ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ ಬಜೆಟ್ ನ್ನು ವಿವಿಧ ಗಣ್ಯರು ಸ್ವಾಗತಿಸಿದ್ದಾರೆ.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಬಜೆಟ್ ನ್ನು ಪ್ರಶಂಸಿಸಿದ್ದಾರೆ.
ಹುಕ್ಕೇರಿ ಶ್ರೀ
ಉತ್ತರ ಕರ್ನಾಟಕದ ಶಕ್ತಿ ಸೌಧಕ್ಕೆ ಪ್ರಮುಖ ಸರಕಾರಿ ಕಚೇರಿ ಸ್ಥಳಾಂತರ ಮಾಡಬೇಕೆಂದು ಈ ಹಿಂದೆ ಸಿಎಂ ಯಡಿಯೂರಪ್ಪನವರಿಗೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ವಿನಂತಿಸಲಾಗಿತ್ತು. ಈ ಬೇಡಿಕೆಯನ್ನು ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಅಭಿಮಾನದ ಸಂಗತಿ. ಅಲ್ಲದೆ ಮಹದಾಯಿ ಹಾಗೂ ಕಳಸಾ ಬಂಡೂರಿ ನದಿ ಜೋಡಣೆಗೆ ೫೦೦ ಕೋಟಿ ರು. ಬಜೆಟ್‌ನಲ್ಲಿ ಮಿಸಲಿಟ್ಟಿರುವುದು ಸಂತಸ ತಂದಿದೆ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಶಶಿಕಲಾ ಜೊಲ್ಲೆ
ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಕ್ಕಳ ಅಯವ್ಯಯ ಮಂಡನೆ ಮಾಡಲಾಗಿದೆ. ರಾಜ್ಯದಲ್ಲಿರುವ ೧೮ ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ದಿಗೆ ಸಂಬಂದಿಸಿದ ಯೊಜನೆ ರೂಪಿಸಲಾಗಿದೆ. ೨೦೨೦-೨೧ ನೇ ಸಾಲಿನ ಆಯವಯ್ಯದಲ್ಲಿ ೩೬,೩೪೦ ಕೋಟಿ ರೂ.ಗಳ ೨೭೯ ಕಾರ್ಯಕ್ರಮಗಳ ಪ್ರಸ್ತಾಪ ಮಾಡಲಾಗಿದ್ದು ಇದು ಒಟ್ಟಾರೆ ಆಯವ್ಯಯ ಗಾತ್ರದ ೧೫.೨೮ ರಷ್ಟಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಏಳು ಬಾಲ ಹೊಸ ಮಂದಿರಗಳ ಸ್ಥಾಪನೆ ಪ್ರಸ್ತಾಪಿಸಲಾಗಿದೆ. ೫.೬೭ ಕೋಟಿ ರೂ ಅನುದಾನ, ಅಂಧ ತಾಯಂದಿರಿಗೆ ನೀಡುವ ಮಾಸಿಕ ೨೦೦೦ ರೂ . ಶಿಶುಪಾಲನಾ ಭತ್ಯೆ ಯೋಜನೆಯನ್ನು ಎರಡು ವರ್ಷಗಳಿಂದ ಐದು ವರ್ಷದವರೆಗೆ ವಿಸ್ತರಣೆ ಮಾಡಲಾಗಿದೆ. ವನಿತಾ ಸಂಗಾತಿ ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ ೨೫ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿ ಸ್ವಾಗತಿಸಿದ್ದಾರೆ.
ಮಹಾಂತೇಶ ಕವಟಗಿಮಠ
ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಈ ಬಾರಿ ೨ ಲಕ್ಷ ೩೭ ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಈ ಸಾಲಿನ ಬಜೆಟ್ ೩-೪ ದಶಕಗಳ ಹೋರಾಟಕ್ಕೆ ಸಂದ ಜಯವಾಗಿದೆ. ಮಹದಾಯಿ ಯೋಜನೆಗೆ ಕೇಂದ್ರದಿಂದ ಹಸಿರು ನಿಶಾನೆ ದೊರಕಿದ ಕೂಡಲೇ ಬಜೆಟ್‌ನಲ್ಲಿ ವಿಶೇಷ ೫೦೦ ಕೋಟಿಗಳ ಅನುದಾನವನ್ನು ಘೋಷಿಸಿದರು. ರಾಜ್ಯದ ವಿವಿಧ ಏತ ನೀರಾವರಿ ಯೋಜನೆಗಳಿಗಾಗಿ ೫೦೦೦ ಕೋಟಿಗಳ ಅನುದಾನವನ್ನು ತೆಗೆದಿಟ್ಟುರುವರು. ಹಾಗೂ ಬೆಳಗಾವಿ ಸುವರ್ಣ ವಿಧಾನ ಸೌಧವನ್ನು ಸದ್ಬಳಕೆ ಮಾಡುವ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಹಲವಾರು ಕಚೇರಿಗಳನ್ನು ಸ್ಥಳಾಂತರಿಸುವುದು, ಬೆಳಗಾವಿ-ಕಿತ್ತೂರ-ಧಾರವಾಡ ನೇರ ರೈಲು ಮಾರ್ಗಕ್ಕೆ ಭೂಮಿಯನ್ನು ನೀಡಲು ಹಾಗೂ ಅನುದಾನವನ್ನು ನೀಡಲು ಸರ್ಕಾರವು ಒಪ್ಪಿಕೊಂಡಿದೆ. ಬಸವ ಕಲ್ಯಾಣದಲ್ಲಿ ೫೦೦ ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ. ಅದರಂತೆ ಕಾಯಕ ಮತ್ತು ದಾಸೋಹವನ್ನು ನಡೆಸುತ್ತಿರುವ ಮಠ ಮಾನ್ಯಗಳಿಗೆ ಅನುದಾನವನ್ನು ನೀಡಲು ಒಪ್ಪಿಕೊಂಡಿರುತ್ತಾರೆ.
ಒಟ್ಟಾರೆಯಾಗಿ ಸರ್ವಪ್ರಿಯ ಸಮತೋಲನದ ಒಂದು ಐತಿಹಾಸಿಕ ಜನಪರ ಹಾಗೂ ಅಭಿವೃದ್ದಿಪರ ಬಜೆಟ್‌ನ್ನು ಮಂಡಿಸಲಾಗಿದೆ ಎಂದು ಮಹಾಂತೇಶ ಕವಟಗಿಮಠ ಹೇಳಿದ್ದಾರೆ.
ಅಣ್ಣಾ ಸಾಹೇಬ ಜೊಲ್ಲೆ
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿ.ಎಸ್.ಯಡಿಯೂರಪ್ಪರವರು ಇಂದು ಏಳನೇ ಬಾರಿಗೆ ಮಂಡಿಸಿರುವ ಮುಂಗಡ ಪತ್ರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ದೊರೆತಿದೆ. ಉತ್ತರ ಕರ್ನಾಟಕ ಭಾಗದ ರೈತರ ಹಲವು ದಶಕಗಳ ಕನಸು ಕಳಸಾ ಬಂಡೂರಿ ಮಹದಾಯಿ ಯೋಜನೆ ನಮ್ಮ ಸರ್ಕಾರ ಮೂಲಕ ನನಸಾಗುತ್ತಿದೆ. ಈ ಬಾರಿ ೨.೩೭ ಲಕ್ಷ ಕೋಟಿ ರೂ ಗಾತ್ರದ ಮುಂಗಡ ಪತ್ರ ಮಂಡಿಸಿರುವ ಮುಖ್ಯಮಂತ್ರಿ ಬಿಎಸ್‌ವೈಯವರು ಜನಪರ ಹಾಗೂ ಅಭಿವೃದ್ದಿ ಪುರಕವಾದ ಮುಂಗಡ ಪತ್ರವನ್ನು ಮಂಡಿಸಿ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ