*ಎರಡು ಎಕರೆ ಜಮೀನು ವಿವಾದಕ್ಕೆ ಮಗಳ ಕಣ್ಣೆದುರೇ ಅತ್ತಿಗೆ ಮೇಲೆ ಬೊಲೆರೋ ಹತ್ತಿಸಿದ ಮೈದುನ*

ಪ್ರಗತಿವಾಹಿನಿ ಸುದ್ದಿ: ಎರಡು ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಮೈದುನನೇ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಗಳಾದೇವಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಚನ್ನಪ್ಪಗೌಡ ನಾಡಗೌಡರ್ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಮಂಗಳಾದೇವಿ ಮತ್ತು ಚನ್ನಪ್ಪಗೌಡ ನಾಡಗೌಡರ್ ನಡುವೆ ಹಲವು ವರ್ಷಗಳಿಂದ ಆಸ್ತಿ ವಿಚಾರವಾಗಿ ವಿವಾದವಿತ್ತು. ಒಟ್ಟು ಆರು ಎಕರೆ ಜಮೀನಿನ ಪೈಕಿ ಮಂಗಳಾದೇವಿಗೆ ಸೇರಿದ ಎರಡು ಎಕರೆ ಹೊಲವನ್ನು ಚನ್ನಪ್ಪಗೌಡ ಅತಿಕ್ರಮಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಮಂಗಳಾದೇವಿ ಸರ್ವೇಯರ್ ಮೂಲಕ ಜಮೀನು ಅಳತೆ ಮಾಡಿಸಿದಾಗ ಎರಡು ಎಕರೆ ಅತಿಕ್ರಮಣವಾಗಿರುವುದು ತಿಳಿದುಬಂದಿತ್ತು.
ಅತಿಕ್ರಮಣವಾಗಿರುವ ಜಮೀನನ್ನು ಬಿಟ್ಟುಕೊಡುವಂತೆ ಚನ್ನಪ್ಪಗೌಡನನ್ನು ಮಂಗಳಾದೇವಿ ಕೇಳಿದ್ದರು. ಇತ್ತೀಚೆಗೆ ಜಮೀನು ಅಳತೆ ಮಾಡಿಸಿ ಬೇಲಿ ಹಾಕಿ ಬಿತ್ತನೆ ಮಾಡಿದ್ದಕ್ಕೆ ಚನ್ನಪ್ಪಗೌಡ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಈ ಹಿಂದೆ ಬಿತ್ತನೆ ಮಾಡಿದ್ದ ಹೊಲವನ್ನೂ ಹರಗಿದ್ದ ಎಂಬ ಆರೋಪವಿದೆ. ಶನಿವಾರ ಮಂಗಳಾದೇವಿ ಮತ್ತೊಂದು ಹೊಲದಲ್ಲಿದ್ದಾಗ ಅಲ್ಲಿಗೆ ಬಂದ ಚನ್ನಪ್ಪಗೌಡ ಬೊಲೆರೋ ವಾಹನವನ್ನು ಆಕೆಯ ಮೇಲೆ ಹತ್ತಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಕಂದಗಲ್ ಗ್ರಾಮದಲ್ಲಿ ನಡೆದಿದೆ.
ವಾಹನ ಹತ್ತಿಸಿದ ಪರಿಣಾಮ ಮಂಗಳಾದೇವಿಯ ಕಾಲಿಗೆ ಗಂಭೀರ ಗಾಯವಾಗಿದ್ದು, ದೇಹದ ಒಳಭಾಗದಲ್ಲಿಯೂ ಪೆಟ್ಟಾಗಿದೆ. ಸದ್ಯ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಯ ಮೇಲೆ ವಾಹನ ಹತ್ತಿಸುತ್ತಿರುವುದನ್ನು ಕಂಡ ಮಗಳು ಪ್ರಿಯಾಂಕಾ, “ಕಾಕಾ, ಕಾರ್ ಹಾಯಿಸಬೇಡ” ಎಂದು ಗೋಗರೆದಿದ್ದಾಳೆ. ಆದರೂ ವಾಹನ ಹತ್ತಿಸಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಘಟನೆ ಬಳಿಕ ಆರೋಪಿ ಚನ್ನಪ್ಪಗೌಡ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಂಗಳಾದೇವಿ ಮತ್ತು ಚನ್ನಪ್ಪಗೌಡ ಇಬ್ಬರೂ ಮಾಜಿ ಸಚಿವ ಎಸ್.ಆರ್. ಪಾಟೀಲ್ ಸಂಬಂಧಿಕರಾಗಿದ್ದಾರೆ. ಘಟನೆ ತಿಳಿದ ತಕ್ಷಣ ಎಸ್.ಆರ್. ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಂಗಳಾದೇವಿಯ ಆರೋಗ್ಯ ವಿಚಾರಿಸಿದ್ದಾರೆ.
ಈ ಸಂಬಂಧ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ಚನ್ನಪ್ಪಗೌಡನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




