ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿರುವ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ 2ರ ಮೊದಲ ಬಜೆಟ್ ಇಂದು ಮಂಡನೆಯಾಗಲಿದೆ.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.
ಆರ್ಥಿಕ ಕುಸಿತ, ಆದಾಯ ಕೊರತೆ, ಕನಿಷ್ಠ ಜಿಡಿಪಿ, ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಸೂಚಿಸುವ ಮಂತ್ರದಂಡ ಇಂದಿನ ಬಜೆಟ್‍ನಲ್ಲಿ ಇರಬಹುದೇ ಎನ್ನುವ ನಿರೀಕ್ಷೆ ಹೆಚ್ಚಿದೆ.
ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಿರೋ ಆರ್ಥಿಕ ಸರ್ವೆಯಲ್ಲಿ ಜಾಗತಿಕ ಹಿಂಜರಿತದ ಪರಿಣಾಮ ಭಾರತದ ಮೇಲೂ ಆಗಿದೆ. ಹೀಗಾಗಿ, ದೇಶದಲ್ಲಿ ಆರ್ಥಿಕ ಹಿಂಜರಿತ ಇತ್ತು ಅಂತ ಹೇಳಿದೆ. ಪ್ರಸಕ್ತ ವರ್ಷದಲ್ಲಿ ಶೇ.6ರಿಂದ ಶೇ.6.5ರಷ್ಟು ಆರ್ಥಿಕ ಪ್ರಗತಿಯ ಅಂದಾಜು ಮಾಡಲಾಗಿದೆ. ನೀತಿ-ನಿಯಮಾವಳಿಗಳ ಸುಧಾರಣೆ, ಸಂಪನ್ಮೂಲದ ಕ್ರೋಢೀಕರಣ, ವಿದೇಶಿ ವಿನಿಮಯ ಮೀಸಲಿನಲ್ಲಿ ಸ್ಥಿರತೆ, ಎಫ್‍ಡಿಐ ಒಳಹರಿವಿನ ಹೆಚ್ಚಳ, ಬ್ಯಾಂಕ್‍ಗಳ ಖಾಸಗೀಕರಣದ ಸುಳಿವು, ಹಣದುಬ್ಬರಕ್ಕೆ ಕಡಿವಾಣ, ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡುವ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಜೆಟ್‍ನಲ್ಲಿ ಕೃಷಿ ವಲಯದಲ್ಲಿ ಹೆಚ್ಚಿನ ಸುಧಾರಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸುದೃಢಗೊಳಿಸುವುದಕ್ಕೆ ಒತ್ತು ಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಉದ್ಯಮ ಕ್ಷೇತ್ರ, ಆಟೋಮೊಬೈಲ್ ಕ್ಷೇತ್ರಗಳ ಚೇತರಿಕೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯೂ ಇದೆ.
ಬಜೆಟ್‍ನಲ್ಲಿ ತೆರಿಗೆ ಕಡಿತಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ವಾರ್ಷಿಕ ಆದಾಯ 7 ಲಕ್ಷ ರೂಪಾಯಿ ಆದಾಯ ಇರುವವರಿಗೆ ಶೇ.5ರಷ್ಟು ತೆರಿಗೆ, 7 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಇರುವವರು ಶೇ.10ರಷ್ಟು, 10 ಲಕ್ಷದಿಂದ 20 ಲಕ್ಷ ಆದಾಯ ಪಡೆಯುವವರಿಗೆ ಶೇ.20ರಷ್ಟು ಹಾಗೂ 20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ.30ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ