*ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್* : *ಡಿಎ ಹೆಚ್ಚಳ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ (DA) ಹೆಚ್ಚಳಕ್ಕೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
ಅಕ್ಟೋಬರ್ 28ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಹೆಯಲ್ಲಿ ಡಿಎ ಹೆಚ್ಚಳಕ್ಕೆ ಅನುಮೋದನೆ ಸಗಲಿದೆ. ಪ್ರಸ್ತುತ ಶೇ.60ರಷ್ಟಿರುವ ಡಿಎ ಶೇ.63ಕ್ಕೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿಭತ್ಯೆ (DA) ಹಾಗೂ ತುಟ್ಟಿ ಪರಿಹಾರ (DR) ಹೆಚ್ಚಳದ ಸುದ್ದಿಗಾಗಿ ಕಾಯುತ್ತಿದ್ದಾರೆ. ಅಕ್ಟೋಬರ್ 14 ಮತ್ತು 21ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗಳಲ್ಲಿ ಡಿಎ ಹೆಚ್ಚಳದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಗಬಹುದು ಎಂದು ನಿರೀಕ್ಷಿಸಿದ್ದ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರಿಗೆ ನಿರಾಸೆಯಾಗಿದೆ. ಇದೀಗ ಎಲ್ಲರ ಗಮನ ನವೆಂಬರ್ 8ರಂದು ನಡೆಯಲಿರುವ ದೀಪಾವಳಿ ಹಬ್ಬಕ್ಕೂ ಮುನ್ನ, ಅಕ್ಟೋಬರ್ 28ರಂದು ನಡೆಯಲಿರುವ ಮುಂದಿನ ಕೇಂದ್ರ ಸಚಿವ ಸಂಪುಟ ಸಭೆಯತ್ತ ನೆಟ್ಟಿದೆ.
ಕೇಂದ್ರ ಸರ್ಕಾರವು ಅಕ್ಟೋಬರ್ 16ರಂದು ಕಾರ್ಯಕ್ಷಮತೆಗೆ ಸಂಬಂಧಿಸದ ಬೋನಸ್ (Non-Productivity Linked Bonus) ಘೋಷಿಸಿತ್ತು. ಆದರೆ, ಡಿಎ ಅಥವಾ ಡಿಆರ್ ಹೆಚ್ಚಳದ ಕುರಿತು ಯಾವುದೇ ಪ್ರಕಟಣೆ ಹೊರಡಿಸಿರಲಿಲ್ಲ.
ಅಗತ್ಯ ವಸ್ತುಗಳ ಬೆಲೆಗಳು ಮತ್ತು ಗ್ರಾಹಕ ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೂಲ ವೇತನದ (Basic Pay) ನಿರ್ದಿಷ್ಟ ಶೇಕಡಾವಾರು ಪ್ರಮಾಣದಲ್ಲಿ ನೀಡಲಾಗುವ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ನೌಕರರು ಕಾಯುತ್ತಿದ್ದಾರೆ.
ಸಾಮಾನ್ಯವಾಗಿ ಏಳನೇ ವೇತನ ಆಯೋಗದ ಶಿಫಾರಸುಗಳು ಹಾಗೂ ಅಖಿಲ ಭಾರತ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (AICPI-IW) ಅಂಕಿಅಂಶಗಳ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ಡಿಎ ಪರಿಷ್ಕರಿಸಲಾಗುತ್ತದೆ. ಈ ಹೆಚ್ಚಳವು ಸಾಮಾನ್ಯವಾಗಿ ಜನವರಿ 1 ಮತ್ತು ಜುಲೈ 1ರಿಂದ ಜಾರಿಗೆ ಬರುತ್ತದೆ.
ಜನವರಿ ತಿಂಗಳ ಹೆಚ್ಚಳವನ್ನು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಹಾಗೂ ಜುಲೈ ತಿಂಗಳ ಹೆಚ್ಚಳವನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಘೋಷಿಸುವುದು ವಾಡಿಕೆ.
ಈ ವರದಿಯ ಪ್ರಕಾರ, 2026ರ ಏಪ್ರಿಲ್ನಲ್ಲಿ ಡಿಎಯನ್ನು ಶೇ.58ರಿಂದ ಶೇ.60ಕ್ಕೆ ಹೆಚ್ಚಿಸಲಾಗಿತ್ತು.ಅಕ್ಟೋಬರ್ 28ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2026ರ ಜುಲೈ ತಿಂಗಳ ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಗುವ ಸಾಧ್ಯತೆಯಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಪ್ರಸ್ತುತ ಹಣದುಬ್ಬರದ ಅಂಕಿಅಂಶಗಳ ಆಧಾರದ ಮೇಲೆ ಈ ಬಾರಿ ಡಿಎಯನ್ನು ಶೇ.3ರಷ್ಟು ಹೆಚ್ಚಿಸಿ, ಶೇ.60ರಿಂದ ಶೇ.63ಕ್ಕೆ ಏರಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




