮರೆಯಾಗುವಂತೆ ಸಂದೇಶಗಳು, ವಿಡಿಯೋಗಳು, ಛಾಯಾಚಿತ್ರಗಳು, ಮೊಬೈಲd ಎನ್ನುವ ಮಾಯಾ ಡಬ್ಬಿಯಲ್ಲಿ ರಾಶಿರಾಶಿಯಾಗಿ ಬಂದು ಬೀಳುತ್ತವೆ. ಬೆಳಗಿನ ಗಡಿಬಿಡಿಯಲ್ಲಿ ಪೇಪರ್ ಹೆಡಲೈನ್‌ಗೆ ಮಾತ್ರ ಪ್ರಾಧಾನ್ಯತೆ ಕೊಟ್ಟಂತೆ, ಕೆಲವು ಸಂದೇಶಗಳಿಗೆ ಮಾತ್ರ ಗಮನಹರಿಸಿ ಮುಂದಿನ ಕಾರ್ಯಕ್ಕೆ ತೊಡಗಿಕೊಳ್ಳುವುದು ನನ್ನ ರೂಢಿ. ಗೆಳತಿ ಇಂದಿರಾ ಮೊಟೆಬೆನ್ನೂರ ಕಳಿಸಿರುವ ಬ್ರಹ್ಮಕಮಲದ ಚಿತ್ರ ಇಂದು ನನ್ನ ಗಮನ ಸೆಳೆಯಿತು.
ವರ್ಷದಲ್ಲಿ ಒಂದು ಬಾರಿ ಮಾತ್ರ ಅರಳಿ ತನ್ನ ಚೆಲುವು ಸೊಬಗು, ಸುಗಂಧವನ್ನೆಲ್ಲ ಹೊರಸೂಸಿ ಮನಸೆಳೆವ ಆ ರಾತ್ರಿ ರಾಣಿ ಕಂಡರೆ ಮನಸಿಗೆನೋ ಸಂತಸ. ತಮ್ಮ ಮನೆಯಂಗಳದ ಚಿಕ್ಕ ಕೈತೋಟದಲ್ಲಿ ಹತ್ತಾರು ಬಗೆಯ ಹೂವುಗಳನ್ನು ಬೆಳೆಸುವ ಹವ್ಯಾಸವನ್ನು ಹೊಂದಿರುವ ಇಂದಿರಾರವರು ಆಗಾಗ ಹೂಗಳ ಅಪರೂಪದ ಚಿತ್ರ ಹಾಗೂ ಸಂದೇಶ ಕಳಿಸುತ್ತಾರೆ. ಜಾಜಿ, ಕನಕಾಂಬರ, ಮಲ್ಲಿಗೆಯ ಚೆಂದನೆಯ ಮಾಲೆಗಳನ್ನು ಮಾಡಿ ಚೀಲದಲ್ಲಿ ತುಂಬಿಕೊಂಡು ಸಾಹಿತ್ಯ ಭವನದಲ್ಲಿ ಸಾಹಿತ್ಯ ಕಾರ್ಯಕ್ರಮಕ್ಕೆ ಸೇರುವ ಗೆಳತಿಯರಿಗೆ ನೀಡಿ ಖುಷಿಪಡುವ ಅವರನ್ನು ನಾನು ಹೂವಕ್ಕಾ ಎಂದೇ ಕರೆಯೋದು.
೧೭ನೇ ಶತಮಾನದಲ್ಲಿ ಪೋರ್ಚುಗೀಸ್ ನಾವಿಕರು ವಿಶ್ವದ ಇತರೆಡೆಗೂ ಕೊಂಡೊಯ್ದ ಈ ಹೂವನ್ನು ಭಾರತದಲ್ಲಿಯೂ ತಂದು ನೆಟ್ಟರು. ದಕ್ಷಿಣ ಅಮೇರಿಕಾ ಮೂಲದ ಕಳ್ಳಿ ಜಾತಿಗೆ ಸೇರಿದ ಈ ಹೂವಿನ ವೈಜ್ಞಾನಿಕ ಹೆಸರು ಇಪಿಪೈಲಮ್ ಆಕ್ಸಿಪೆಟಲ್. ಇದನ್ನು ಪ್ರಾಚೀನ ತಮಿಳರು ಗುಲೇಬಕಾವಳಿ ಎಂದು ಕರೆದರೆ ಶ್ರೀಲಂಕಾದಲ್ಲಿ ಇದನ್ನು ದೇವಲೋಕದ ಹೂವು ಎಂದು, ಜಪಾನನಲ್ಲಿ ಬೆಳದಿಂಗಳ ಹೂವು ಎಂದು, ಇಂಡೋನೇಷಿಯಾದಲ್ಲಿ ಇದನ್ನು ವಿಜಯ ಕುಸುಮ ಎಂದು ಕರೆಯುತ್ತಾರೆ.

ಚೀನಾದಲ್ಲಿ ಅತೀ ಕಡಿಮೆ ಸಮಯದಲ್ಲಿ ಸಾಧನೆ ಮಾಡಿದ ವ್ಯಕ್ತಿಯ ವ್ಯಕ್ತಿತ್ವವನ್ನು ವರ್ಣಿಸಲು ಈ ಹೂವಿನ ಹೋಲಿಕೆಯನ್ನು ನೀಡುತ್ತಾರೆ. ಭಾರತದಲ್ಲಿ ಈ ಹೂವಿಗೆ ಪೌರಾಣಿಕ ಹಿನ್ನೆಲೆಯನ್ನು ನೀಡಿ ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ವಿಷ್ಣುವಿನ ನಾಭಿಯಿಂದ ಹುಟ್ಟಿದ ಕಮಲದ ಮೇಲೆ ಸೃಷ್ಟಿಕರ್ತ ಬ್ರಹ್ಮ ಕುಳಿತ ಕಾರಣ ಇದನ್ನು ಸಂಸ್ಕೃತದಲ್ಲಿ ಬ್ರಹ್ಮಕಮಲವೆಂದು ಕರೆಯುತ್ತಾರೆ. ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ ಎನ್ನುವ ಈ ಇರುಳುಧಾವರೆ, ಸುಮಾರು ೨೦ ವರ್ಷಗಳ ಹಿಂದೆ ಶಿರಸಿಯಲ್ಲಿ ಯಾರದೋ ಮನೆಯಲ್ಲಿ ಅರಳಿದ ಹೂವಿನ ವರದಿಯನ್ನು ನೋಡಿದ್ದೆ. ಆಗಿನ್ನು ಈ ಹೂವು ಕರ್ನಾಟಕಕ್ಕೂ ಹೊಸತು ಇರಬೇಕು. ನಂತರ ಅದು ಓ ಬ್ರಹ್ಮಕಮಲ ನಾ.., ನನಗೂ ಒಂದು ಸಸಿ ಕೊಡಿ ಎಂದು ಎಲ್ಲರ ಮನೆಯಂಗಳಕ್ಕೆ ಲಗ್ಗೆ ಇಟ್ಟು ಇಂದು ಕರ್ನಾಟಕದ ತುಂಬೆಲ್ಲಾ ವ್ಯಾಪಿಸಿದೆ. ಕಳ್ಳಿ ಜಾತಿಗೆ ಸೇರಿದ ಬ್ರಹ್ಮಕಮಲದ ಸಸಿಯೊಂದನ್ನು ಎರವಲು ಪಡೆದು ನಮ್ಮ ಮನೆಯ ಹಿತ್ತಲದ ಕುಂಡದಲ್ಲಿ ನೆಟ್ಟಾಗ ಅರೇ ಇದೇನು ಎಲೆ ಮಾತ್ರವಿದೆ ಎಂದೆನಿಸಿದರೂ ಅದು ಕುಂಡದಲ್ಲಿ ಬೇರೂರಿ ಎಲೆಗೆ ಎಲೆ ಬೆಳೆಯುತ್ತ ವರ್ಷ ಕಳೆಯುತ್ತ ಮಳೆಗಾಲ ಪ್ರಾರಂಭವಾಗುವಾಗ ಎಲೆಯ ಕುಡಿಯ ಸಂದಿನಲ್ಲಿ ಮೊಗ್ಗು ಮೂಡಿದಾಗ ಸಂತಸಪಟ್ಟಿದ್ದೆ. ಬಾತುಕೋಳಿಯ ಕತ್ತಿನಂತಿರುವ ಮೊಗ್ಗು ದಿನದಿನವೂ ದೊಡ್ಡದಾಗುತ್ತಿದ್ದಂತೆ ಹೂ ಅರಳುವ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಕಾಯುತ್ತಿದ್ದೆ. ಜಿಟಿಜಿಟಿಮಳೆ, ಕಪ್ಪೆ ವಟಗುಡುವ ಕತ್ತಲೆಯ ರಾತ್ರಿ ೧೧ ಗಂಟೆಗೆ ಬ್ರಹ್ಮಕಮಲದ ಹೂ ನಮ್ಮ ಮನೆಯಂಗಳದಿ ಅರಳಿತು. ಈ ಹೂವು ಅರಳುವಾಗ ಮನಸ್ಸಿನ ಇಚ್ಚೆಯನ್ನು ದೇವರಿಗೆ ಸಲ್ಲಿಸಿದರೆ ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಮನೆಯಲ್ಲಿ ಹೂವು ಅರಳುವುದು ಶುಭ ಸೂಚಕವೆಂದು ನಂಬಿ ಹೂ ಕುಂಡವನ್ನು ಒಳ ತಂದು ಪೂಜೆ ಮಾಡಿ ಸಂಭ್ರಮಿಸಿದೆವು, ಬೊಗಸೆ ಗಾತ್ರದ ಬೆಳ್ಳನೆಯ ಹತ್ತಾರು ಪಕಳೆಗಳಿಂದ ಸುತ್ತುವರೆದ ಸುಗಂಧ ಸೂಸುವ ರಾತ್ರಿರಾಣಿ ಅಲ್ಪಾಯುಷಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button