Kannada NewsLatestNational

*ವಾಟ್ಸ್‌ಆ್ಯಪ್, ಟೆಲಿಗ್ರಾಂ ಬಳಕೆದಾರರಿಗೆ ಬಿಗ್ ಶಾಕ್*: *ಹೊಸ ನಿಯಮ ಜಾರಿ*

ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚನೆಗಳನ್ನು ತಡೆಯುವ ಉದ್ದೇಶದಿಂದ ಹಾಗೂ ಮೊಬೈಲ್ ಸಂಖ್ಯೆಗಳ ದುರುಪಯೋಗವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

2027ರ ಜನವರಿ 1ರಿಂದ ವಾಟ್ಸ್‌ಆ್ಯಪ್, ಟೆಲಿಗ್ರಾಂ ಸೇರಿದಂತೆ ಪ್ರಮುಖ ಮೆಸೇಜಿಂಗ್ ಆ್ಯಪ್‌ಗಳಲ್ಲಿ ನೋಂದಾಯಿತ ಸಿಮ್ ಕಾರ್ಡ್‌ಗಳನ್ನು ಸಕ್ರಿಯವಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಲಿದೆ.

ಸಕ್ರಿಯ ಸಿಮ್ ಇಲ್ಲದಿದ್ದರೆ ವಾಟ್ಸ್‌ಆ್ಯಪ್ ಬಂದ್ ಆಗಲಿದೆ. ಕೇಂದ್ರ ಸರ್ಕಾರ ಸಿಮ್ ಬೈಂಡಿಂಗ್ ನಿಯಮ ಜಾರಿಗೆ ತರುತ್ತಿದೆ.ಈ ನಿಯಮದ ಪ್ರಕಾರ, ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್‌ಗಳನ್ನು ಸಕ್ರಿಯವಾಗಿಟ್ಟುಕೊಳ್ಳಬೇಕಾಗುತ್ತದೆ. ಸಿಮ್ ಕಾರ್ಡ್ ಇಲ್ಲದಿದ್ದರೆ ಅಥವಾ ನಿಷ್ಕ್ರಿಯಗೊಂಡಿದ್ದರೆ, ಸಂಬಂಧಿತ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ತೊಂದರೆಯಾಗುವ ಸಾಧ್ಯತೆಯಿದೆ.

ಸೈಬರ್ ಅಪರಾಧ ಹಾಗೂ ಆನ್‌ಲೈನ್ ವಂಚನೆಗಳನ್ನು ನಿಯಂತ್ರಿಸಲು ಕೇಂದ್ರ ದೂರಸಂಪರ್ಕ ಇಲಾಖೆಯು ‘ಸಿಮ್ ಬೈಂಡಿಂಗ್’ ನಿಯಮವನ್ನು ತರುತ್ತಿದೆ. ಇದರನ್ವಯ ವಾಟ್ಸಾಪ್ ಮತ್ತು ಟೆಲಿಗ್ರಾಂ ಖಾತೆಗಳು ಚಾಲ್ತಿಯಲ್ಲಿರಲು ನೋಂದಾಯಿತ ಕೆವೈಸಿ ಸಿಮ್ ಕಾರ್ಡ್ ಅದೇ ಮೊಬೈಲ್‌ನಲ್ಲೇ ಇರುವುದು ಕಡ್ಡಾಯವಾಗಿದೆ. ಸಿಮ್ ಇಲ್ಲದೆ ಕೇವಲ ವೈ-ಫೈ ಸಂಪರ್ಕದಲ್ಲಿ ಬಳಸುವವರಿಗೆ ಮಾತ್ರ ಸಮಸ್ಯೆಯಾಗಬಹುದು. ಆದರೆ ಯಾವುದೇ ಮೊಬೈಲ್ ಬ್ಯಾನ್ ಆಗುತ್ತಿಲ್ಲ; ಕಂಪನಿಗಳು ಈ ನಿಯಮ ಪಾಲಿಸಲು 2026ರ ಡಿಸೆಂಬರ್ 31ರವರೆಗೆ ಸರ್ಕಾರ ಕಾಲಾವಕಾಶ ನೀಡಿದೆ.

ಇದಲ್ಲದೆ, ಭಾರತದಲ್ಲಿ ಕಾರ್ಯನಿರ್ವಹಿಸುವ ಮೆಸೇಜಿಂಗ್ ಆ್ಯಪ್‌ಗಳು ಸೈಬರ್ ವಂಚನೆಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ವಂಚಕರು ಬೇರೆ ದೇಶಗಳಿಂದ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಭಾರತೀಯರ ಮೊಬೈಲ್ ಸಂಖ್ಯೆಗಳ ಮೂಲಕ ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುವುದು ಈ ಕ್ರಮದ ಉದ್ದೇಶವಾಗಿದೆ. 2027ರ ಜನವರಿ 1ರಿಂದ ಹೊಸ ನಿಯಮ ಜಾರಿ ಸಾಧ್ಯತೆಯಿದೆ.

ಯಾವ ಫೋನ್‌ಗಳ ಮೇಲೆ ಪರಿಣಾಮ ಬೀರುತ್ತೆ?
ಯಾವುದೇ ನಿರ್ದಿಷ್ಟ ಬ್ರ್ಯಾಂಡ್‌ನ ಫೋನ್‌ಗಳಲ್ಲಿ ವಾಟ್ಸಾಪ್ ಬಂದ್ ಆಗುವುದಿಲ್ಲ. ಬದಲಿಗೆ, ಸಿಮ್ ಇಲ್ಲದೆ ಕೇವಲ ವೈ-ಫೈ ಮೂಲಕ ವಾಟ್ಸಾಪ್/ಟೆಲಿಗ್ರಾಂ ಬಳಸುವ ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಸಮಸ್ಯೆ ಎದುರಾಗಲಿದೆ.

ಆ್ಯಪಲ್ ಸಂಸ್ಥೆಯು ಇತ್ತೀಚಿನ ಐಒಎಸ್ ಅಪ್‌ಡೇಟ್‌ನಲ್ಲಿ ಫೋನ್‌ನಲ್ಲಿ ಸಿಮ್ ಕಾರ್ಡ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಿದೆ ಎಂದು ವರದಿಯಾಗಿದೆ.

ಒಂದೇ ಖಾತೆಯನ್ನು ಹಲವು ಡಿವೈಸ್‌ಗಳಲ್ಲಿ ಬಳಸುವವರು ಹಾಗೂ ವಿದೇಶ ಪ್ರಯಾಣ ಮಾಡುವಾಗ ಭಾರತದ ಸಿಮ್ ತೆಗೆದಿಡುವವರು ಈ ನಿಯಮದಿಂದಾಗಿ ಲಾಗಿನ್ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button