*ಉದ್ಯಮ ಬೆಳೆಯಲು ಪರಿಶ್ರಮ, ನಿಷ್ಠೆ, ಪ್ರಾಮಾಣಿಕತೆ ಬೇಕು: ಲಕ್ಷ್ಮೀ ಹೆಬ್ಬಾಳಕರ್*; *ಮಾರುಕಟ್ಟೆಗೆ ಕಿಂಗ್ ಐಸ್‌ಕ್ರೀಮ್ ಬಿಡುಗಡೆ ಮಾಡಿದ ಸಚಿವರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೇ ಉದ್ಯಮ ಯಶಸ್ಸು ಕಾಣಲು ಪರಿಶ್ರಮ, ನಿಷ್ಠೆ, ಪ್ರಾಮಾಣಿಕತೆ ಅವಶ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಆದಿತ್ಯ ಮಿಲ್ಕ್ ನ ಕಿಂಗ್ ಬ್ರ್ಯಾಂಡ್ ಐಸ್ ಕ್ರೀಮ್ ಬಿಡುಗಡೆ ಮಾಡಿ ಸಚಿವರು ಮಾತನಾಡಿದರು. ಕಷ್ಟಪಟ್ಟು ದುಡಿದರೆ ಯಾವ ಮಟ್ಟಕ್ಕೂ ಏರಬಹುದು ಎನ್ನುವುದಕ್ಕೆ ವಿಆರ್ ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ ಅವರೇ ಉದಾಹರಣೆ ಎಂದು ಸಚಿವರು ಹೇಳಿದರು.
ವಿಜಯ ಸಂಕೇಶ್ವರ ಅವರು ನಿರಂತರ ಶ್ರಮದಿಂದ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಜಮ್ಮು -ಕಾಶ್ಮೀರದಲ್ಲೂ ಸಂಸ್ಥೆಯ ಕಾರ್ಯವ್ಯಾಪ್ತಿ ವಿಸ್ತಾರವಾಗಿರುವುದು ನಾವೆಲ್ಲ ಹೆಮ್ಮೆ ಪಡುವಂತದ್ದು ಎಂಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಆದಿತ್ಯ ಮಿಲ್ಕ್ ಆರಂಭವಾಗಿ 18 ವರ್ಷದಲ್ಲಿ 4 -5 ರಾಜ್ಯಗಳಲ್ಲಿ ಮನೆ ಮಾತಾಗಿದೆ. ಸಂಸ್ಥೆ ಅಳವಡಿಸಿಕೊಂಡಿರುವ ಶಿಸ್ತು ಮತ್ತು ಉತ್ಪನ್ನಗಳ ಗುಣಮಟ್ಟ ಇದಕ್ಕೆ ಕಾರಣ. ದೀಪಾ ಸಿದ್ನಾಳ ಮತ್ತು ಮಕ್ಕಳು ಉದ್ಯಮವನ್ನು ಮತ್ತು ಕಿಂಗ್ಐಸ್ ಕ್ರೀಂ ನ್ನು ಇಡೀ ರಾಷ್ಟ್ರದಲ್ಲಿ ಮನೆ ಮಾತಾಗುವಂತೆ ಬೆಳೆಸಲಿ. ಅವರ ಕಷ್ಟ, ಸುಖದಲ್ಲಿ ನಾನಿರುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಮಾರುಕಟ್ಟೆಗೆ ಕಿಂಗ್ ಐಸ್‌ಕ್ರೀಮ್ ಬಿಡುಗಡೆ
ಗುಣಮಟ್ಟದ ಹಾಲಿನ ಉತ್ಪನ್ನಗಳ ಮೂಲಕವೇ ಮನೆಮಾತಾಗಿರುವ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್‌ನ ನೂತನ ಉತ್ಪನ್ನವಾದ ‘ಕಿಂಗ್ ಐಸ್‌ಕ್ರೀಮ್’ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಜಗದೀಶ ಶೆಟ್ಟರ್ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇಮನ್ ಡಾ.ವಿಜಯ ಸಂಕೇಶ್ವರ ಅವರು ನಗರದ ಹೊರವಲಯದ ಐಟಿಸಿ ವೆಲ್‌ಕಮ್ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು.
ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಉಪಾಧ್ಯಕ್ಷ ವಿಜಯಕಾಂತ ಸಿದ್ನಾಳ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ವಿತರಕರು, ಸಿಬ್ಬಂದಿ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ನಿರಂತರ ಶ್ರಮ, ಶ್ರದ್ಧೆಯಿಂದಲೇ ವಿಜಯಕಾಂತ ಡೇರಿ ಯಶಸ್ವಿಯಾಗಿ ಬೆಳೆದುನಿಂತಿದೆ. ಅವರೆಲ್ಲರೂ ನಮ್ಮ ಪರಿವಾರ. ನಮ್ಮ ತಾತ ಡಾ.ವಿಜಯ ಸಂಕೇಶ್ವರ ಅವರ ಜನ್ಮದಿನದ ಅಂಗವಾಗಿ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್‌ನಿಂದ ಹೊಸದಾಗಿ ‘ಕಿಂಗ್’ ಐಸ್‌ಕ್ರೀಮ್‌ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ. ಆರಂಭದಲ್ಲಿ ಐದು ನಮೂನೆಯ ಐಸ್‌ಕ್ರೀಮ್ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸುಮಾರು 70 ನಮೂನೆಯ ಐಸ್‌ಕ್ರೀಮ್ ಮಾರುಕಟ್ಟೆಗೆ ಪರಿಚಯಿಸಲಾಗುವುದು. ವಿಜಯಕಾಂತ ಡೇರಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬ್ರಾೃಂಡ್ ಮಾಡಲು ಡಾ.ವಿಜಯ ಸಂಕೇಶ್ವರ ಮತ್ತು ಡಾ.ಆನಂದ ಸಂಕೇಶ್ವರ ಅವರ ಪ್ರೋತ್ಸಾಹ, ಸಹಕಾರವೇ ಕಾರಣ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಒಬ್ಬ ಪ್ರಾಮಾಣಿಕ ವ್ಯಕ್ತಿ ಕಷ್ಟಪಟ್ಟು ದುಡಿದರೆ ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು ಎಂಬುದಕ್ಕೆ ಡಾ.ವಿಜಯ ಸಂಕೇಶ್ವರ ಅವರೇ ಸಾಕ್ಷಿ. ವಿಜಯಕಾಂತ ಡೇರಿ ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಆಶ್ರಯವಾಗಿದ್ದ ಶಿವಕಾಂತ ಸಿದ್ನಾಳ ಅವರ ಅಕಾಲಿಕ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಪುತ್ರ ವಿಜಯಕಾಂತ ಸಿದ್ನಾಳ ಧೈರ್ಯವಂತ ಯುವಕ. ತಂದೆಯ ಕನಸುಗಳನ್ನು ನನಸು ಮಾಡಲು ಹೊರಟಿದ್ದಾರೆ. ಅವರಿಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಲಾಜಿಸ್ಟಿಕ್ಸ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆಗೈದಿರುವ ಡಾ.ವಿಜಯ ಸಂಕೇಶ್ವರ ಬಹಳ ರಿಸ್ಕ್ ತೆಗೆದುಕೊಂಡು ಉದ್ಯಮ ಕಟ್ಟಿ ಬೆಳೆಸಿದ್ದಾರೆ. ಅವರಲ್ಲಿರುವ ಶ್ರದ್ಧೆ, ಶಿಸ್ತು, ಪ್ರಾಮಾಣಿಕ, ಗುರಿಯಿಂದಾಗಿ ಇವತ್ತು ಯಶಸ್ವಿ ಉದ್ಯಮಿಯಾಗಿ ಬೆಳೆದುನಿಂತಿದ್ದಾರೆ. ದಿ. ಶಿವಕಾಂತ ಸಿದ್ನಾಳ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದರು. ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಕಷ್ಟಪಟ್ಟು ಬೆಳೆಸಿದ್ದರು. ಕಿಂಗ್ ಐಸ್‌ಕ್ರೀಮ್ ಕೂಡ ದೊಡ್ಡಮಟ್ಟದ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮಾತನಾಡಿ, ಗುಣಮಟ್ಟದ ಉತ್ಪನ್ನ ಕೊಟ್ಟರೆ ಯಶಸ್ಸು ಸಾಧ್ಯ ಎಂಬುದನ್ನು ಶಿವಕಾಂತ ಸಿದ್ನಾಳ ಸಾಬೀತುಪಡಿಸಿದ್ದರು. ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಮೂಲಕ ಹಾಲಿನ ಉಪ ಉತ್ಪನ್ನಗಳು, ಐಸ್‌ಕ್ರೀಮ್ ಆರಂಭಿಸಿ ಕಡಿಮೆ ಅವಧಿಯಲ್ಲಿ ಜನಪ್ರಿಯಗೊಳಿಸಿದರು. ಹೊಸದಾಗಿ ಕಿಂಗ್ ಐಸ್‌ಕ್ರೀಮ್ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅದರಲ್ಲಿ 70 ನಮೂನೆಯ ಐಸ್‌ಕ್ರೀಮ್‌ಗಳು ಮಾರುಕಟ್ಟೆ ಬರಲಿದೆ. ಕಿಂಗ್ ಐಸ್‌ಕ್ರೀಮ್ ಅಂತಾರಾಷ್ಟೀಯ ಮಟ್ಟಕ್ಕೆ ಬೆಳೆಯುವಂತೆ ಮಾಡಲು ಮೊಮ್ಮಕ್ಕಳಿಗೆ ಸಲಹೆ ನೀಡಿದ್ದೇವೆ. ವಿಜಯಕಾಂತ ಸಿದ್ನಾಳ ಮತ್ತು ಶಿವಾ ಸಂಕೇಶ್ವರ ಅವರಿಗೆ ಕಿಂಗ್ ಐಸ್‌ಕ್ರೀಮ್ ದುಬೈನಲ್ಲಿ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ. ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ವತಿಯಿಂದ ಬೇರೆ ರಾಜ್ಯಗಳಲ್ಲೂ ಘಟಕ ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಉಪಾಧ್ಯಕ್ಷರಾದ ನಿವೇದಿತಾ ಸಿದ್ನಾಳ ಮಾತನಾಡಿ, ನನ್ನ ಅಜ್ಜ ಡಾ.ವಿಜಯ ಸಂಕೇಶ್ವರ, ಸಹೋದರ ವಿಜಯಕಾಂತ ಸಿದ್ನಾಳ ಅವರ ಜನ್ಮದಿನದಂದು ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್‌ನ ಹೊಸ ಉತ್ಪನ್ನ ಕಿಂಗ್ ಐಸ್‌ಕ್ರೀಮ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಕಿಂಗ್ ಐಸ್‌ಕ್ರೀಮ್ ಗುಣಮಟ್ಟದಲ್ಲಿ ರಾಜಿ ಇಲ್ಲವೇ ಇಲ್ಲ. ಶೇ.100 ರಷ್ಟು ಹಾಲಿನಲ್ಲಿಯೇ ಐಸ್‌ಕ್ರಿಂ ತಯಾರಿಸಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಕಂಪನಿ ಬೆಳೆಸಲು ಸಂಕಲ್ಪ ಮಾಡಿದ್ದೇವೆ. ತಂದೆಯ ಕನಸು ನನಸಾಗಿಸಲು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದರು.
ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಬಡವರಿಗೆ ಬೆಳಕಾಗಿ ನಿಂತಿರುವ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಸಾಧನೆ ದೊಡ್ಡದು. ಕಂಪನಿಯು ಗ್ರಾಮೀಣ ಭಾಗದ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಿದೆ. ಇದೀಗ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಕಿಂಗ್ ಐಸ್‌ಕ್ರೀಮ್ ಕೂಡ ದೊಡ್ಡ ಮಟ್ಟದ ಯಶಸ್ಸು ಸಾಧಿಸಲಿದೆ ಎಂದರು.
ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಎಂಡಿ ದೀಪಾ ಸಿದ್ನಾಳ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವಾ ಸಂಕೇಶ್ವರ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ