ಕೃಷ್ಣಾ ನದಿಯಲ್ಲಿ 10 ಕಿಮೀಗೆ ಒಂದು ಬ್ರಿಜ್ ಕಂ ಬಾಂದಾರ ನಿರ್ಮಿಸಿ -ಕೋರೆ ಆಗ್ರಹ
ಪ್ರಗತಿವಾಹಿನಿ ಸುದ್ದಿ, ಮಾಂಜರಿ:
ಬೆಳಗಾವಿ, ವಿಜಾಪುರ, ಬಾಗಲಕೋಟ ಜಿಲ್ಲೆಯ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರತಿ ವರ್ಷ ಉಂಟಾಗುತ್ತಿರುವ ನೀರಿನ ಸಮಸ್ಯೆ ಶಾಶ್ವತವಾದ ಪರಿಹಾರ ಕಲ್ಪಿಸುವುದಕ್ಕೆ ರಾಜ್ಯ ಸರಕಾರವು ಕೃಷ್ಣಾ ನದಿಯಲ್ಲಿ ೧೦ ಕಿ.ಮೀ. ಅಂತರದಲ್ಲಿ ಒಂದು ಬ್ರಿಜ್ ಕಮ್ ಬಂದಾರ ನಿರ್ಮಿಸಬೇಕು. ಅದೇ ಪ್ರಕಾರ ನೆರೆಯ ಮಹಾರಾಷ್ಟ್ರ ಸರಕಾರ ಜೊತೆಗೆ ಕೋಯ್ನಾ ಜಲಾಶಯದಿಂದ ೪ ಟಿ.ಎಮ್.ಸಿ. ನೀರು ಕಲ್ಪಿಸುವುದಕ್ಕೆ ಶಾಶ್ವತವಾದ ಒಪ್ಪಂದ ಮಾಡಬೆಕೆಂದು ರಾಜ್ಯಸಭಾ ಸದಸ್ಯ ಹಾಗೂ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಿಕೊಂಡರು.
ಶಿವಕುಮಾರ ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ರಾಜ್ಯದ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬ್ರಿಜ್ ಕಮ್ ಬಂದಾರ ಕಾಮಗಾರಿ ವಿಕ್ಷಿಸಿದರು. ಈ ವೇಳೆ ಸಚಿವರನ್ನು ಭೆಟಿ ಮಾಡಿದ ಸಂಸದ ಪ್ರಭಾಕರ ಕೋರೆ, ಕಳೆದ ಮೂರು ತಿಂಗಳಿಂದ ಕೃಷ್ಣಾ ನದಿ ಬತ್ತಿ ಹೊಗಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭಿರವಾಗಿತ್ತು. ನೀರು ಇಲ್ಲದ ಕಾರಣ ರೈತರ ಬೆಳೆಗಳು ಒಣಗಿ ಹೋಗಿ ಆರ್ಥಿಕ ನಷ್ಟ ಉಂಟಾಗಿದೆ. ಆದ್ದರಿಂದ ರಾಜ್ಯ ಸರಕಾರವು ನೀರು ಇಲ್ಲದೆ ಒಣಗಿ ಹೋಗಿರುವ ಬೆಳೆಗಳ ಸಮಿಕ್ಷೆ ಮಾಡಿ ಬೆಳೆ ಪರಿಹಾರ ನೀಡಬೆಕೆಂದು ಮನವಿ ಮಾಡಿದರು.
ಈ ವೇಳೆ ವಿಧಾನ ಪರಿಷತ್ತಿನ ವಿರೊಧಿ ಪಕ್ಷದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಮಹಾಂತೇಶ ಕವಟಗಿಮಠ, ರಾಯಬಾಗ ಶಾಸಕ ದುರ್ಯೋಧನ ಐಹೋಳೆ, ಕಾಗವಾಡ ಶಾಸಕ ಶ್ರೀಮಂತ ಪಾಟಿಲ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಹಾಂತೇಶ ಕೌಜಲಗಿ ಹಾಗೂ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೆಶಕ ಭರತೇಶ ಬನವಣೆ, ಅಜಿತ ದೇಸಾಯಿ, ಮಲ್ಲಪ್ಪಾ ಮೈಶಾಳೆ, ತಾತ್ಯಾಸಾಹೇಬ ಕಾಟೆ, ಮಹೇಶ ಭಾತೆ ಹಾಗೂ ಮಾಂಜರಿ, ಚಂದೂರ, ಯಡೂರ, ಇಂಗಳಿ, ಅಂಕಲಿ, ಸೌಂದತ್ತಿ, ಡಿಗ್ಗೆವಾಡಿ, ಜಲಾಲಪೂರ, ನಸಲಾಪೂರ, ಕುಸನಾಳ ಮೋಳವಾಡ ಗ್ರಾಮದ ನೂರಾರು ರೈತರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ