Belagavi NewsBelgaum NewsKannada NewsKarnataka NewsNationalPolitics

ಬಜೆಟ್ ಮಂಡನೆ: ವಿವಿಧ ನಾಯಕರು ಹೇಳಿದ್ದೇನು..?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ ಕೇಂದ್ರ ಬಜೆಟ್ ನ್ನು ಕಾಂಗ್ರೆಸ್ ಟೀಕಿಸಿದ್ದರೆ, ಬಿಜೆಪಿ ಸ್ವಾಗತಿಸಿದೆ. ಯಾರು ಏನು ಹೇಳಿದ್ದಾರೆ ನೋಡಿ.

ರಾಜ್ಯಕ್ಕೆ ಚೊಂಬು ನೀಡಿದ ನಿರ್ಮಲಾ ಸೀತಾರಾಮನ್‌- ಸಿಎಂ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಯಾವುದೇ ಬೇಡಿಕೆಗಳಿಗೂ ಮನ್ನಣೆ ನೀಡದೆ ಅತ್ಯಂತ ನಿರಾಶಾದಾಯಕ ಬಜೆಟ್‌ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ರಾಜ್ಯದ ಜನತೆಯ ಕೈಗೆ ಚೊಂಬು ಕೊಟ್ಟಿದ್ದಾರೆ. ಪ್ರಧಾನ ಮಂತ್ರಿಗಳು ತನ್ನ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಒದಗಿಸಿದ್ದು, ಇತರ ರಾಜ್ಯಗಳನ್ನು ಕಡೆಗಣಿಸಿದ್ದಾರೆ ಎಂದರು.

ಬಜೆಟ್‌ ಪೂರ್ವ ಸಭೆಯಲ್ಲಿ ರಾಜ್ಯ ಸರ್ಕಾರ ಹಲವಾರು ಮನವಿಗಳನ್ನು ಮುಂದಿರಿಸಿತ್ತು. ಆದರೆ ಯಾವುದೇ ಬೇಡಿಕೆಗಳಿಗೂ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಒದಗಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮ್‌ ಅವರು ಘೋಷಿಸಿದ್ದರು. ಆದರೆ ಈ ಯೋಜನೆಗೆ ನಯಾ ಪೈಸೆ ಒದಗಿಸಿಲ್ಲ. ಈ ಆಯವ್ಯಯದಲ್ಲಿ ಒದಗಿಸುವಂತೆ ಕೋರಲಾಗಿತ್ತು. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈ ವರ್ಷ 5ಸಾವಿರ ಕೋಟಿ ರೂ. ಅನುದಾನ ಒದಗಿಸುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ಹಿಂದುಳಿದ ತಾಲ್ಲೂಕುಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು. ಇದೇ ರೀತಿ ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ.

15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪೆರಿಫೆರಲ್‌ ರಸ್ತೆ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳಿಗೆ ಒಟ್ಟು 11,485 ಕೋಟಿ ರೂ. ಅನುದಾನವನ್ನು ನೀಡುವಂತೆ ಕೋರಲಾಗಿತ್ತು. ಜೊತೆಗೆ ಹಲವಾರು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವಂತೆ ಬೇಡಿಕೆಯಿದ್ದು, ಬಜೆಟ್‌ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಬೇಡಿಕೆ ಸಲ್ಲಿಸಲಾಗಿತ್ತು. ಈ ಯಾವ ಮನವಿಗಳಿಗೂ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ. ಈ ಹಿಂದಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿದ್ದ ಯೋಜನೆಗಳಿಗೇ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅನುದಾನ ಒದಗಿಸಿಲ್ಲ. ಹೀಗಾಗಿ ಈ ಬಾರಿ ಕೈಗಾರಿಕಾ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿರುವುದು ಕೇವಲ ಘೋಷಣೆಯಾಗಿ ಮಾತ್ರ ಉಳಿಯಲಿದೆ ಎಂದರು.

ಈ ಬಜೆಟ್‌ ಜನವಿರೋಧಿಯಾಗಿದ್ದು, ವಿಶೇಷವಾಗಿ ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. 

ಈ ಬಜೆಟ್ ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರಚಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಚಕಾರವನ್ನೇ ಎತ್ತಿಲ್ಲ. ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸುಗಳ ಜಾರಿ ಬಗ್ಗೆಯೂ ಯಾವುದೇ ಮಾತು ಆಡದೆ ರೈತರಿಗೆ ಪಂಗನಾಮ ಹಾಕಿದೆ ಎಂದು ಹೇಳಿದರು.

ಕೇಂದ್ರ ಸಂಪುಟದಲ್ಲಿ ರಾಜ್ಯದ ಐದು ಜನ‌ ಸಚಿವರಾಗಿದ್ದರೂ, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ, ಈ‌ ಐದೂ ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಆರೋಗ್ಯ, ರಕ್ಷಣೆ, ಆರೋಗ್ಯ, ಐಟಿ ಮತ್ತು ಸಂವಹನ ಕ್ಷೇತ್ರಗಳಿಗೆ ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನವನ್ನು ಈಗ ಕಡಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿಗೆ ಅನುದಾನದಲ್ಲೂ ಗಣನೀಯವಾಗಿ ಕಡಿತಗೊಳಿಸಿರುವುದು ಈ ಸಮುದಾಯಗಳಿಗೆ ಎಸಗಿರುವ ದ್ರೋಹವಾಗಿದೆ ಎಂದರು.

ಕೇಂದ್ರದ 16 ನೇ ಹಣಕಾಸು ಆಯೋಗವು ಆಗಸ್ಟ್‌ 28 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಹಿಂದಿನ ಬಾರಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಲಾಗುವುದು. ಈ ಕುರಿತು ಸಮರ್ಥವಾಗಿ ವಿಷಯ ಮಂಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್: ಎಚ್ ಡಿ ಕುಮಾರಸ್ವಾಮಿ

ಸತತ 7ನೇ ಬಜೆಟ್ ಮಂಡಿಸಿದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.‌

ಪ್ರಧಾನಿಗಳಾದ ಅವರ ಕನಸಿನ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಶಕ್ತಿ ತುಂಬುವ, ಮಹಿಳೆಯರಿಗೆ ಅತಿಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಇದಾಗಿದೆ. 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆ ಪೈಕಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ ಅನುದಾನ ನೀಡಿ 4 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಮಾನವ ಸಂಪನ್ಮೂಲ ಸದ್ಬಳಕೆಗೆ ಆದ್ಯತೆ ಕೊಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್ ನಲ್ಲಿದೆ. ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್. ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಉತ್ಪಾದನೆಗೂ ಗಮನ ಕೊಡಲಾಗಿದೆ.  ಬೆಂಗಳೂರು – ಚೆನ್ನೈ, ಹೈದರಾಬಾದ್ -ಬೆಂಗಳೂರು, ಬೆಂಗಳೂರು ಸೇರಿ ಒಟ್ಟು 12 ಕೈಗಾರಿಕಾ ಕಾರಿಡಾರ್ ಗಳನ್ನು ಘೋಷಣೆ ಮಾಡುವುದು ಉದ್ಯೋಗ, ಆರ್ಥಿಕ ವೃದ್ಧಿಗೆ ಬೃಹತ್ ಕೊಡುಗೆ ನೀಡಲಿದೆ.

ಹೆಚ್ಚುತ್ತಿರುವ ಆಹಾರ ಬೇಡಿಕೆಯ ಪೂರೈಕೆ ಹಾಗೂ ಕೃಷಿಗೆ ಮತ್ತಷ್ಟು ಚೈತನ್ಯ ತುಂಬಲು ಕೃಷಿ ಸಂಶೋಧನೆ & ಅಭಿವೃದ್ಧಿಗೆ ಬಿಜೆಟ್ ಆದ್ಯತೆ ಕೊಟ್ಟಿದೆ. ಕೃಷಿ ಬೆಳೆಯ ಡಿಜಿಟಲ್ ಸಮೀಕ್ಷೆ ಮಾಡುವ ಯೋಜನೆಯನ್ನು ದೇಶದ 400 ಜಿಲ್ಲೆಗಳಿಗೆ ವಿಸ್ತರಿಸುವುದು ಸ್ವಾಗತಾರ್ಹ. ಮೇಲಾಗಿ ಸಹಜ ಕೃಷಿಗೆ ವಿತ್ತ ಸಚಿವರು ಪ್ರಾಮುಖ್ಯತೆ ನೀಡಿದ್ದಾರೆ.

ಸಂಶೋಧನೆ, ಆವಿಷ್ಕಾರಕ್ಕೆ ಬಜೆಟ್ ಅತಿಹೆಚ್ಚು ಒತ್ತು ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಸಹಯೋಗದಿಂದ ಕೈಗಾರಿಕಾಭಿವೃದ್ಧಿಗೆ ಆದ್ಯತೆ ನೀಡುವುದು ಅಭಿವೃದ್ಧಿಗೆ ದೂರಗಾಮಿ ಕೊಡುಗೆ ನೀಡುವ ಉಪಕ್ರಮವಾಗಿದೆ. ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲ ನೀಡುವ ಘೋಷಣೆ ಸ್ವಾಗತಾರ್ಹ. ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್ ಆಗಿದೆ ಎನ್ನುವುದು ನನ್ನ ಭಾವನೆ ಎಂದಿದ್ದಾರೆ. 

ಆದ್ಯತಾ ವಲಯಗಳ ಕಡೆಗೆ ಕಿಂಚಿತ್ತು ಗಮನವಿಲ್ಲ – ಎಚ್.ಕೆ.ಪಾಟೀಲ

ನಿರುದ್ಯೋಗ, ಬಡತನ ನಿರ್ಮೂಲನೆಯಂತಹ ಆದ್ಯತಾ ವಲಯಗಳ ಕಡೆಗೆ ಕಿಂಚಿತ್ತು ಗಮನ ನೀಡದ ಕೇಂದ್ರ ಸರ್ಕಾರದ ಬಜೆಟ್ ಭಾರತೀಯ ಮಾನವ ಸಂಪನ್ಮೂಲದ ಸದ್ಭಳಕೆಗೆ ಯಾವುದೇ ರೀತಿಯ ಕಾರ್ಯಕ್ರಮ ರೂಪಿಸದೇ ಕೇವಲ ಅಂಕಿ-ಸAಖ್ಯೆಗಳ ಮೂಲಕ ಗೊಂದಲ ಸೃಷ್ಟಿಸಿ, ನಿರಾಸೆ ಮೂಡಿಸಿದೆ. “ವಿಕಸಿತ ಭಾರತ” ಎಂಬ ಹುಸಿ ಕಲ್ಪನೆಯನ್ನು ಅನಾವರಣಗೊಳಿಸಿರುವ ಕೇಂದ್ರದ ಬಜೆಟ್ ಐದು ವರ್ಷಗಳ ಅವಧಿಯಲ್ಲಿ 135 ಕೋಟಿ ಭಾರತೀಯ ಜನಸಂಖ್ಯೆಯ ಪೈಕಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಬಗ್ಗೆ ಪ್ರಸ್ತಾಪಿಸಿರುವುದು ಹಾಸ್ಯಸ್ಪದವಾಗಿದೆ. ರೂ.7.50 ಲಕ್ಷ ಸಾಲ ನೀಡುವ ಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯಲಿದೆ, ಏಕೆಂದರೆ ಇಲ್ಲಿಯವರೆಗೂ ಬ್ಯಾಂಕ್ಗಳು ನಿರುದ್ಯೋಗಿಗಳಿಗೆ ಭದ್ರತೆ ರಹಿತ ಸಾಲವನ್ನೇ ನೀಡಿಲ್ಲ. ಇದರಿಂದಾಗಿ ಇಂತಹ ಯೋಜನೆಗಳು ಕೇವಲ ಕಣ್ಣೊರೆಸುವ ತಂತ್ರಗಳಾಗಿವೆ. 

ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳನ್ನು ಕಡೆಗಣಿಸಿದೆ. ರಾಷ್ಟ್ರೀಯ ಸಹಕಾರ ನೀತಿಯನ್ನು ಜಾರಿಗೆ ತರುವ ಪ್ರಸ್ತಾಪಿಸಿರುವ ಹಣಕಾಸು ಸಚಿವರು ಸಹಕಾರಿ ರಂಗದ ಬ್ಯಾಂಕ್ಗಳು ಮತ್ತು ಇತರ ಪತ್ತಿನ ಸಹಕಾರಿ ಸಂಘಗಳ ಕಾರ್ಯನಿರ್ವಹಣೆಗೆ ಅಡೆತಡೆ ತರುವ ಕೆಲವು ಕೇಂದ್ರದ ನೀತಿಗಳ ಕುರಿತು ಯಾವುದೇ ಪ್ರಸ್ತಾಪ ಮಾಡಿರುವುದಿಲ್ಲ. 

“ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ-2” 1 ಕೋಟಿ ನಗರ ಪ್ರದೇಶದ ಬಡವರು ಮತ್ತು ಮಧ್ಯಮವರ್ಗದ ಕುಟುಂಬದವರಿಗೆ ವಸತಿ ಯೋಜನೆ ಒದಗಿಸುವ ಉದ್ದೇಶಕ್ಕಾಗಿ ರೂ.10.00 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಿರುವುದಾಗಿ ಹೇಳಿದೆ. ಆದರೆ “ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ-1” 2 ಕೋಟಿ ಮನೆಗಳನ್ನು ಒದಗಿಸುವ ಯೋಜನೆ ಕಾರ್ಯಗತಗೊಂಡಿಲ್ಲ. ಇದೊಂದು ಕೇವಲ ಕಾಗದದ ಹುಲಿಯಾಗಿದೆ. 

ಕೇಂದ್ರ ಸರ್ಕಾರದ ಈ ಮುಂಗಡ ಪತ್ರವು ಕೇವಲ ಶ್ರೀಮಂತರು, ಮೇಲ್ಮಧ್ಯಮ ವರ್ಗದವರ ಅವಶ್ಯಕತೆಗಳನ್ನು ಪೂರೈಸುವತ್ತ ಅತೀ ಹೆಚ್ಚು ಗಮನಹರಿಸಿದ್ದು, ಬಡವರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಜನಾಂಗದ ಹಾಗೂ ಬುಡಕಟ್ಟು ಜನಾಂಗ, ಅಲ್ಪಸಂಖ್ಯಾತರ ಅವಕಾಶ ವಂಚಿತ ಜನರ ಕಲ್ಯಾಣಕ್ಕಾಗಿ ಪರಿಣಾಮಕಾರಿಯಾದ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. 

ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಯಾವುದೇ ಯೋಜನೆಗಳನ್ನು ಪ್ರಕಟಿಸದ ಕೇಂದ್ರ ಸರ್ಕಾರ ರಾಷ್ಟçದ ಜನತೆಗೆ ನಿರಾಸೆ ಮೂಡಿಸಿದೆ. ಕರ್ನಾಟಕದ ಯಾವುದೇ ಪರಿಣಾಮಕಾರಿ ನೀರಾವರಿ ಯೋಜನೆಯಾಗಲಿ ಅಥವಾ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ರೀತಿಯ ಹಣ ಒದಗಿಸದೇ ಕರ್ನಾಟಕ ರಾಜ್ಯಕ್ಕೆ ಏಮ್ಸ್ ಮತ್ತು ಐಐಟಿಗಳ ಪ್ರಸ್ತಾಪಗಳಿಲ್ಲದೇ ಮಂಡಿಸಿರುವ ಈ ಮುಂಗಡ ಪತ್ರ ಕರ್ನಾಟಕದ ಜನತೆಗೆ ಬಿಜೆಪಿ ಭ್ರಮನಿರಸನಗೊಳಿಸಿದೆ. 

ಯಾವುದೇ ದೂರದೃಷ್ಟಿಯಿಲ್ಲದ ಪುರೋಗಾಮಿಯಾಗಿರದ ಈ ಮುಂಗಡ ಪತ್ರ ರಾಷ್ಟçದ ಜನತೆಗೆ ಸಂಪೂರ್ಣವಾಗಿ ಮೋಸಗೊಳಿಸಿದೆ.  

ಆದರೆ ಈ ಮುಂಗಡ ಪತ್ರದ ಭಾಷಣದಲ್ಲಿ ಅರ್ಥ ಸಚಿವೆ ನಿರ್ಮಲ ಸೀತಾರಾಮನ ರವರು ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪುಟ 30ರಲ್ಲಿ ವಿವರಿಸಿರುವ ಉದ್ಯೋಗಕ್ಕೆ ಉತ್ತೇಜನ ನೀಡುವ ವಿಷಯವನ್ನು ಬಜೆಟ್ನಲ್ಲಿ ಅಳವಡಿಸಿಕೊಂಡಿರುವುದಕ್ಕೆ ನನಗೆ ಸಂತಸವಾಗಿದೆ. ನಿರುದ್ಯೋಗಿಗಳಿಗೆ ಅಪ್ರೆಂಟಿಸ್ಶಿಪ್ ಭತ್ಯೆಯೊಂದಿಗೆ ಯಥಾವತ್ತಾಗಿ ಕಾಂಗ್ರೆಸ್ನ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆಯ ಪರಿಣಾಮಕಾರಿ ಯೋಜನೆಯನ್ನು ಅತ್ಯಂತ ವ್ಯಾಪಕವಾಗಿ ಬಿಂಬಿಸಿರುವುದಕ್ಕೆ ಅಭಿನಂದಿಸುವೆ.

*ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್* – ಪ್ರಲ್ಹಾದ ಜೋಶಿ ಶ್ಲಾಘನೆ*

NDA ಸರ್ಕಾರ ನವಭಾರತ ನಿರ್ಮಾಣಕ್ಕೆ ಪ್ರಸ್ತುತದಲ್ಲಿ ಅತ್ಯುತ್ತಮ ಬಜೆಟ್ ಸಮರ್ಪಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ನವದೆಹಲಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಭಾರತದ ಆರ್ಥಿಕ ಪ್ರಗತಿ, ಸಾಮರ್ಥ್ಯದ ಜತೆಗೆ ಯುವಜನತೆ, ಮಹಿಳೆಯರು ಮತ್ತು ರೈತರ ಅಭಿವೃದ್ಧಿಯ ಬದ್ಧತೆಯನ್ನು ಈ ಬಜೆಟ್  ಸಾಬೀತುಪಡಿಸಿದೆ ಎಂದು ಪ್ರತಿಪಾದಿಸಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಬಜೆಟ್ ವಿಶೇಷವಾಗಿ ಯುವ ಜನರಲ್ಲಿ ವಿಶ್ವಾಸವನ್ನು ತುಂಬುತ್ತದೆ ಎಂದರು.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಮಧ್ಯಮ, ಕೆಳ ವರ್ಗ ಮತ್ತು ಬಡ ಜನರಿಗೆ ಪ್ರಯೋಜನಕಾರಿ. ಮತ್ತಿದು ವಿಶ್ವದ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಪ್ರಸ್ತುತ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಮೂಲಕ ವಿಕಸಿತ ಭಾರತಕ್ಕೆ ಮಾರ್ಗ ತೋರಿದ್ದಾರೆ ಎಂದರು.

ಎಂಎನ್‌ಆರ್‌ಇ ವಲಯದ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ 1.28 ಕೋಟಿಗೂ ಹೆಚ್ಚು ನೋಂದಣಿ ಮತ್ತು 14 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಮೇಲ್ಛಾವಣಿ ಸೌರ ಫಲಕ ಅಳವಡಿಸಲು ಅನುಕೂಲ ಆಗುವಂತೆ ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ಸಚಿವ ಜೋಶಿ ಅವರು ಮಾಹಿತಿ ನೀಡಿದರು.

*300 ಯುನಿಟ್ ವರೆಗೆ ಉಚಿತ ವಿದ್ಯುತ್:* ಸೂರ್ಯ ಘರ್ ಯೋಜನೆ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕಲ್ಪಿಸಲಿದೆ ಎಂದು ತಿಳಿಸಿದರು.

ನಿರ್ಣಾಯಕ ಮತ್ತು ಕಡಲಾಚೆಯ ಖನಿಜಗಳ ಗಣಿಗಾರಿಕೆ 25 ನಿರ್ಣಾಯಕ ಖನಿಜಗಳ ಮೇಲಿನ ಕಸ್ಟಮ್ಸ್ ವಿನಾಯಿತಿ ಮತ್ತು 2 ಖನಿಜಗಳ ಮೇಲೆ ಮೂಲಭೂತ ಕಸ್ಟಮ್ ಸುಂಕವನ್ನು (ಬಿಸಿಡಿ) ಕಡಿತಗೊಳಿಸಲಾಗಿದೆ. ಇದು ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಸರಳ ಮತ್ತು ಸುವ್ಯವಸ್ಥಿತಗೊಳಿಸಲಿ ಎಂದು ಹೇಳಿದರು.

ಇಂಧನ ಪರಿವರ್ತನಾ ಮಾರ್ಗಗಳ ಕುರಿತು ವಿವರಿಸಿದ ಸಚಿವರು, ನವೀಕರಿಸಬಹುದಾದ ಇಂಧನವನ್ನು ಕೇಂದ್ರೀಕರಿಸುವ ಬಹು ವಲಯದ ದಾಖಲೆಯಾಗಿದೆ ಎಂದು ತಿಳಿಸಿದರು.

ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ : ಡಾ.ಪ್ರಭಾಕರ ಕೋರೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು. ರೈತರ, ದುರ್ಬಲರು ಹಾಗೂ ಜನಸಾಮಾನ್ಯರ ಬದುಕಿಗೆ ಈ ಬಜೆಟ್ ಹೊಸ ಆಶಾಕಿರಣವಾಗಿದೆ. ದೇಶದ ವಿಕಾಸಕ್ಕಾಗಿ ಹಲವರು ಉಪಕ್ರಮಗಳನ್ನು ಪ್ರಸ್ತುತ ಬಜೆಟ್ ಮೂಲಕ ತೆಗೆದುಕೊಂಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಕೃಷಿ ಕ್ಷೇತ್ರಕ್ಕೆ ೧.೫೨ ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ೧ ಕೋಟಿ ರೈತರು ನೈಸರ್ಗಿಕ ಕೃಷಿವ್ಯಾಪ್ತಿಯ ಪರಿಹಾರಕ್ಕೆ ಒಳಪಡಲಿದ್ದಾರೆ. ಮಾತ್ರವಲ್ಲದೆ ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ಯುವಜನಾಂಗದ ಕೌಶಲ್ಯಾಭಿವೃದ್ಧಿಗೆ ೧.೪೮ ಲಕ್ಷ ಕೋಟಿ ರೂ.ಗಳನ್ನು ತೆಗೆದಿಟ್ಟಿರುವುದು ಸಂತಸದ ಸಂಗತಿ. ಆರೋಗ್ಯ, ಕೈಗಾರಿಕೆ, ಸಂಶೋಧನೆ, ತಂತ್ರಜ್ಞಾನ ಕ್ಷೇತ್ರಗಳಿಗೂ ಭರಪೂರ ಹಣವನ್ನು ಮೀಸಲಿಟ್ಟಿದ್ದಾರೆ. ಅದರೊಂದಿಗೆ ಮಹಿಳೆಯರ ಸರ್ವಾಂಗೀಣ  ವಿಕಾಸಕ್ಕಾಗಿ ೩ ಸಾವಿರ ಕೋಟಿಗಳನ್ನು ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ವಿಶ್ವದ ಶಕ್ತಿಶಾಲಿ ದೇಶವನ್ನಾಗಿ ರೂಪಿಸುವಲ್ಲಿ ದಿಟ್ಟಕ್ರಮಗಳನ್ನು ಬಜೆಟ್ ತೆಗೆದುಕೊಂಡಿದೆ. ಭಾರತದ ವಿಕಾಸದ ಭರವಸೆಯ ಹೆಜ್ಜೆಗಳನ್ನು ಇಲ್ಲಿ ಕಾಣಬಹುದೆಂದು ಡಾ.ಪ್ರಭಾಕರ ಕೋರೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೇಂದ್ರ ಬಜೆಟ್ ನಿರಾಶಾದಾಯಕ: ಸಚಿವ ಸತೀಶ್‌ ಜಾರಕಿಹೊಳಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮಂಡನೆ ಮಾಡಿದ ಬಜೆಟ್ ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಬಜೆಟ್ ಜನಪರ, ರೈತ ಪರವಾಗಿರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಯಾವ ವರ್ಗಕ್ಕೂ ನಯಾಪೈಸೆ ಲಾಭವಿಲ್ಲದ ನಿರಾಶಾದಾಯಕ ಬಜೆಟ್ ಆಗಿದೆ. ಮೋದಿ ಸರ್ಕಾರದ ಬಜೆಟ್​ ಸಂಪೂರ್ಣ ನಿರಾಶಾದಾಯಕವಾಗಿದೆ. ಮಧ್ಯಮ ಮತ್ತು ಬಡವರ್ಗ ಸೇರಿದಂತೆ ಯಾರಿಗೂ ಬಜೆಟ್​ನಿಂದ ಅನುಕೂಲವಾಗಿಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.

ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಮತ್ತು ಅದಕ್ಕೆ ಸಂಬಂಧಿಸಿ ವಿಷಯದಲ್ಲಿ ಬಜೆಟ್​ನಲ್ಲಿ ಏನೂ ಇಲ್ಲ. ಸರ್ಕಾರಿ ಉದ್ಯೋಗದ ಬಗ್ಗೆಯೂ ಬಜೆಟ್​ನಲ್ಲಿ ಯಾವುದೇ ಮಾರ್ಗಸೂಚಿ ಇಲ್ಲ. ನಿರುದ್ಯೋಗದ ಕುರಿತು ಬಜೆಟ್​ನಲ್ಲಿ ಯಾವುದೇ ದೃಷ್ಟಿಕೋನಗಳಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹರಿಹಾಯ್ದರು.

ರಾಜ್ಯದ ಪಾಲಿಗೆ ನಿರಾಸೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಪಾದನೆ

ಕರ್ನಾಟಕದ ರಾಜ್ಯಸಭಾ ಸದಸ್ಯೆಯೂ ಆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ರಾಜ್ಯದ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಇದೊಂದು ತಾರತಮ್ಯ ಬಜೆಟ್ ಆಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕೇಂದ್ರ ಬಜೆಟ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಒಂದು ಕಣ್ಣಿಗೆ ಬೆಣ್ಣಿ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಬಜೆಟ್ ನಲ್ಲಿ ಕೆಲ ಅಂಶಗಳು ಬಿಂಬಿತವಾಗಿವೆ. ಎನ್ ಡಿಎ ಸರ್ಕಾರದ ಭಾಗವಾಗಿರುವ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಭರಪೂರ ಯೋಜನೆಗಳನ್ನು ಘೋಷಿಸಲಾಗಿದೆ.  ಆದರೆ, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕದ ಬಾಕಿ ಇರುವ ಯೋಜನೆಗಳಿಗೂ ಅನುದಾನ ನೀಡಿಲ್ಲ ಎಂದು ತಿಳಿಸಿದ್ದಾರೆ.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದೆ. ಆದರೂ, ಮತ್ತೆ ಮತ್ತೆ, ನಿರುದ್ಯೋಗ ಸಮಸ್ಯೆ ನಿವಾರಿಸುವ ಘೋಷಣೆಗಳು ಮರುಕಳಿಸುತ್ತಲೇ ಇವೆ. ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ ಘೋಷಿಸಲಾಗಿದೆ. ಆದರೆ, ಇದು ಬರೀ ಸಾಲದ ಮೊತ್ತ ಹೆಚ್ಚಳ ಮಾಡಲಾಗಿದೆ ಅಷ್ಟೇ. ರೈತರಿಗೆ ಘೋಷಿಸಲಾಗಿರುವ ಕಿಸಾನ್‌ ಕ್ರೆಡಿರ್ಟ್‌ ಕಾರ್ಡ್‌ ನಿಂದ ಯಾವುದೇ ಉಪಯೋಗವಿಲ್ಲ ಎಂದು ಸಚಿವರು ಹೇಳಿದ್ದಾರೆ.

ಪ್ರಮುಖವಾಗಿ ಕೇಂದ್ರ ಬಜೆಟ್ ನಲ್ಲಿ ಲೋಕಸಭಾ ಚುನಾವಣೆ ವೇಳೆ ನಮ್ಮ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಚುನಾವಣಾ ಪ್ರಣಾಳಿಕೆಯ ಅಂಶಗಳೇ ಹೆಚ್ಚಿವೆ. ನಮ್ಮ ಪ್ರಣಾಳಿಕೆಯನ್ನು ಅಂಶಗಳನ್ನು ಕೇಂದ್ರದ ಎನ್ ಡಿಎ ಸರ್ಕಾರ ಕಳವು ಮಾಡಿದೆ. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದಂತಹ ತುರ್ತು ಸಮಸ್ಯೆಗಳಿಗೆ ಸ್ಪಂದನೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಏಮ್ಸ್‌ ನಿರೀಕ್ಷೆಗೆ ಕೇಂದ್ರ ಸರಕಾರದಿಂದ ತಣ್ಣೀರು: ಎನ್‌ ಎಸ್‌ ಭೋಸರಾಜು

ಮೋದಿ ಸರಕಾರದ ಬಜೆಟ್‌ ರಾಜ್ಯದ ಅದರಲ್ಲೂ ಕಲ್ಯಾಣ ಕರ್ನಾಟಕದ ನಿರೀಕ್ಷೆಗಳಿಗೆ ತಣ್ಣೀರು ಎರಚಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಪ್ರತಿಕ್ರಿಯಿಸಿದ್ದಾರೆ. 

ಕೇವಲ ತಮ್ಮ ಮಿತ್ರ ಪಕ್ಷಗಳ ಹಿತಾಸಕ್ತಿಯನ್ನ ಕಾಪಾಡಿಕೊಂಡಿರುವ ಬಜೆಟ್‌ ಇದಾಗಿದ್ದು, ಕರ್ನಾಟಕ ರಾಜ್ಯ ನಿರೀಕ್ಷಿಸಿದ್ದ ನೀರಾವರಿ ಯೋಜನೆಗಳ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡದೇ ಇರುವ ಮೂಲಕ ಮತ್ತೊಮ್ಮೆ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವಂತೆ ಕಳೆದ 700 ಕ್ಕೂ ಹೆಚ್ಚು ದಿನಗಳಿಂದ ರಾಯಚೂರಿನಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುತ್ತಿದೆ. ಸ್ವತಃ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಾವೇ ಹಲವಾರು ಬಾರಿ ಈ ಬಗ್ಗೆ ಮನವಿ ಪತ್ರವನ್ನ ಸಲ್ಲಿಸಿದ್ದಾರೆ. ಅಲ್ಲದೇ, ಹಲವಾರು ಬಾರಿ ಆ ಭಾಗದ ಜನಪ್ರತಿನಿಧಿಗಳು ತಮ್ಮ ಮನವಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದ್ದಾರೆ. ಆದರೂ ಯಾವುದೇ ಕರುಣೆ ತೋರಿಸದೇ ರಾಜ್ಯಕ್ಕೆ ಅದರಲ್ಲೂ ಕಲ್ಯಾಣ ಕರ್ನಾಟಕದ ನಿರೀಕ್ಷೆಗೆ ತಣ್ಣೀರು ಎರಚುವ ಕಾರ್ಯವನ್ನು ಕೇಂದ್ರ ವಿತ್ತ ಸಚಿವರು ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಕೇಂದ್ರ ಬಜೆಟ್‌ ಮೇಲೆ ಜನಸಾಮಾನ್ಯರು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಹಿಂದುಳಿದ ವರ್ಗಗಳಿಗೆ, ರೈತರ ಅಭ್ಯುದಯಕ್ಕೆ, ಮಧ್ಯಮ ವರ್ಗದ ನಿರೀಕ್ಷೆಗಳಿಗೆ ಇಂಬು ನೀಡಿದೇ ಇರುವಂತಹ ಬಜೆಟನ್ನ ಮಂಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಭವಿಷ್ಯದ ಭಾರತದ ಯುವಕರ ಬಜೆಟ್‌: ಬಸವರಾಜ ಬೊಮ್ಮಾಯಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರದ ಬಜೆಟ್ ಭವಿಷ್ಯದ ಭಾರತದ ಯುವಕರ ಬಜೆಟ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರದ ಬಜೆಟ್ ನಂತರ ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷದ ಆರ್ಥಿಕತೆಯ ಸುಧಾರಣೆಯಿಂದ ವಿಶ್ವದಲ್ಲಿಯೇ ಭಾರತ ಬೆಳೆಯುತ್ತಿರುವ ರಾಷ್ಟ್ರ ಎನ್ನುವುದನ್ನು ಈ ಬಜೆಟ್  ತೋರಿಸುತ್ತದೆ. ಹಣದುಬ್ಬರ ಸೀಮಿತಗೊಳಿಸಿರುವುದು, ಹೆಚ್ಚು ಜನರಿಗೆ ಕೆಲಸ ಕೊಡಿಸಿರುವುದು ಹತ್ತು ವರ್ಷದಲ್ಲಿ ಮಾಡಿರುವುದರ ಫಲವಾಗಿ ವಿಕಸಿತ ಭಾರತ ಮಾಡುವ ಹತ್ತು ವರ್ಷದ ಫಲವನ್ನು ಬರುವ ದಿನಗಳಲ್ಲಿ ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಪರವಾದ ಬಜೆಟ್ ಇದಾಗಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1.5 ಲಕ್ಷ ಕೋಟಿ, ಉದ್ಯೋಗ, ಕೌಶಲ್ಯಾಬಿವೃದ್ಧಿಗೆ 1.5 ಲಕ್ಷ ಕೋಟಿ, ಮುದ್ರಾ ಯೋಜನೆಯಲ್ಲಿ ಸಾಲ ನೀಡುವ ಪ್ರಮಾಣವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಳ ಮಾಡಿರುವುದು, ಗ್ರಾಮೀಣಾಭಿವೃದ್ಧಿ ಅಭಿವೃದ್ಧಿಗೆ 1 ಲಕ್ಷ ಕೋಟಿ, ಬಡವರಿಗೆ 3 ಕೋಟಿ ಮನೆ ಕೊಡುವುದು, ಕೃಷಿ ವಲಯಕ್ಕೆ ಬಹಳ ಒತ್ತು ಕೊಟ್ಟಿದ್ದು, ಕೃಷಿ ಉತ್ಪಾದನೆ ಹೆಚ್ಚಳ ಮತ್ತು ಸಂಸ್ಕರಣೆಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.

ಉತ್ಪಾದನಾ ವಲಯದಲ್ಲಿ ವಿಶೇಷವಾಗಿ ಸಣ್ಣ ಕೈಗಾರಿಕೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಸೇವಾ ವಲಯವೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮೂರು ವಲಯದಲ್ಲಿ ಹೆಚ್ಚಿಗೆ ಹಣ ಹೂಡಿಕೆ ಮಾಡಲು ದೇಶದ ಆರ್ಥಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ವಲಯಗಳಾದ ಶಿಕ್ಷಣ, ಆರೋಗ್ಯ ಉದ್ಯೋಗಕ್ಕೆ ಹೆಚ್ಚಿನ ಹಣ ನೀಡಿರುವುದು ಸ್ವಾಗತಾರ್ಹ ವಿಷಯ. ಮೂಲ ಸೌಕರ್ಯ ಅಭಿವೃದ್ಧಿಗೆ ಕಳೆದ ಬಾರಿಗಿಂತ ಹೆಚ್ಚು ಹಣ ನೀಡಿದ್ದಾರೆ. ಮಹಿಳೆಯ ಸಬಲೀಕರಣಕ್ಕೆ ವಿಶೇಷ ಕಾನೂನು ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ.

ವಿದ್ಯುತ್ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ನವೀಕರಣ ಇಂಧನಕ್ಕೆ ಮಹತ್ವ ನೀಡಿದ್ದು, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಸುಮಾರು ಒಂದು ಕೋಟಿ ಜನರಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ ಈಗಾಗಲೇ ಒಂದು ಲಕ್ಷ ಜನರು ಹೆಸರು ನೋಂದಾಯಿಸಿರುವುದು ದಾಖಲಾಗಿದೆ ಎಂದು ಹೇಳಿದರು.

ಸಾಮಾನ್ಯ ಜನರ ತೆರಿಗೆ ಕಡಿಮೆ ಮಾಡಿದ್ದು, ಮೂರು ಲಕ್ಷದವರೆಗೂ ಯಾವುದೇ ತೆರಿಗೆಯಿಲ್ಲ. ಮೂರು ಲಕ್ಷದಿಂದ 7 ಲಕ್ಷದವರೆಗೆ ಶೇ 5% ರಷ್ಟು ತೆರಿಗೆ ವಿಧಿಸಿ ತೆರಿಗೆ ಕಡಿಮೆ ಮಾಡಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಶಿಸ್ತು ಕಾಪಾಡಿರುವುದು ಮುಖ್ಯವಾಗಿದೆ. ವಿತ್ತಿಯ ಕೊರತೆ 5.3% ರಿಂದ 4.7  ಕ್ಕೆ ಇಳಿಸಿದ್ದು, ಮುಂದಿನ ವರ್ಷ 4.5% ಕ್ಕೆ ಇಳಿಸುವಂಥದ್ದು ಹಾಗೂ ವಿದೇಶಿ ನೇರ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವಂತೆ ಅನುಕೂಲ ಮಾಡಿದ್ದು, ಸರ್ಕಾರದ ಸಾಲ ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇದು ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಹೇಳಿದರು.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ನಿರ್ಲಕ್ಷ್ಯ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಟೀಕೆ 

ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು 7ನೇ ಬಾರಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್‌ ಕುರಿತು ತಮ್ಮ ಅಭಿಪ್ರಾಯವನ್ನು ಪ್ರಕಟಣೆಯಲ್ಲಿ ತಿಳಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ,  ಹೈದರಾಬಾದ್-ಕರ್ನಾಟಕ ಕಾರಿಡಾರ್ ಯೋಜನೆ ಬಿಟ್ಟರೆ, ಕರ್ನಾಟಕಕ್ಕೆ ಬಹುಬೇಡಿಕೆಯ ರೈಲ್ವೆ ಯೋಜನೆಯಾಗಲಿ, ನೀರಾವರಿ ಯೋಜನೆಗಳಾಗಲಿ ಘೋಷಣೆ ಮಾಡಿಲ್ಲ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್‌ ಇಡೀ ದೇಶಕ್ಕೆ ಅನ್ವಯ ಆಗುವುದರಿಂದ ರಾಜ್ಯಕ್ಕೆ ಎಷ್ಟು ಸಿಗುತ್ತದೆ ಎಂಬುವುದನ್ನು ಊಹಿಸಲು ಸಾಧ್ಯವಿಲ್ಲ. ಬಿಜೆಪಿಗೆ ಸರ್ಕಾರ ರಚನೆಗೆ ಸಹಕರಿಸಿದ ಜೆಡಿಯು ಆಡಳಿತದ ಬಿಹಾರ, ತೆಲುಗುದೇಶಂ ಆಡಳಿತದ ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಬಿಹಾರಕ್ಕೆ 26 ಸಾವಿರ ಕೋಟಿ ರೂ., ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ರೂ. ಆರ್ಥಿಕ ಪ್ಯಾಕೇಜ್ ನೀಡಲಾಗಿದೆ. ಆದರೆ ಕರ್ನಾಟಕಕ್ಕೆ ಯಾವುದೇ ಪ್ರಮುಖ ಯೋಜನೆಗಳಾಗಲಿ ಅಥವಾ ವಿಶೇಷ ಪ್ಯಾಕೇಜ್‌ ನೀಡಿಲ್ಲವೆಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ತಿಳಿಸಿದ್ದಾರೆ.

ಬಜೆಟ್  ಗೆಕಾಂಗ್ರೆಸ್ ಪ್ರಣಾಳಿಕೆಯೇ ಸ್ಫೂರ್ತಿ: ಈಶ್ವರ ಖಂಡ್ರೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸ್ಪೂರ್ತಿಯಾಗಿದೆ  ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನೆಡೆ ಅನುಭವಿಸಿದ ಬಳಿಕ ಬಿಜೆಪಿ ಮತ್ತು ಎನ್.ಡಿ.ಎ.ಗೆ ಬುದ್ಧಿ ಬಂದಿದೆ. ಕಾಂಗ್ರೆಸ್ ಪಕ್ಷ ತನ್ನ ಲೋಕಸಭಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಯುವಕರಿಗೆ ಅಪ್ರೆಂಟಿಷಿಪ್ ನೀಡುವ ಯೋಜನೆ ಸೇರಿದಂತೆ ಹಲವು ಅಂಶಗಳನ್ನು ಅಳವಡಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಕೆಟ್ಟ ನೀತಿಗಳಿಂದಾಗಿ ದೇಶದಲ್ಲಿ 45 ವರ್ಷದಲ್ಲೇ ಕಂಡು ಕೇಳರಿಯದ ನಿರುದ್ಯೋಗ ಸಮಸ್ಯೆ ಉಂಟಾಗಿತ್ತು. ಕಳೆದ 10 ವರ್ಷಗಳ ಕಾಲ ನಿರುದ್ಯೋಗ ಸಮಸ್ಯೆ ಬಗ್ಗೆ ಗಮನವನ್ನೇ ಹರಿಸದಿದ್ದ ಕೇಂದ್ರ ಸರ್ಕಾರ ಈ ಬಜೆಟ್ ನಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ಗಾದೆಯಂತೆ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಸಿಂಹಪಾಲು ಹಾಗೂ ಎನ್.ಡಿ.ಎ. ಸರ್ಕಾರ ಇರುವ ರಾಜ್ಯಗಳಿಗೆ ಆದ್ಯತೆ ನೀಡಿ, ಇತರ ರಾಜ್ಯಗಳನ್ನು ಕಡೆಗಣಿಸಲಾಗಿದ್ದು, ಈ ಬಜೆಟ್ ತಾರತಮ್ಯದಿಂದ ಕೂಡಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದೂ ಈಶ್ವರ ಖಂಡ್ರೆ ಹೇಳಿದ್ದಾರೆ. ಕರ್ನಾಟಕಕ್ಕೆ ನೀಡಿರುವ ಕೊಡುಗೆ ಏನು ಎಂದೂ ಪ್ರಶ್ನಿಸಿದ್ದಾರೆ.

ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ, ಸುಭದ್ರ ಬಜೆಟ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ ಹಾಗೂ ದೇಶದ ಭವಿಷ್ಯ ಬರೆಯುವ ಸುಭದ್ರ ಬಜೆಟ್‌ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಶ್ಲಾಘಿಸಿದ್ದಾರೆ. 

ಕೇಂದ್ರ ಸರ್ಕಾರದ ಬಜೆಟ್‌ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಈ ಆಯವ್ಯಯವು ಭಾರತ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗಲಿದೆ. ರೈತರು, ಮಹಿಳೆಯರು, ಯುವಜನರು, ತೆರಿಗೆ ಪಾವತಿಸುವವರ ಬದುಕನ್ನು ವಿಶ್ಲೇಷಿಸಿ ಅವರ ಅನುಕೂಲಕ್ಕೆ ತಕ್ಕಂತಹ ಬಜೆಟ್‌ ನೀಡಲಾಗಿದೆ. ಇದಕ್ಕಾಗಿ ಆರ್ಥಿಕ ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ. 

ಕಾಂಗ್ರೆಸ್‌ ಸರ್ಕಾರ ಯಾವಾಗಲೂ ಅನುದಾನ ತಾರತಮ್ಯದ ಬಗ್ಗೆ ಹೇಳುತ್ತದೆ. 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ ನೀಡುವ ಪಿಎಂ ಗತಿಶಕ್ತಿ ಮಾಸ್ಟರ್‌ ಪ್ಲಾನ್‌ ಅನ್ನು ಕೇಂದ್ರ ಸರ್ಕಾರ ಇನ್ನೂ 1 ವರ್ಷ ಮುಂದುವರಿಸಲಿದೆ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಖಾಲಿ ಖಜಾನೆಯ ರಾಜ್ಯ ಸರ್ಕಾರ ಇಂತಹ ಯೋಜನೆಗಳನ್ನು ಬಳಸಿಕೊಂಡಾದರೂ ಜನಕಲ್ಯಾಣಕ್ಕೆ ಶ್ರಮಿಸಲಿ ಎಂದು ಅವರು ಹೇಳಿದ್ದಾರೆ. 

ರಾಜ್ಯ ಕಾಂಗ್ರೆಸ್‌ ಸರ್ಕಾರ ಅನ್ನಭಾಗ್ಯ ಯೋಜನೆ ಮುಂದುವರಿಸಲು ಹಾಗೂ ಅಕ್ಕಿ ನೀಡಲು ಇನ್ನೂ ತಿಣುಕಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಿಎಂ ಗರೀಬ್‌ ಕಲ್ಯಾಣ ಅನ್ನ ಯೋಜನೆಯನ್ನು 5 ವರ್ಷ ವಿಸ್ತರಿಸಿ, 80 ಕೋಟಿ ಜನರಿಗೆ ಆಹಾರ ಭದ್ರತೆ ಕಲ್ಪಿಸಿದೆ. ಕ್ಯಾನ್ಸರ್‌ನ 3 ಔಷಧಿಗಳ ಮೇಲಿನ ಕಸ್ಟಮ್‌ ತೆರಿಗೆ ರದ್ದುಪಡಿಸಿ, ರೋಗಿಗಳ ಕುಟುಂಬಕ್ಕೆ ವೆಚ್ಚ ಕಡಿಮೆ ಮಾಡಲಾಗಿದೆ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ.6 ರಷ್ಟು ಕಡಿತ, ಮೊಬೈಲ್ ಹಾಗೂ ಚಾರ್ಜರ್‌ಗಳ ಮೇಲಿನ ತೆರಿಗೆ ಇಳಿಕೆ ಮೊದಲಾದ ಶ್ಲಾಘನೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಇದು ಬೆಲೆ ಇಳಿಕೆಯ ಸುರಕ್ಷಿತ ಬಜೆಟ್‌ ಎಂದು ಅವರು ಬಣ್ಣಿಸಿದ್ದಾರೆ.

ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಿ ಜನರಿಗೆ ಸುಭದ್ರ ಬದುಕು ಸಿಗಲಿದೆ. ಈ ದೂರದೃಷ್ಟಿಯ ಯೋಜನೆಯಿಂದ ರಾಜಧಾನಿ ಬೆಂಗಳೂರು ತನ್ನ ಹಿರಿಮೆಯನ್ನು ಉಳಿಸಿಕೊಳ್ಳಲಿದೆ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದೆ. ಇದಕ್ಕೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಆರ್‌.ಅಶೋಕ ತಿಳಿಸಿದ್ದಾರೆ. 

ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ, 1 ಕೋಟಿ ಕುಟುಂಬಗಳಿಗೆ 300 ಯುನಿಟ್ ವಿದ್ಯುತ್‌, ಮುದ್ರಾ ಯೋಜನೆಯಡಿ 20 ಲಕ್ಷ ರೂ. ಸಾಲ, 1 ಲಕ್ಷ ವಿದ್ಯಾರ್ಥಿಗಳಿಗೆ ಶೇ.3 ಬಡ್ಡಿ ದರದ ಸಾಲ ಮೊದಲಾದ ಯೋಜನೆಗಳು ಜನಕಲ್ಯಾಣಕ್ಕೆ ಹೊಸ ದಿಕ್ಕು ನೀಡಿದೆ ಎಂದು ಅವರು ಹೇಳಿದ್ದಾರೆ.

 *ಸರ್ವರಿಗೂ ಸಮಪಾಲು ಸಮಬಾಳಿನ ಯಶಸ್ವಿ ಬಜೆಟ್*

ಉದ್ಯೋಗ ಸೃಷ್ಟಿಗಾಗಿ 1.48 ಕೋಟಿ ರೂಪಾಯಿ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ. ಉದ್ಯೋಗಿಗಳಿಗೆ 4 ಲಕ್ಷ ರೂ ಸಾಲ.  5 ವರ್ಷಗಳಲ್ಲಿ ನಾಲ್ಕು ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಅನುದಾನ, ಮಹಿಳಾಭಿವೃದ್ಧಿಗೆ 3 ಲಕ್ಷ ಕೋಟಿ ರೂ. ಮಿಸಲು, ಸೂರು ರಹಿತ 3 ಕೋಟಿ ದೇಶವಾಸಿಗಳಿಗೆ  ಹೊಸ ಮನೆಗಳ ನಿರ್ಮಾಣ, 1ಕೋಟಿ ನಗರದ ಬಡವರಿಗೆ ಮನೆ ಕಟ್ಟಲು ನೆರವು, 1ಕೋಟಿ ಮನೆಗಳಿಗೆ 300ಯುನಿಟ್ ಉಚಿತ ವಿದ್ಯುತ್, 12 ಇಂಡಸ್ಟ್ರಿಯಲ್‌ ಪಾರ್ಕ್‌ಗಳ ಸ್ಥಾಪನೆಗೆ ಕ್ರಮ.  ಮೂಲಸೌಕರ್ಯಕ್ಕೆ 11 ಲಕ್ಷ ಕೋಟಿ ರೂ. ಮೀಸಲು. ಗಯಾ, ಬುದ್ಧಗಯಾ ದೇವಸ್ಥಾನಗಳ ಪುನರುಜ್ಜೀವನ. ಮುದ್ರಾ ಲೋನ್‌ 10 ರಿಂದ 20 ಲಕ್ಷಕ್ಕೆ ಏರಿಕೆ. ರಾಜ್ಯಗಳಿಗೆ 50 ವರ್ಷ ಬಡ್ಡಿರಹಿತ ಸಾಲದ ಯೋಜನೆ. ಕೃಷಿಗಾಗಿ 1.52 ಲಕ್ಷ ಕೋಟಿ, ಗರಿಬ್ ಕಲ್ಯಾಣ ಅಡಿಯಲ್ಲಿ ಮತ್ತೆ 5ವರ್ಷ ಉಚಿತ ಪಡಿತರ ವಿತರಣೆಗೆ ಕ್ರಮ. ಬೆಳ್ಳಿ ಬಂಗಾರದ ಅಬಕಾರಿ ಸುಂಕ್ 6ಕ್ಕೆ ಕಡಿತ ಮಾಡಿರುವದು ಸರ್ವರಿಗೂ ತೆರಗೆ ಭಾರವಿಲ್ಲದೆ ಸಕಲ ಭಾಗ್ಯಗಳನ್ನ ಕಲ್ಪಿಸಿದ ಸರ್ವೋತ್ತಮ ಬಜೆಟ್ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ‌ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button