ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಂಪರ್ ಕೊಡುಗೆ : 800 ಕೋಟಿ ರೂ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಡಿಸಿದ್ದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಮಾರು 800 ಕೋಟಿ ರೂ.ಗಳ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಮೂಜುರು ನೀಡಲಾಯಿತು. ಲಕ್ಷ್ಮೀ ಹೆಬ್ಬಾಳಕರ್ ಅವರು ಕನಸಿನ ಯೋಜನೆ ಹಿರೇಬಾಗೇವಾಡಿಯ 61 ಕೆರೆಗಳನ್ನು ತುಂಬಿಸುವ 519.10 ಕೋಟಿ ರೂ. ಗಳ ಅಂದಾಜು ಮೊತ್ತದ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಳೆದ ಸುಮಾರು 5 ವರ್ಷದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಯೋಜನೆಗಾಗಿ ಪಟ್ಟು ಹಿಡಿದಿದ್ದರು. ನಂತರದಲ್ಲಿ ಕೆಲವರ ಅಡ್ಡಗಾಲಿನಿಂದಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ಆದರೆ ಪಟ್ಟು ಬಿಡದ ಹೆಬ್ಬಾಳಕರ್ ಇದೀಗ ಯೋಜನೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗೆಯೇ, ಬೆಳಗಾವಿ ತಾಲ್ಲೂಕಿನ ಉಚಗಾಂವ್ ಹಾಗೂ ಸಂತಿಬಸ್ತವಾಡ ಹೋಬಳಿಯ 20 ಕೆರೆಗಳನ್ನು ತುಂಬಿಸುವ 287.55 ಕೋಟಿ ರೂ. ಯೋಜನಾ ವರದಿಗೆ ಸಹ ಸಚಿವಸಂಪುಟ ಒಪ್ಪಿಗೆ ನೀಡಿದೆ. ಈ ಬಹುಬೇಡಿಕೆಯ ಯೋಜನೆಗಳನ್ನು ಮಂಜೂರು ಮಾಡಿಸಿದ್ದಕ್ಕಾಗಿ ಕ್ಷೇತ್ರದ ಜನರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಕ್ಕಾಗಿ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಂಪುಟದ ಎಲ್ಲ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ