Kannada NewsKarnataka NewsLatest

ರಾಜ್ಯ ಮತ್ತು ಬೆಳಗಾವಿ ಅಭಿವೃದ್ಧಿಗೆ ಬಜೆಟ್ ನಲ್ಲಿ ಬಂಪರ್ ಕೊಡುಗೆ – ಡಾ.ಸೋನಾಲಿ ಸರ್ನೋಬತ್ ಶ್ಲಾಘನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿರುವ ರಾಜ್ಯ ಸರಕಾರದ 2022 -23ನೇ ಸಾಲಿನ ಬಜೆಟ್ ರಾಜ್ಯದ ಅಭಿವೃದ್ಧಿಗೆ ಉತ್ತೇಜನ ನೀಡುವಂತಿದ್ದು, ಇದೊಂದು ಐತಿಹಾಸಿಕ ಬಜೆಟ್ ಆಗಿದೆ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಕ್ಷತ್ರೀಯ ಮರಾಠಾ ಸಮಾಜದ ಖಾನಾಪುರ ಮಹಿಳಾ ಘಟಕದ ಅಧ್ಯಕ್ಷೆ, ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.

ಕೋವಿಡ್ ನಿಂದ ಉಂಟಾಗಿದ್ದ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳಿಂದ ಪಾರಾಗಿ ಮತ್ತೆ ಆರ್ಥಿಕತೆಯ ಚೇತರಿಕೆಗೆ ಈ ಬಜೆಟ್ ಪ್ರೇರಣೆ ನೀಡಲಿದೆ . ಅನೇಕ ಸವಾಲುಗಳ ನಡುವೆಯೂ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯವನ್ನು ದೇಶದಲ್ಲೇ ನಂಬರ್ 1 ಸ್ಥಾನಕ್ಕೆ ಕೊಂಡೊಯ್ಯುವ ಸಂಕಲ್ಪ ಈ ಬಜೆಟ್ ನಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಯೋಜನೆ ಈ ಭಾಗದ ಜನರಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳಗಾವಿಯಲ್ಲಿ ವೃತ್ತಿನಿರತ ಮಹಿಳಾ ವಸತಿ ನಿಲಯ ಮತ್ತು ಪರಿಶಿಷ್ಟ ಜಾತಿ, ಪಂಗಡದ ವಸತಿ ನಿಲಯ ನಿರ್ಮಿಸಲು ಅನುದಾನ ಒದಗಿಸಲಾಗಿದೆ. ನವಿಲುತೀರ್ಥದಲ್ಲಿ ಪಕ್ಷಿದಾಮ ನಿರ್ಮಾಣವಾಗಲಿದೆ. ಇವೆಲ್ಲ ಬೆಳಗಾವಿಗೆ ಮುಖ್ಯಮಂತ್ರಿಗಳು ನೀಡಿರುವ ದೊಡ್ಡ ಕೊಡುಗೆ ಎಂದು ಸೋನಾಲಿ ಸರ್ನೋಬತ್ ಪ್ರಶಂಸಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಹೆಚ್ಚಳಕ್ಕಾಗಿ ದಾಖಲೆ ಹಣ ನಿಗದಿಪಡಿಸಿರುವುದರಿಂದ  ರಾಜ್ಯದ ಶೈಕ್ಷಣಿಕ ಕ್ಷೇತ್ರದ ಗುಣಮಟ್ಟ ಮತ್ತು ಆರೋಗ್ಯ ಸೇವೆ ಹೆಚ್ಚಲು ಕಾರಣವಾಗಲಿದೆ.  ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮಾಸಾಶನ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವ ಮೂಲಕ ಮುಖ್ಯಮಂತ್ರಿಗಳು ಲಕ್ಷಾಂತರ ಕಾರ್ಯಕರ್ತೆಯರ ಕುಟುಂಬಕ್ಕೆ ನೆರವಾಗುವ ಆಪದ್ಭಾವಂಧವನಾಗಿದ್ದಾರೆ.  ಅವರಿಗೆ ನೀಡುತ್ತಿದ್ದ ಗೌರವಧನವನ್ನು ಸೇವೆಯ ಆಧಾರದ ಮೇಲೆ ಹೆಚ್ಚಿಸಲು ನಿರ್ಧರಿಸಲಾಗಿದೆ. 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1500 ರೂ., 10 ರಿಂದ 20 ವರ್ಷ ಸೇವೆ ಸಲ್ಲಿಸಿದವರಿಗೆ 1250 ರೂ. ಮತ್ತು 10 ಕ್ಕಿಂತ ಕಡಿಮೆ ವರ್ಷ ಸೇವೆ ಸಲ್ಲಿಸಿದವರಿಗೆ ರೂ.1000 ಹೆಚ್ಚಿಸಲು ಈ ಬಜೆಟ್ ನಲ್ಲಿ ನಿರ್ಧರಿಸಿರುವುದು ಅವರ ಬಹುದಿನಗಳ ಬೇಡಿಕೆಯನ್ನೂ ಪೂರೈಸಿದಂತಾಗಿದೆ ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.

• ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲಭ್ಯ ನಿರ್ಮಾಣದಂತಹ ಆದ್ಯತಾ ವಲಯಗಳಿಗೆ ಈ ಬಾರಿ ಹೆಚ್ಚಿನ ವರದಾನ ಲಭಿಸಿರುವುದರಿಂದ ನಮ್ಮ ರಾಜ್ಯಕ್ಕೆ ಇದರಿಂದ ದೀರ್ಘಕಾಲಿಕ ಪ್ರಯೋಜನ ಲಭಿಸಲಿದೆ. ಹೀಗೆ ಹತ್ತು ಹಲವು ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡುವಂತಹ  ಬಜೆಟ್ ಇದಾಗಿದೆ ಎಂದಿದ್ದಾರೆ.
ಜನರ ಬೇಡಿಕೆ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಈ ಬಜೆಟ್ ನಲ್ಲಿ ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ವಿಶೇಷ. ಇದರಿಂದಾಗಿ ಕಾರ್ಮಿಕರಿಂದ ಹಿಡಿದು ಕೈಗಾರಿಕೋದ್ಯಮಿಗಳವರೆಗೆ, ವಿದ್ಯಾರ್ಥಿಗಳಿಂದ ಹಿಡಿದು ಕೃಷಿಕರವರೆಗೆ ಎಲ್ಲ ಸಮುದಾಯಗಳ ಒಳಿತನ್ನೂ ಒಳಗೊಂಡಿರುವ ಈ ಬಜೆಟ್  ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಕಳಸಾ – ಬಂಡೂರಿ ಯೋಜನೆ ಜಾರಿಗಾಗಿ ಅನೇಕ ವರ್ಷಗಳಿಂದ  ಬೊಮ್ಮಾಯಿ ಅವರು ಪಾದಯಾತ್ರೆಯೂ ಸೇರಿದಂತೆ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಈ ಯೋಜನೆ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಕನಸಾಗಿತ್ತು. ಇದನ್ನು ನನಸು ಮಾಡುವ ನಿಟ್ಟಿನಲ್ಲಿ ತಾವು ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಬಜೆಟ್ ನಲ್ಲಿಯೇ ಈ ಯೋಜನೆಗಾಗಿ 1000 ಕೋಟಿ ರೂ. ಮೀಸಲಿಟ್ಟಿರುವುದು ಅವರ ಬದ್ಧತೆಗೆ ಉದಾಹರಣೆಯಾಗಿದೆ. ಮೇಕೆದಾಟು ಯೋಜನೆಗೂ 1000 ಕೋಟಿ ರೂ. ಅನುದಾನ ಘೋಷಿಸಿರುವುದು ಸ್ವಾಗತಾರ್ಹ ಎಂದು ಸರ್ನೋಬತ್ ಹೇಳಿದ್ದಾರೆ.

ಈ ಬಜೆಟ್ ನಲ್ಲಿ ರಸ್ತೆ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ  ಸಾಕಷ್ಟು ಅನುದಾನ ಒದಗಿಸಲಾಗಿದೆ.  ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗಳ  ಅನುದಾನ ವನ್ನು ಘೋಸಿಸುವ ಮೂಲಕ ಕಳೆದ ಬಾರಿಗಿಂತ ಸುಮಾರು 1000 ಕೋಟಿ ರೂ. ಈ ಬಾರಿ ಹೆಚ್ಚಿನ ಅನುದಾನ ಒದಗಿಸಿದ್ದಾರೆ.  ರಾಜ್ಯ ಸರ್ಕಾರದ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ 1,600 ಕೋಟಿ ರೂ.ಗಳ ಕಾಮಗಾರಿಗಳನ್ನು 2022-23 ನೇ ಸಾಲಿನಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯ ಜೊತೆಗೆ ಸಂಚಾರ ಸಾಗಾಟಕ್ಕೂ ಅನುಕೂಲವಾಗಲಿದೆ.
300 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಮಳೆಗಾಲದಲ್ಲಿ ಹಾನಿಯಾಗಿರುವ ರಸ್ತೆಗಳ ರಿಪೇರಿಗಾಗಿ ಒದಗಿಸಲಾಗಿದೆ. ಇದರಿಂದ ರಸ್ತೆಗಳ ವ್ಯಾಪಕ ಸುಧಾರಣೆಗೆ ಕಾರಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಗದಗ-ವಾಡಿ, ಕುಡಚಿ-ಬಾಗಲಕೋಟೆ ಮಾರ್ಗಗಳೂ ಸೇರಿದಂತೆ ಹಲವು ರೈಲ್ವೆ ಮಾರ್ಗ ಯೋಜನೆಗಳಿಗೂ ಮತ್ತಷ್ಟು ಚಾಲನೆ ನೀಡಲಾಗುತ್ತಿರುವುದರಿಂದ ಜಿಲ್ಲಾ ಮಟ್ಟದಲ್ಲೂ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬೆಳಗಾವಿ – ಧಾರವಾಡ ರೈಲ್ವೆ ಲೈನ್ ಗೂ ಅನುದಾನ ಒದಗಿಸಲಾಗಿರುವುದು ಶ್ಲಾಘನೀಯ ಎಂದಿದ್ದಾರೆ.

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button